ಕಡಬ, ಜನವರಿ 07, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಇಲಾಖೆಯ ಕಾರ್ಯನಿರ್ವಹಣೆಗೆ (ಅ)ನೈತಿಕ ಪೊಲೀಸರ ಸತತ ಸವಾಲು ಎದುರಾಗುತ್ತಿದೆ. ಇತ್ತೀಚೆಗೆ ಕಾನೂನು ಕೈಗೆತ್ತಿಕೊಂಡು ಮಾನವ ಹಕ್ಕುಗಳಿಗೆ ಸವಾಲಾಗಿರುವ ಹಲವು ಘಟನೆಗಳ ಸಾಲಿಗೆ ಇದೀಗ ಮತ್ತೊಂದು ಸೇರ್ಪಡೆಯಾಗಿದ್ದು, ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೋರ್ವ ಯುವಕನನ್ನು ದುಷ್ಕರ್ಮಿಗಳು ಅರೆ ನಗ್ನಗೊಳಿಸಿ ಗಂಭೀರ ಹಾಗೂ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಮತ್ತೆ ಧರ್ಮ ರಕ್ಷಣೆಯ ಸಬೂಬು ನೀಡಿದ್ದಾರೆ.
ಹಲ್ಲೆಗೊಳಗಾದ ಯುವಕನನ್ನು ಸುಳ್ಯ ತಾಲೂಕು, ಸಂಪಾಜೆ ಗ್ರಾಮದ ಕಲ್ಲುಗುಂಡಿ ನಿವಾಸಿ ಹನೀಫ್ ಅವರ ಪುತ್ರ ಅಫೀದ್ (20) ಎಂದು ಹೆಸರಿಸಲಾಗಿದೆ. ಹಲ್ಲೆಗೊಳಗಾದ ಅಫೀದ್ ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಫಿರ್ಯಾದಿ ಸಲ್ಲಿಸಿದ್ದು, ವರ್ಷದ ಹಿಂದೆ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಕಡಬ ತಾಲೂಕು ಕುಕ್ಕೆಸುಬ್ರಹ್ಮಣ್ಯದ ವಿದ್ಯಾರ್ಥಿನಿಯನ್ನು ಪರಿಚಯವಾಗಿ, ಆಕೆಯನ್ನು ನೋಡಲು ಈ ಹಿಂದೆ 2-3 ಸಲ ಸುಬ್ರಹ್ಮಣ್ಯದ ಕೆಎಸ್‍ಆರ್‍ಟಿಸಿ ಬಸ್ಸು ನಿಲ್ದಾಣಕ್ಕೆ ಬಂದಿದ್ದು, ಆಕೆಯನ್ನು ಕಂಡು ಮಾತನಾಡಿಸಿಕೊಂಡು ಬರುತ್ತಿದ್ದು, ಗುರುವಾರವೂ (ಜ 5) ಸುಬ್ರಹ್ಮಣ್ಯ ಕೆಎಸ್‍ಆರ್‍ಟಿಸಿ ಬಸ್ಸು ನಿಲ್ದಾಣಕ್ಕೆ ಬಂದಿರುವುದಾಗಿದೆ. ಹುಡುಗಿ ಕಾಲೇಜಿನಿಂದ ಸಂಜೆ ಸುಮಾರು 4 ಗಂಟೆಗೆ ಬಸ್ಸು ನಿಲ್ದಾಣಕ್ಕೆ ಬಂದಾಗ ಅವಳೊಂದಿಗೆ ಮಾತನಾಡಿ ಆಕೆಗೆ ಚಾಕಲೇಟ್ ನೀಡುತ್ತಿದ್ದ ವೇಳೆ 2-3 ಮಂದಿ ಅಪರಿಚಿತರು ಬಂದು ಬಲಾತ್ಕಾರವಾಗಿ ಎಳೆದುಕೊಂಡು ಅಲ್ಲೇ ರಸ್ತೆಬದಿಯಲ್ಲಿ ನಿಂತಿದ್ದ ಜೀಪೆÇಂದರಲ್ಲಿ ಹಾಕಿದ್ದು, ಜೀಪಿನಲ್ಲಿದ್ದ ಐದಾರು ಮಂದಿ ಅಪರಿಚಿತರು ಜೀಪಿನಲ್ಲಿ ಸುಬ್ರಹ್ಮಣ್ಯ ಗ್ರಾಮದ ಕುಮಾರಧಾರ ಜಂಕ್ಷನ್ ಹತ್ತಿರವಿರುವ ಹಳೇ ಕಟ್ಟಡದ ಕೊಣೆಯೊಳಗೆ ಕರೆದುಕೊಂಡು ಹೋಗಿ ಕೂಡಿ ಹಾಕಿ ಸುಮಾರು 10-12 ಜನರು ಕೈಯಲ್ಲಿ ಮರದ ದೊಣ್ಣೆ ಮತ್ತು ಬೆತ್ತಗಳಿಂದ ಅಫೀದನ ತಲೆ, ಎರಡೂ ಕೈಕಾಲುಗಳಿಗೆ, ಭುಜಗಳಿಗೆ, ಬೆನ್ನು ಹಾಗೂ ದೇಹದ ಇತರ ಭಾಗಗಳಿಗೆ ಹೊಡೆದು ಜಖಂಗೊಳಿಸಿ, ಕೊಲ್ಲುವ ಉದ್ದೇಶದಿಂದ ಅವರಲ್ಲಿ ಒಬ್ಬನು ಒಂದು ಚಾಕುವಿನಿಂದ ತಿವಿಯಲು ಪ್ರಯತ್ನಿಸಿದಾಗ ಉಳಿದವರು ಅವನ್ನನ್ನು ತಡೆದು ಇನ್ನು ಮುಂದೆ, ನಮ್ಮ ಹುಡುಗಿಯರ ತಂಟೆಗೆ ಬಂದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ, ಬೇವರ್ಸೀಗಳೇ ಎಂದು ಬೈದು ಬೆದರಿಕೆಯೊಡ್ಡಿರುತ್ತಾರೆ.
