ಕೆಪಿಸಿಸಿ ಪ್ರಜಾಧ್ವನಿ ಯಾತ್ರೆಗೆ ಅಸಂಘಟಿತ ಕಾರ್ಮಿಕರು ಪೂರ್ಣ ಬೆಂಬಲಿಸುವಂತೆ ಮನವಿ
ಮಂಗಳೂರು, ಜನವರಿ 19, 2023 (ಕರಾವಳಿ ಟೈಮ್ಸ್) : ಕಾಂಗ್ರೆಸ್ ನಾಯಕರು ಇದೀಗ ರಾಜ್ಯದ ಜನತೆಗೆ ನೀಡುತ್ತಿರುವ ಆಶ್ವಾಸನೆಗಳು, ಮಹತ್ವಪೂರ್ಣ ಘೋಷಣೆಗಳು ಅದು ಕೇವಲ ಘೋಷಣೆಗಳಲ್ಲ, ಕೇವಲ ಆಶ್ವಾಸನೆಗಳಲ್ಲ. ಬದಲಾಗಿ ಕಾಂಗ್ರೆಸ್ ಜನರಿಗೆ ಎಂದಿಗೂ ವಿಶ್ವಾಸಪೂರ್ಣ ಯೋಜನೆಗಳನ್ನು ನೀಡಲು ಸದಾ ಬದ್ದವಾಗಿದೆ ಎಂಬ ಬದ್ದತೆಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಕೇವಲ ಒಂದು ರಾಜಕೀಯ ಉದ್ದೇಶವನ್ನಿಟ್ಟುಕೊಂಡು ಮಾತ್ರ ಈ ದೇಶದಲ್ಲಿ ಎಂದಿಗೂ ಕಾರ್ಯಚಟುವಟಿಕೆಗಳನ್ನು ಕೈಗೊಂಡಿಲ್ಲ. ದೇಶದ ಬಡ ಜನರ ನಾಡಿ ಮಿಡಿತ ಅರಿತುಕೊಂಡು ಸೇವಾ ಮನೋಭಾವವನ್ನು ಬೆಳೆಸಿಕೊಂಡು ಅಸ್ತಿತ್ವ ಉಳಿಸಿಕೊಂಡಿರುವ ಏಕೈಕ ರಾಜಕೀಯ ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ. ಕಾಂಗ್ರೆಸ್ ಪಕ್ಷವನ್ನು ಒಂದು ಬಾರಿ ಜನ ತಿರಸ್ಕರಿಸಿದರೆ ಈ ದೇಶದಲ್ಲಿ ಉಂಟಾಗುತ್ತಿರುವ ಗಂಡಾಂತರಗಳಿಗೆ ಪ್ರತೀ ಬಾರಿಯೂ ಕಾಲವೇ ಸಾಕ್ಷಿಯಾಗುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭ ಈ ದೇಶದ ಜನತೆಗೆ ಇದ್ದ ನೆಮ್ಮದಿ ಕಾಂಗ್ರೆಸ್ಸೇತರ ಸರಕಾರಗಳು ಅಸ್ತಿತ್ವಕ್ಕೆ ಬಂದ ಯಾವುದೇ ಸಂದರ್ಭದಲ್ಲೂ ಉಳಿದಿರಲಿಲ್ಲ. ಈ ಕಾರಣಕ್ಕಾಗಿ ಮತ್ತೆ ದೇಶದ ಜನ ಕಾಂಗ್ರೆಸ್ ಪಕ್ಷವನ್ನೇ ಮರಳಿ ಅಧಿಕಾರಕ್ಕೆ ತರುವ ಕೆಲಸ ಯಾವತ್ತೂ ಮಾಡಿದ್ದಾರೆ. ಪ್ರಸ್ತುತ ಈ ಬಾರಿಯೂ ಅಂತಹದೇ ಸನ್ನಿವೇಶ ನಿರ್ಮಾಣವಾಗಿದೆ. ಕಾಂಗ್ರೆಸ್ ಪಕ್ಷದಿಂದ ಅಧಿಕಾರ ಕಬಳಿಸಬೇಕು ಎಂಬ ಏಕೈಕ ಉದ್ದೇಶ ಮಾತ್ರ ಇಟ್ಟುಕೊಂಡು ದೇಶದ ಜನತೆಗೆ ಅದೇನೋನೋ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರ ಗದ್ದುಗೇರಿದವರು ಚುನಾವಣಾ ಸಂದರ್ಭ ನೀಡಿದ ಭರವಸೆಯನ್ನು ಈಡೇರಿಸಲು ಸಾಧ್ಯವಾಗಲಿಲ್ಲ.
