ಬೆಳ್ತಂಗಡಿ, ಜನವರಿ 01, 2023 (ಕರಾವಳಿ ಟೈಮ್ಸ್) : ತಾಲೂಕಿನ ಗರ್ಡಾಡಿ ಗ್ರಾಮದ ಮೋಗೆರಡ್ಕ ಎಂಬಲ್ಲಿ ಇನೋವ ಕಾರು ಮತ್ತು ಬಸ್ಸು ನಡುವೆ ಭಾನುವಾರ ಬೆಳಿಗ್ಗೆ ನಡೆದ ಭೀಕರ ಅಪಘಾತದಲ್ಲಿ ಸಾಮಾಜಿಕ, ಧಾರ್ಮಿಕ ಮುಖಂಡ, ಗುರುಪುರ-ಕೈಕಂಬ ಸಮೀಪದ ಗಂಜಿಮಠ-ಸೂರಲ್ಪಾಡಿ ನಿವಾಸಿ ಅಬ್ದುಲ್ ಹಮೀದ್ ಅಲಿಯಾಸ್ ನೌಶಾದ್ ಹಾಜಿ ಸೂರಲ್ಪಾಡಿ (40) ಅವರ ಸಹಿತ ಕಾರು ಚಾಲಕ ಉಲಾಯಿಬೆಟ್ಟು ನಿವಾಸಿ ಮುಹಮ್ಮದ್ ಮುಶ್ರಫ್ (21) ಅವರು ದಾರುಣವಾಗಿ ಮೃತಪಟ್ಟಿದ್ದಾರೆ.
ನೌಶಾದ್ ಹಾಜಿ ಅವರು ಮುಸ್ಲಿಂ ಸಮುದಾಯದ ವಿವಾಹ ಪ್ರಾಯ ಕಳೆದರೂ ವಿವಾಹವಾಗದ ಬಡ ಹೆಣ್ಣು ಮಕ್ಕಳ ಮದುವೆ ನೆರವೇರಿಸುವ ಯೋಜನೆಯಾದ “ನಂಡೆ ಪೆಂಙಳ್” ಎಂಬ ವಿನೂತನ ಕಾರ್ಯಕ್ರಮದ ಮೂಲಕ ಜಿಲ್ಲೆಯಾದ್ಯಂತ ತೀವ್ರ ಸಂಚಲನ ಮೂಡಿಸಿ ಚಿರಪರಿಚಿತರಾಗಿದ್ದರು. ಅಲ್ಲದೆ ವಿವಿಧ ಧಾರ್ಮಿಕ, ಸಾಮಾಜಿಕ ಸೇವಾ ಕಾರ್ಯಕ್ರಮಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಎಲ್ಲರೊಂದಿಗೆ ನಗುಮುಖದಿಂದ ವ್ಯವಹರಿಸುವ ಸೌಮ್ಯ ಸ್ವಭಾವ ಮೈಗೂಡಿಸಿಕೊಂಡಿದ್ದು, ಧಾರ್ಮಿಕ, ರಾಜಕೀಯ, ಸಾಮುದಾಯಿಕ, ಸಾಂಘಿಕ ನಾಯಕರುಗಳ ನಿಕಟ ಬಾಂಧವ್ಯವನ್ನು ಇಟ್ಟುಕೊಂಡಿದ್ದರು.
ನೌಶಾದ್ ಹಾಜಿ ಸೂರಲ್ಪಾಡಿ ಅವರ ಅಕಾಲಿಕ ಅಪಘಾತಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿರುವ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಎಸ್ಕೆಎಸ್ಸೆಸ್ಸೆಫ್ ಮುಖಂಡ ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು, ಮಾಜಿ ಸಚಿವ ಬಿ ರಮಾನಾಥ ರೈ, ಶಾಸಕ ಯು ಟಿ ಖಾದರ್, ಮಾಜಿ ಶಾಸಕ ಬಿ ಎ ಮೊಯಿದಿನ್ ಬಾವಾ, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಸಜಿಪಮುನ್ನೂರು ಗ್ರಾ ಪಂ ಮಾಜಿ ಅಧ್ಯಕ್ಷ ಯೂಸುಫ್ ಕರಂದಾಡಿ, ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಜಿ ಮುಹಮ್ಮದ್ ಹನೀಫ್ ಗೋಳ್ತಮಜಲು, ಉಪಾಧ್ಯಕ್ಷ ಹಾಜಿ ಪಿ ಎಸ್ ಅಬ್ದುಲ್ ಹಮೀದ್ ನೆಹರುನಗರ, ಮುಡಿಪು ಬ್ಲಾಕ್ ಕಾಂಗ್ರೆಸ್ ವಕ್ತಾರ ಅಬ್ದುಲ್ ರಝಾಕ್ ಕುಕ್ಕಾಜೆ, ಪುದು ಗ್ರಾ ಪಂ ಸದಸ್ಯ ಹಾಶೀರ್ ಪೇರಿಮಾರ್, ಉದ್ಯಮಿಗಳಾದ ಹಂಝ ಆನಿಯಾ ಬಸ್ತಿಕೋಡಿ, ಮುಹಮ್ಮದ್ ಹಾಜಿ ಸಾಗರ್, ಅಬ್ದುಲ್ ಲತೀಫ್ ಪಿ ಎಸ್ ನೆಹರುನಗರ, ಎಸ್ಕೆಎಸ್ಸೆಸ್ಸೆಫ್ ಪಾಣೆಮಂಗಳೂರು ಶಾಖಾಧ್ಯಕ್ಷ ಮುಹಮ್ಮದ್ ಹನೀಫ್ ಹಾಸ್ಕೋ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ನೆಹರುನಗರ, ಸಹಿತ ಹಲವು ಗಣ್ಯರು, ವ್ಯಕ್ತಿಗಳು, ಸಂಘ-ಸಂಸ್ಥೆಗಳ ಪ್ರಮುಖರು ನೌಶಾದ್ ಹಾಜಿ ನಿಧನಕ್ಕೆ ತೀವ್ರ ಸಂತಾಪ ಹಾಗೂ ಶೋಕ ವ್ಯಕ್ತಪಡಿಸಿದ್ದಾರೆ.
0 comments:
Post a Comment