ಕರಾವಳಿ ಟೈಮ್ಸ್ ಇಂಪ್ಯಾಕ್ಟ್
ಬಂಟ್ವಾಳ, ಜನವರಿ 23, 2023 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಹೃದಯ ಪಟ್ಟಣ ಬಿ ಸಿ ರೋಡಿನಲ್ಲಿ ಸುಂದರೀಕರಣ ಕಾಮಗಾರಿಯ ಭಾಗವಾಗಿ ಇಲ್ಲಿನ ಫ್ಲೈ ಓವರ್ ಪಿಲ್ಲರ್ ಗಳಿಗೆ ಬಣ್ಣ ತುಂಬುವ ಹಾಗೂ ಚಿತ್ರ ಬಿಡಿಸುವ ಕೆಲಸ ಅಂತಿಮ ಹಂತದಲ್ಲಿ ಸಾಗುತ್ತಿರುವ ಮಧ್ಯೆ ಬಣ್ಣ ತುಂಬುವ ಹಾಗೂ ಚಿತ್ರ ಬಿಡಿಸುವ ಪಿಲ್ಲರಿನ ಅಡಿಭಾಗದಲ್ಲೇ ಅರ್ಧದಲ್ಲಿ ನಿಂತಿರುವ ರಸ್ತೆ ಕಾಮಗಾರಿ ಪತ್ರಿಕೆ ಸಚಿತ್ರ ವರದಿ ಪ್ರಕಟಿಸಿದ ಹಿನ್ನಲೆಯಲ್ಲಿ ಕೊನೆಗೂ ಎಚ್ಚೆತ್ತುಕೊಂಡು ಹೆದ್ದಾರಿ ಇಲಾಖಾಧಿಕಾರಿಗಳು ಇದೀಗ ಅರ್ಧ ಬಾಕಿಯಾಗಿರುವ ರಸ್ತೆಗಳಿಗೆ ಡಾಮರೀಕರಣ ಕಾಮಗಾರಿ ಕೈಗೊಂಡಿದ್ದಾರೆ.
ಮಂಗಳೂರು ಕಡೆ ತೆರಳುವ ಬಸ್ಸುಗಳು ನಿಲ್ಲುವ ಜಾಗದಲ್ಲಿ ಬಿ ಸಿ ರೋಡು ಖಾಸಗಿ ಬಸ್ಸು ನಿಲ್ದಾಣಕ್ಕೆ ತಿರುವು ಪಡೆಯುವ ಜಾಗದಲ್ಲಿ ಅರ್ಧ ರಸ್ತೆ ಡಾಮರು ಹಾಗೂ ಕಾಂಕ್ರಿಟೀಕರಣ ಇಲ್ಲದೆ ಸೊರಗಿ ನಿಂತಿತ್ತು. ಜನರಿಗೆ ಉಪಯುಕ್ತವಾಗುವ ಕೆಲಸ ಮುಗಿದ ಮೇಲೆ ಪೈಂಟಿಂಗ್ ಹಾಗೂ ಇತರ ಅಲಂಕಾರಿಕ ಕಾಮಗಾರಿಗಳು ಸರ್ವೇ ಸಾಮಾನ್ಯವಾಗಿ ನಡೆಯುತ್ತದೆ. ಆದರೆ ಬಿ ಸಿ ರೋಡಿನಲ್ಲಿ ಜನರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮುಂಚೆಯೇ ಅಲಂಕಾರಿಕ ಕೆಲಸ ಆರಂಭಗೊಂಡಿರುವ ಬಗ್ಗೆ ಸಾರ್ವಜನಿಕರು ಪ್ರಶ್ನಿಸುತ್ತಿರುವ ಬಗ್ಗೆ ಪತ್ರಿಕೆ ಸಚಿತ್ರ ವರದಿ ಪ್ರಕಟಿಸಿ ಸಂಬಂಧಪಟ್ಟ ಇಲಾಖಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಎಚ್ಚರಿಸಿತ್ತು.
ಇದೀಗ ಡಾಮರೀಕರಣ ಕಾಮಗಾರಿಯಿಂದಾಗಿ ಬಿ ಸಿ ರೋಡು ಪೇಟೆಯ ಒಂದು ಸಮಸ್ಯೆ ಪರಿಹಾರವಾದಂತಾಗಿದ್ದು, ಇನ್ನೂ ಉಳಿದಿರುವ ಹಲವು ಸಮಸ್ಯೆಗಳಿಗೆ ಶೀಘ್ರವಾಗಿ ಪರಿಹಾರ ಕಲ್ಪಿಸುವಂತೆ ಜನ ಆಗ್ರಹಿಸಿದ್ದಾರೆ. ಸರಕಾರಿ ಹಾಗೂ ಖಾಸಗಿ ಬಸ್ಸು ನಿಲುಗಡೆಗೆ ಸೂಕ್ತ ಜಾಗ ಗುರುತಿಸುವಿಕೆ, ಖಾಸಗಿ ವಾಹನಗಳ ಹಾಗೂ ಅಟೋ ರಿಕ್ಷಾಗಳ ಪಾರ್ಕಿಂಗಿಗೆ ಸೂಕ್ತ ಸ್ಥಳ ಗುರುತಿಸುವಿಕೆ, ಪ್ರಯಾಣಿಕರಿಗೆ ತಂಗಲು ಯೋಗ್ಯ ಸ್ಥಳಾವಕಾಶ ಒದಗಿಸುವುದು, ಮಳೆಗಾಲದಲ್ಲಿ ಮಳೆ ನೀರು ರಸ್ತೆಯಲ್ಲಿ ಹರಿದು ಹೋಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು, ಹೆದ್ದಾರಿ ಬದಿ ಅಕ್ರಮ ಹಾಗೂ ಅನಧಿಕೃತ ಅಂಗಡಿ-ವ್ಯಾಪಾರಸ್ಥರು ಬೀಡು-ಬಿಟ್ಟು ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿರುವುದನ್ನು ನಿಯಂತ್ರಿಸುವುದು, ಬೀದಿ ಬದಿ ವ್ಯಾಪಾರಿಗಳಿಗೆ ಸ್ಥಳೀಯಾಡಳಿತದಿಂದ ನೀಡಲಾಗಿರುವ ಗುರುತು ಪತ್ರದಂತೆ ಅವರಿಗೆ ಸೂಕ್ತ ಸ್ಥಳ ಗುರುತಿಸುವುದು, ಹೆದ್ದಾರಿ ಅಗಲೀಕರಣಕ್ಕೆ ಆಹುತಿಯಾಗುವ ಕಟ್ಟಡಗಳ ಮಾಲಕರಿಗೆ ಪರಿಹಾರ ನೀಡಿದರೂ ಅದಿನ್ನೂ ಪೂರ್ಣ ಪ್ರಮಾಣದಲ್ಲಿ ತೆರವುಗೊಳ್ಳದೆ ಇರುವುದನ್ನು ತಕ್ಷಣ ತೆರವುಗೊಳಿಸಿ ಅಭಿವೃದ್ದಿ ಕಾಮಗಾರಿಗಳಿಗೆ ವೇಗ ನೀಡುವುದು ಇವೇ ಮೊದಲಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಸಾರ್ವಜನಿಕರು ಸಂಬಂಧಪಟ್ಟ ಇಲಾಖಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಆಗ್ರಹಿಸಿದ್ದಾರೆ.
0 comments:
Post a Comment