ರಾಜ್ಯದಲ್ಲೂ ಕಳೆದ ಬಾರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಪೂರ್ಣ 5 ವರ್ಷಗಳ ಕಾಲ ಯಾವುದೇ ಭ್ರಷ್ಟಾಚಾರ, ಕಳಂಕ ರಹಿತ ಆಡಳಿತ ನಡೆಸಿ ರಾಜ್ಯವನ್ನು ಸುಭಿಕ್ಷತೆಯತ್ತ ಮುನ್ನಡೆಸಿತ್ತು. ಕಾಂಗ್ರೆಸ್ ಆಡಳಿತ ಜನತೆಗೆ ಯಾವ ರೀತಿಯಲ್ಲಿ ಅನುಕೂಲ ಆಗಿತ್ತು ಎಂಬುದು ಇದೀಗ ಜನತೆಗೆ ಸಂಪೂರ್ಣ ಅರಿವಾದಂತಿದ್ದು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಚುನಾವಣೆ ಸಂದರ್ಭ ಪ್ರಣಾಳಿಕೆಯಲ್ಲಿ ನೀಡಲಾಗಿದ್ದ ಭರವಸೆಗಳನ್ನು ಹತ್ತಿರ ಹತ್ತಿರ ನೂರು ಶೇಕಡಾದಷ್ಟು ಈಡೇರಿಸಿ ಜನರಿಗಾಗಿ ಅಧಿಕಾರ ಚಲಾಯಿಸಿತ್ತು.
ಜಾತಿ-ಮತ-ಪಂಥ-ವರ್ಗ ಬೇಧ ರಹಿತವಾಗಿ ಸುಭಿಕ್ಷಾ ಆಡಳಿತಕ್ಕಾಗಿ ಜನ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಅನಿವಾರ್ಯತೆಯನ್ನು ಅರಿತುಕೊಂಡಿದ್ದಾರೆ. ಮತದಾನದ ಮೂಲಕ ಈ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ಜನ ಕಾತರರಾಗಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರಾದ ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಬಿ ಕೆ ಹರಿಪ್ರಸಾದ್ ಸಹಿತ ಎಲ್ಲ ಹಿರಿಯ ನಾಯಕರ ಒಗ್ಗಟ್ಟಿನ ನೇತೃತ್ವದಲ್ಲಿ ರಾಜ್ಯವ್ಯಾಪಿ ಸಂಚಾರ ಮಾಡುತ್ತಿರುವ ಪ್ರಜಾಧ್ವನಿ ಯಾತ್ರೆಯು ಜನವರಿ 22 ರ ಭಾನುವಾರ ಮಂಗಳೂರಿನತ್ತ ಬರುತ್ತಿದ್ದು, ಸಂಜೆ 3 ಗಂಟೆಗೆ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಬೃಹತ್ ಸಮಾವೇಶದಲ್ಲಿ ಈ ಜಿಲ್ಲೆಯ ಎಲ್ಲಾ ಸಹೃದಯಿ ನಾಗರಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮುಂದಿನ ದಿನಗಳು ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಸುಖೀ ದಿನಗಳಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ಯಶಸ್ವಿಗೊಳಿಸುವಂತೆ ಪ್ರಕಟಣೆಯ ಮೂಲಕ ಅವರು ಕೋರಿದ್ದಾರೆ.
0 comments:
Post a Comment