ಬಂಟ್ವಾಳ, ಜನವರಿ 12, 2023 (ಕರಾವಳಿ ಟೈಮ್ಸ್) : ದ್ವಿತೀಯ ಪಿಯುಸಿ ಫಲಿತಾಂಶವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ರಾಜ್ಯ ಶಿಕ್ಷಣ ಇಲಾಖೆ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆಗಳ ಮಾದರಿಯಲ್ಲಿ ಈ ವರ್ಷದಿಂದಲೇ ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ.
ಎಲ್ಲಾ ವಿಷಯಗಳಲ್ಲೂ ಏಕ ಅಂಕದ ಪ್ರಶ್ನೆಗಳನ್ನು 20ಕ್ಕೆ ಹೆಚ್ಚಿಸಿ ಬಹು ಆಯ್ಕೆ ಮಾದರಿ ಪ್ರಶ್ನೆಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಉಳಿದಂತೆ 2, 3, 4, 5 ಮತ್ತು 6 ಅಂಕಗಳ ಪ್ರಶ್ನೆಗಳ ಸಂಖ್ಯೆಯನ್ನು ವಿಷಯವಾರು ಒಂದಷ್ಟು ಹೆಚ್ಚು ಕಡಿಮೆ ಮಾಡಲಾಗಿದೆ. ಒಟ್ಟಿನಲ್ಲಿ ಪ್ರಶ್ನೆ ಜೊತೆಯಲ್ಲೇ ಬಹು ಆಯ್ಕೆ ಉತ್ತರವನ್ನು ನೀಡಿ ಸರಿಯಾದ ಉತ್ತರ ಆರಿಸಿ ಬರೆಯುವುದು, ಬಿಟ್ಟ ಸ್ಥಳ ಭರ್ತಿ ಮಾಡುವುದು, ಹೊಂದಿಸಿ ಬರೆಯುವುದು ಈ ರೀತಿಯಾಗಿ ಮಕ್ಕಳಿಗೆ ಉತ್ತಮವಾಗಿ ಉತ್ತರಿಸಲು ಸಾಧ್ಯವಾಗುವ ಪ್ರಶ್ನೆಗಳ ಮಾದರಿಯನ್ನು ಹೆಚ್ಚಳ ಮಾಡಲಾಗಿದೆ.
ಶಿಕ್ಷಣ ಇಲಾಖೆ ಮಾಹಿತಿ ಪ್ರಕಾರ, 1 ಅಂಕದ ಪ್ರಶ್ನೆ ಸೇರಿ ವಿದ್ಯಾರ್ಥಿಗಳು ಸುಲಭವಾಗಿ ಉತ್ತರಿಸಿ ಹೆಚ್ಚು ಅಂಕ ಪಡೆಯಲು ಸಹಕಾರಿಯಾಗುವ ಪ್ರಶ್ನೆಗಳ ಪ್ರಮಾಣವನ್ನು 40 ಶೇಕಡಾಕ್ಕೆ ಹೆಚ್ಚಿಸಲಾಗಿದ್ದು, ಮಧ್ಯಮ ಕ್ರಮಾಂಕದ ಅರ್ಥಾತ್ ಸುಲಭವೂ ಅಲ್ಲದ ಕಷ್ಟವೂ ಅಲ್ಲದ ಪ್ರಶ್ನೆಗಳ ಪ್ರಮಾಣವನ್ನು 40 ಶೇಕಡಾಕ್ಕೆ ಮತ್ತು ಕಷ್ಟದ ಪ್ರಶ್ನೆಗಳ ಪ್ರಮಾಣವನ್ನು 20 ಶೇಕಡಾ ಪ್ರಮಾಣಕ್ಕೆ ಇಳಿಸಲಾಗಿದೆ.
ಒಟ್ಟಾರೆ ಪ್ರಶ್ನೆಗಳಲ್ಲಿ ಶೇ.35 ರಷ್ಟು ಜ್ಞಾನಾಧಾರಿತ (ನಾಲೆಡ್ಜ್), ಶೇ.30 ರಷ್ಟು ತಿಳುವಳಿಕೆ ಸಾಮರ್ಥ್ಯದ, ಶೇ.25 ರಷ್ಟು ಅನ್ವಯಿಸುವಿಕೆ (ಅಪ್ಲಿಕೇಷನ್) ಮತ್ತು ಶೇ.10 ರಷ್ಟು ಕೌಶಲ್ಯಾಧಾರಿತ ಪ್ರಶ್ನೆಗಳನ್ನು ಒಳಗೊಂಡಿರುವಂತೆ ಪ್ರಶ್ನೆ ಪತ್ರಿಕೆ ಮಾದರಿಯನ್ನು ಸಿದ್ಧಪಡಿಸಲಾಗಿದೆ. ಈಗಾಗಲೇ ದ್ವಿತೀಯ ಪಿಯುಸಿಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಪ್ರಶ್ನೆ ಪತ್ರಿಕೆಗಳ ಮಾದರಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (ಕೆಎಸ್‍ಇಎಬಿ) ತನ್ನ ವೆಬ್‍ಸೈಟ್‍ನಲ್ಲಿ ಪ್ರಕಟಿಸಿದೆ. ಪ್ರಥಮ ಪಿಯು ವಿಷಯಗಳ ಪ್ರಶ್ನೆ ಪತ್ರಿಕೆಗಳ ಮಾದರಿಗಳು ಕೂಡ ಅಂತಿಮಗೊಂಡಿದ್ದು ಮಂಡಳಿಯ ಅಧ್ಯಕ್ಷ ನಳಿನಿ ಅತುಲ್ ಅವರಿಂದ ಅಂತಿಮ ಮುದ್ರೆಗೆ ಮಾತ್ರ ಬಾಕಿ ಇದೆ. ಮುಂದಿನ ಒಂದೆರಡು ದಿನಗಳಲ್ಲಿ ಅವುಗಳನ್ನೂ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುವುದು ಎಂದು ಮಂಡಳಿಯ ಮಾಹಿತಿ ತಿಳಿಸಿದೆ.
ದ್ವಿತೀಯ ಪಿಯುಸಿ ಫಲಿತಾಂಶ ಉತ್ತಮ ಪಡಿಸಲು ಇಲಾಖೆ ಸಾಕಷ್ಟು ಪ್ರಯತ್ನ ನಡೆಸಿದರೂ ಇದುವರೆಗೆ ಫಲಿತಾಂಶದ ಪ್ರಮಾಣ ಶೇ. 62 ದಾಟಿಲ್ಲ. 2021-22ನೇ ಸಾಲಿನಲ್ಲಿ ಶೇ. 61.88 ರಷ್ಟುವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದೇ ಇದುವರೆಗೆ ಬಂದ ಅತ್ಯುತ್ತಮ ಫಲಿತಾಂಶ. ಹಾಗಾಗಿ ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ಮಾದರಿಯ ಕೆಲವು ಅಂಶಗಳನ್ನೂ ಸೇರಿಸಿಕೊಂಡು ದ್ವಿತೀಯ ಪಿಯು ಪ್ರಶ್ನೆ ಪತ್ರಿಕೆ ಮಾದರಿಯನ್ನೇ ಬದಲಿಸಲಾಗಿದೆ ಎಂದು ಮಾಹಿತಿ ತಿಳಿಸಿದೆ.
ಕಳೆದ ಸಾಲಿನವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಪದವಿಪೂರ್ವ ಶಿಕ್ಷಣ ಇಲಾಖೆಯೇ ನಡೆಸುತ್ತಿತ್ತು. ಆದರೆ, ಇತ್ತೀಚೆಗಷ್ಟೆ ರಾಜ್ಯ ಸರಕಾರ ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀಕ್ಷೆಗಳನ್ನು ನಡೆಸಲು ಕರ್ನಾಟಕ ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯಾಂಕನ ಮಂಡಳಿ (ಕೆಎಸ್‍ಇಎಬಿ) ಎಂಬ ಹೊಸ ಮಂಡಳಿ ರಚಿಸಿ ಸಂಪೂರ್ಣ ಪರೀಕ್ಷಾ ಜವಾಬ್ದಾರಿಯನ್ನು ವಹಿಸಿದೆ. ಈ ಮಂಡಳಿಯು ತನ್ನ ಕಾರ್ಯ ಚಟುವಟಿಕೆ ಆರಂಭಿಸಿದ ಮೊದಲ ವರ್ಷವೇ ಪಿಯು ಪ್ರಶ್ನೆ ಪತ್ರಿಕೆಗಳ ಮಾದರಿಯನ್ನು ಬದಲಾವಣೆ ಮಾಡಿದೆ. ಪ್ರಥಮ ಹಾಗೂ ದ್ವಿತೀಯ ಪಿಯುಸಿ ಎರಡಕ್ಕೂ ಪರೀಕ್ಷೆಗೆ ಒಂದೇ ಮಾದರಿಯನ್ನು ಅಳವಡಿಸಲಾಗುತ್ತಿದೆ.
ಪ್ರಥಮ ಹಾಗೂ ದ್ವಿತೀಯ ಪಿಯು ಪರೀಕ್ಷಾ ಪ್ರಶ್ನೆ ಪತ್ರಿಕೆಗಳ ಮಾದರಿಯಲ್ಲಿ ಬದಲಾವಣೆ ಮಾಡಿದರೂ ಲಿಖಿತ ಪರೀಕ್ಷೆ (ಥಿಯರಿ) ಮತ್ತು ಪ್ರಾಯೋಗಿಕ ಪರೀಕ್ಷೆಗಳ ಒಟ್ಟಾರೆ ಅಂಕಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ವಿಜ್ಞಾನ ವಿಭಾಗದ ವಿಷಯಗಳಿಗೆ ಮಾತ್ರ ಪ್ರಾಯೋಗಿಕ ಪರೀಕ್ಷೆಗಳು ಇರುತ್ತವೆ. ಈ ವಿಷಯಗಳಿಗೆ ಶೇ. 70 ರಷ್ಟು ಅಂಕಗಳಿಗೆ ಲಿಖಿತ ಪರೀಕ್ಷೆ, 30 ಅಂಕಗಳಿಗೆ ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿವೆ. ಉಳಿದೆಲ್ಲಾ ವಿಷಯಗಳಿಗೆ ತಲಾ 100 ಅಂಕಗಳಿಗೇ ಪರೀಕ್ಷೆ ನಡೆಯಲಿದೆ.
0 comments:
Post a Comment