ಹಲ್ಲೆ ಬಳಿಕ ಅಫೀದನ ಕೈಯಲ್ಲಿದ್ದ ಮೊಬೈಲ್, ಪರ್ಸ್ ಮತ್ತು ಚೀಲವನ್ನು ಕಸಿದುಕೊಂಡು ಹೋಗಿರುತ್ತಾರೆ. ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದವರ ಪೈಕಿ ಕೆಲವರ ಟೀ ಶರ್ಟ್ ಮೇಲೆ ಎಸ್.ಎಸ್.ಎಸ್.ಪಿ.ಯು. ಎಂದು ಬರೆದಿದ್ದು, ಅವುಗಳು ಬಿಳಿ ಬಣ್ಣದಲ್ಲಿ ನೀಲಿ ಗೆರೆಗಳುಳ್ಳ ಬಟ್ಟೆಗಳಾಗಿರುತ್ತವೆ ಎಂದು ಹಲ್ಲೆಗೊಳಗಾದ ಅಫೀದ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 02/2023 ಕಲಂ 323, 324, 307, 365, 143, 147 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ. ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಈ ಮಧ್ಯೆ ಹಲ್ಲೆಗೊಳಗಾದ ಯುವಕ ಅಫೀದನ ವಿರುದ್ದವೂ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರತಿ ದೂರು ದಾಖಲಾಗಿದ್ದು, ಅಫೀದ್ ಮಾತನಾಡಿದ ಹುಡುಗಿ ಅಪ್ರಾಪ್ತೆಯಾಗಿದ್ದು, ಆಕೆಯ ತಂದೆ ಈ ಬಗ್ಗೆ ಠಾಣೆಯಲ್ಲಿ ದೂರು ನೀಡಿದ್ದಾರೆ.
ತನ್ನ ಮಗಳು (17 ವರ್ಷ) ದ್ವಿತೀಯ ಪಿ ಯು ಸಿ ಯಲ್ಲಿ ವಿದ್ಯಾಬ್ಯಾಸ ಮಾಡಿಕೊಂಡಿರುತ್ತಾಳೆ. ಗುರುವಾರ (ಜ 5) ಸಂಜೆ ಸುಮಾರು 4:15ಕ್ಕೆ ಕಾಲೇಜು ಬಿಟ್ಟು ಮನೆಗೆ ಹಿಂತಿರುಗಲು ಸುಬ್ರಹ್ಮಣ್ಯ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿರುವ ಸಂದರ್ಭ ಹಪೀದ್ ಎಂಬಾತನು ನನ್ನ ಮಗಳನ್ನು ಪ್ರೀತಿಸುವಂತೆ ಒತ್ತಡ ಹಾಕಿ ಮಗಳ ದೂರವಾಣಿ ಸಂಖ್ಯೆಯನ್ನು ಕೇಳಿದಾಗ ಅವಳು ನಿರಾಕರಿಸಿದಾಗ ಅವಳ ಕೈ ಹಿಡಿದು ಎಳೆದು ಮಾನಭಂಗಕ್ಕೆ ಯತ್ನಿಸಿ ಬೆದರಿಕೆ ಹಾಕಿರುತ್ತಾನೆ. ಆಕೆ ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಬಂದಿದ್ದು ಆಕೆ ವಿಚಲಿತಳಾದವಳನ್ನು ಕಂಡು ವಿಚಾರಿಸಿದಾಗ ಭಯಗೊಂಡು ತಡವಾಗಿ ಈ ಬಗ್ಗೆ ತಿಳಿಸಿರುತ್ತಾಳೆ ಎಂದು ವಿದ್ಯಾರ್ಥಿನಿಯ ತಂದೆ ಪೊಲೀಸರಿಗೆ ನೀಡಿದ ಫಿರ್ಯಾದಿಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 03/2023 ಕಲಂ 354(ಬಿ), 506 ಐಪಿಸಿ, ಕಲಂ 12 ಪೆÇೀಕ್ಸೋ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment