ನಮೋ ಬ್ರದರ್ಸ್ ತಂಡಕ್ಕೆ ಗುಡ್ ಲಕ್ ಟ್ರೋಫಿ, ಬಿ ಎಫ್ ಸಿ ಬೆಂಗ್ರೆ ತಂಡ ರನ್ನರ್ಸ್
ಬಂಟ್ವಾಳ, ಜನವರಿ 30, 2023 (ಕರಾವಳಿ ಟೈಮ್ಸ್) : ಸಾಮಾಜಿಕ ಸಾಮರಸ್ಯ ಇಂದಿನ ಜರೂರತ್ತಾಗಿದ್ದು, ಸಮಾಜದ ಸಾಮರಸ್ಯ ಕಾಪಾಡಿಕೊಂಡು ಬರುವುದು ಯುವ ಸಮೂಹದ ಜವಾಬ್ದಾರಿಯಾಗಿದೆ. ಕ್ರೀಡಾಂಗಣದಲ್ಲಿ ಜಾತಿ-ಧರ್ಮ, ಪಕ್ಷ-ಪಂಗಡ ಮರೆತು ಬೆರೆಯುವ ಯುವಕರಿಂದ ಸಾಮಾಜಿಕ ಸಾಮರಸ್ಯ ಹಾಗೂ ದೇಶದ ಸೌಹಾರ್ದತೆ ಉಳಿಸಿ ಬೆಳೆಸಲು ಸಾಧ್ಯವಿದೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಹೇಳಿದರು.
ಗುಡ್ ಲಕ್ ಕ್ರಿಕೆಟರ್ಸ್ ಪಾಣೆಮಂಗಳೂರು ಇದರ ಆಶ್ರಯದಲ್ಲಿ ಆಲಡ್ಕ ಮೈದಾನದಲ್ಲಿ ಭಾನುವಾರ ನಡೆದ ಗುಡ್ ಲಕ್ ಟ್ರೋಫಿ-2023 ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕ್ರೀಡೆ ಎಂಬುದು ಯುವಕರ ಆರೋಗ್ಯಕ್ಕೆ ಮಹತ್ವಪೂರ್ಣವಾಗಿರುವಂತೆ ಸಾಮರಸ್ಯ ಎಂಬುದು ದೇಶದ ಆರೋಗ್ಯಪೂರ್ಣ ಬೆಳವಣಿಗೆಗೆ ಅತೀ ಅಗತ್ಯ ಎಂದರು.
ನಮೋ ಬ್ರದರ್ಸ್ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿ ಗುಡ್ ಲಕ್ ಟ್ರೋಫಿಯನ್ನು ಪಡೆದುಕೊಂಡಿತು. ಬಿ ಎಫ್ ಸಿ ಬೆಂಗರೆ ತಂಡವು ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು. ಭೂಯಾ ಆಲಡ್ಕ ತಂಡವು ಶಿಸ್ತಿನ ತಂಡ ಪ್ರಶಸ್ತಿಗೆ ಪಾತ್ರವಾಯಿತು. ನಮೋ ತಂಡದ ಸೋನು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರೆ, ಸಚಿನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಹಾಗೂ ಸಚಿನ್ ಬೋಳಂಗಡಿ ಉತ್ತಮ ಗೂಟ ರಕ್ಷಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಬೆಂಗರೆ ತಂಡದ ಇಂತಿಯಾಝ್ ಉತ್ತಮ ದಾಂಡುಗಾರ, ಇಕ್ಬಾಲ್ ಉತ್ತಮ ದಾಳಿಗಾರ ಹಾಗೂ ಹಫೀಝ್ ಬೆಂಗರೆ ಉತ್ತಮ ಕ್ಷೇತ್ರ ರಕ್ಷಕ ಪ್ರಶಸ್ತಿಗಳನ್ನು ಪಡೆದುಕೊಂಡರು.
ಮುಖ್ಯ ಅತಿಥಿಗಳಾಗಿ ನರಿಕೊಂಬು ಗ್ರಾ ಪಂ ಸದಸ್ಯ ರಿಯಾಝ್ ನೆಹರುನಗರ, ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶರೀಫ್ ಭೂಯಾ, ಅಬ್ದುಲ್ ರಹಿಮಾನ್ ಮೋನು ಮೆಲ್ಕಾರ್, ರವಿ ಚಿತ್ರ ಜ್ಯುವೆಲ್ಲರ್ಸ್, ರಫೀಕ್ ಮೆಜೆಸ್ಟಿಕ್, ನಿಸಾರ್ ಅಕ್ಕರಂಗಡಿ, ರಿಝ್ವಾನ್ ಪಿ ಜೆ ಅಕ್ಕರಂಗಡಿ, ಗುಡ್ ಲಕ್ ಅಧ್ಯಕ್ಷ ಹನೀಫ್ ಸಿ ಪಿ, ಸಚಿನ್ ಬೋಳಂಗಡಿ ಮೊದಲಾದವರು ಭಾಗವಹಿಸಿದ್ದರು.
ಇಮ್ರಾನ್ ಗುಡ್ ಲಕ್ ಸ್ವಾಗತಿಸಿ, ವಂದಿಸಿದರು. ಪತ್ರಕರ್ತ ಪಿ ಎಂ ಅಶ್ರಫ್ ಪಾಣೆಮಂಗಳೂರು ಕಾರ್ಯಕ್ರಮ ನಿರೂಪಿಸಿದರು. ಮಿಕ್ದಾದ್ ವೀಕ್ಷಕ ವಿವರಣೆ ನೀಡಿದರು. ಸಿನಾನ್ ಅಂಕಪಟ್ಟಿ ನಿರ್ವಹಣೆ ಮಾಡಿದರು.
0 comments:
Post a Comment