ಬಂಟ್ವಾಳ, ಜನವರಿ 12, 2023 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ನೇತ್ರಾವತಿ ಹಳೇ ಸೇತುವೆಯಲ್ಲಿ ಬುಧವಾರ ಮಧ್ಯರಾತ್ರಿ ವೇಳೆಗೆ ದ್ವಿಚಕ್ರ ವಾಹನ ಸೇತುವೆಯ ಗೇಡರಿಗೆ ಡಿಕ್ಕಿ ಹೊಡೆದ ಸ್ಥಿತಿಯಲ್ಲಿ ಕಂಡು ಬಂದ ಬಳಿಕ ನೇತ್ರಾವತಿ ನೀರಿನಲ್ಲಿ ಮೃತದೇಹ ಪತ್ತೆಯಾದ ಘಟನೆ ಸಂಭವಿಸಿದ್ದು, ಮರಣದ ಬಗ್ಗೆ ಸಂಶಯ ವ್ಯಕ್ತಪಡಿಸಿ ಮೃತನ ಕುಟುಂಬಸ್ಥರು ಗುರುವಾರ ಬೆಳಿಗ್ಗೆ ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾರೆ.
ಮೃತ ವ್ಯಕ್ತಿಯನ್ನು ಸಜಿಪನಡು ಗ್ರಾಮದ ಸಾನದ ಮನೆ ನಿವಾಸಿ ನಾಗೇಶ ಪೂಜಾರಿ ಅವರ ಪುತ್ರ ರಾಜೇಶ (38) ಎಂದು ಹೆಸರಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಗೆ ದೂರು ನೀಡಿರುವ ಮೃತರ ಭಾವ ಮಂಗಳೂರು ತಾಲೂಕು, ಅರ್ಕುಳ ಗ್ರಾಮದ ಫರಂಗಿಪೇಟೆ ಸಮೀಪದ ಕುಚ್ಚೂರು ನಿವಾಸಿ ದಯಾನಂದ ಅವರು, ಜನವರಿ 12 ರ ಗುರುವಾರ ಬೆಳಗ್ಗೆ 5 ಗಂಟೆ ವೇಳೆಗೆ ನಾನು ಮನೆಯಲ್ಲಿದ್ದ ಸಮಯ ನನ್ನ ದೂರದ ಸಂಬಂಧಿ ಧೀರಜ್ ಎಂಬವರು ಕರೆ ಮಾಡಿ ನಿನ್ನ ಹೆಂಡತಿಯ ತಮ್ಮನಾದ ರಾಜೇಶ ಅವರ ಸ್ಟೂಟರ್ (ಕೆಎ 70 ಇ 6213) ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಗೂಡಿನಬಳಿ ನೇತ್ರಾವತಿ ಸೇತುವೆಯ ಎಡಭಾಗದ ಸುರಕ್ಷತಾ ಪಟ್ಟಿಗೆ ಮಗ್ಗಲಾಗಿ ಬಿದ್ದಿರುವ ವಿಚಾರವನ್ನು ತಿಳಿಸಿರುತ್ತಾನೆ.
ಮಾಹಿತಿ ಬಂದ ಪ್ರಕಾರ ದಯಾನಂದ ಅವರು ಸ್ಥಳಕ್ಕೆ ಬಂದು ಅವರ ಮಾವ, ಮೃತ ರಾಜೇಶನ ತಂದೆ ನಾಗೇಶ ಪೂಜಾರಿ ಅವರಿಗೆ ಕರೆ ಮಾಡಿ ವಿಚಾರಿಸಿದಲ್ಲಿ ನಿನ್ನೆ ಬೆಳಿಗ್ಗೆ 8.30 ಗಂಟೆಯ ಸುಮಾರಿಗೆ ಸೆಂಟ್ರಿಂಗ್ ಕೆಲಸದ ನಿಮಿತ್ತ ಮನೆಯಿಂದ ಹೋಗಿದ್ದು ವಾಪಾಸ್ಸು ಬಂದಿರುವುದಿಲ್ಲ ಎಂದು ತಿಳಿಸಿದ್ದಾರೆ. ಬಳಿಕ ನೇತ್ರಾವತಿ ನದಿಯಲ್ಲಿ ಹುಡುಕಾಟ ನಡೆಸಿದಾಗ ನದಿ ನೀರಿನಲ್ಲಿ ಬೆಳಿಗ್ಗೆ 10.45 ಗಂಟೆಗೆ ರಾಜೇಶನ ಮೃತ ದೇಹ ಪತ್ತೆಯಾಗಿದೆ. ಮೃತ ರಾಜೇಶನ ಮರಣದಲ್ಲಿ ಸಂಶಯವಿದ್ದು ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಗೂಡಿನಬಳಿ ಪರಿಸರದ ಸ್ಥಳೀಯರ ಪ್ರಕಾರ ಬುಧವಾರ ಮಧ್ಯ ರಾತ್ರಿ ವೇಳೆಗೆ ಘಟನೆ ಸಂಭವಿಸಿದೆ ಎನ್ನಲಾಗಿದ್ದು, ತಡ ರಾತ್ರಿ ಸುಮಾರು 1.30 ಗಂಟೆ ವೇಳೆಗೆ ಸೇತುವೆ ಗೇಡರಿಗೆ ಡಿಕ್ಕಿ ಹೊಡೆದ ಸ್ಥಿತಿಯಲ್ಲಿ ದ್ವಿಚಕ್ರ ವಾಹನ ಇರುವುದನ್ನು ಸ್ಥಳೀಯರು ಗಮನಿಸಿ, ಪೊಲೀಸರಿಗೂ ಮಾಹಿತಿ ನೀಡಿ, ಸ್ಥಳದಲ್ಲಿ ಕೆಲ ಕಾಲ ವ್ಯಕ್ತಿಗಳಿದ್ದಾರೆಯೇ ಎಂದು ಹುಡುಕಾಟ ನಡೆಸಿದ್ದಾರೆ. ಈ ಬಗ್ಗೆ ಸ್ಥಳೀಯರು ಮೊಬೈಲ್ ವೀಡಿಯೋ ಚಿತ್ರೀಕರಣ ಕೂಡಾ ಮಾಡಿದ್ದು, ಅದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕತ್ತಲಾಗಿದ್ದುದರಿಂದ ಹೆಚ್ಚಿನ ಕಾರ್ಯಾಚರಣೆ ಸಾಧ್ಯವಾಗದೆ ಸ್ಥಳದಿಂದ ತೆರಳಿದ್ದರು. ಬೆಳಗಾದ ಬಳಿಕ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಬಂದಿದ್ದು, ಬಳಕ ಮತ್ತೆ ಸ್ಥಳೀಯರು ನದಿಯಲ್ಲಿ ಹುಡುಕಾಟ ಆರಂಭಿಸಿದ್ದಾರೆ. ಹುಡುಕಾಟದ ಬಳಿಕ ಸ್ಥಳೀಯರಾದ ಇಕ್ಬಾಲ್ (ಬಾಬಿ), ಮುಹಮ್ಮದ್ ಮಮ್ಮು, ಹಾರಿಶ್ (ವೀರ) ಹಾಗೂ ಇಬ್ರಾಹಿಂ ಅವರು ಮೃತದೇಹವನ್ನು ಮೇಲಕ್ಕೆತ್ತುವಲ್ಲಿ ಸಫಲರಾಗಿದ್ದಾರೆ. ಅಪಘಾತದ ಬಳಿಕ ಸೇತುವೆಯ ಎರಡು ಭೀಮ್ ಗಳ ಮಧ್ಯೆ ಇರುವ ತೆರೆದ ಜಾಗದ ಮೂಲಕ ರಾಜೇಶ ನದಿಗೆ ಬಿದ್ದಿರುವ ಬಗ್ಗೆ ಸ್ಥಳೀಯರು ಶಂಕಿಸಿದ್ದಾರೆ. ಕೆಲ ವರ್ಷಗಳ ಹಿಂದೆಯೂ ಇದೇ ರೀತಿಯ ಘಟನೆಯೊಂದು ಇದೇ ಸೇತುವೆಯಲ್ಲಿ ನಡೆದಿತ್ತು ಎನ್ನುವ ಸ್ಥಳೀಯರು, ರಾತ್ರಿ ವೇಳೆ ಬೈಕ್ ಸವಾರನೋರ್ವ ಸೇತುವೆಯಲ್ಲಿ ಬರುತ್ತಿದ್ದ ಪಾದಚಾರಿ ವ್ಯಕ್ತಿಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸೇತುವೆಯ ಇದೇ ತೆರೆದ ಜಾಗದ ಮೂಲಕ ನೇರವಾಗಿ ಸೇತುವೆಯಿಂದ ಕೆಳಕ್ಕೆ ನದಿಗೆ ಬಿದ್ದಿದ್ದ. ಆದರೆ ಅದೃಷ್ಟವಶಾತ್ ವ್ಯಕ್ತಿ ಈಜುಪಟುವಾಗಿದ್ದರಿಂದ ನದಿ ನೀರಿನಲ್ಲಿ ಸ್ವತಃ ಈಜಿ ಮೇಲಕ್ಕೆ ಬಂದಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಮೃತದೇಹವನ್ನು ಬಳಿಕ ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ ಮರಣೋತ್ತರ ಪರೀಕ್ಷೆಗೆ ಕ್ರ ಕೈಗೊಳ್ಳಲಾಗಿದೆ. ಘಟನೆ ಬಗ್ಗೆ ಬಂಟ್ವಾಳ ನಗರ ಠಾಣಾ ಅಪರಾಧ ಕ್ರಮಾಂಕ 01/2023 ಕಲಂ 174 (3) ಹಾಗೂ (iv) ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment