ಕರಾವಳಿಗರಿಗೆ ಕುಚ್ಚಲಕ್ಕಿ ಭಾಗ್ಯ ಇನ್ನೂ ಸಚಿವರ ಭರವಸೆಗಳಾಗಿಯೇ ಉಳಿದಿದೆ
ಬೆಂಗಳೂರು, ಜನವರಿ 04, 2023 (ಕರಾವಳಿ ಟೈಮ್ಸ್) : ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಮಾವೇಶವೊಂದರಲ್ಲಿ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಪಿಎಲ್ ಪಡಿತರ ಚೀಟಿದಾರರಿಗೆ ತಿಂಗಳಿಗೆ ತಲಾ 10 ಕೆಜಿ ಅಕ್ಕಿ ನೀಡಲಾಗುವುದು ಎಂದು ತಿಳಿಸಿದ್ದರು. ಇದರಿಂದ ಎಚ್ಚೆತ್ತ ರಾಜ್ಯ ಬಿಜೆಪಿ ಸರಕಾರ ಇದೀಗ ಚುನಾವಣಾ ಹೊಸ್ತಿಲಲ್ಲಿ ಬಿಪಿಎಲ್ ಪಡಿತರದಾರರಿಗೆ ಇದುವರೆಗೆ ವಿತರಿಸುತ್ತಿದ್ದ 5 ಕೆಜಿ ಅಕ್ಕಿ ಜೊತೆಗೆ ಹೆಚ್ಚುವರಿಯಾಗಿ 1 ಕೆಜಿ ಅಕ್ಕಿ ವಿತರಿಸುವುದಾಗಿ ಆದೇಶಿಸಿದೆ.
ಆದ್ಯತಾ ಪಡಿತರ ಚೀಟಿಗಳ (ಬಿಪಿಎಲ್) ಪ್ರತಿ ಫಲಾನುಭವಿಗಳಿಗೆ ಪ್ರತಿ ತಿಂಗಳು ತಲಾ 5 ಕೆಜಿ ಅಕ್ಕಿ ವಿತರಿಸಲಾಗುತ್ತಿತ್ತು. ಈಗ 1 ಕೆಜಿ ಹೆಚ್ಚುವರಿ ಸೇರಿದಂತೆ ಒಟ್ಟು 6 ಕೆಜಿ ಅಕ್ಕಿ ವಿತರಿಸಲಾಗುವುದು. ಜನವರಿ 1ರಿಂದಲೇ ಈ ಆದೇಶ ಜಾರಿಗೊಂಡಿದೆ ಎಂದು ಸರಕಾರ ಹೇಳಿಕೆಯಲ್ಲಿ ತಿಳಿಸಿದೆ.
ರಾಜ್ಯದಲ್ಲಿರುವ ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ಸಾರ್ವಜನಿಕ ವಿತರಣಾ ಪದ್ಧತಿಯಡಿ ವಿತರಿಸಲಾಗುತ್ತಿರುವ 5 ಕೆಜಿ ಆಹಾರ ಧಾನ್ಯದೊಂದಿಗೆ ಹೆಚ್ಚುವರಿಯಾಗಿ ಪ್ರತಿ ತಿಂಗಳು 1 ಕೆಜಿ ಅಕ್ಕಿಯನ್ನು ವಿತರಿಸಲು ಸರಕಾರ ಇದೀಗ ಆದೇಶಿಸಿದೆ.
ಈ ಮಧ್ಯೆ ಕೋವಿಡ್ ಹಾಗೂ ಲಾಕ್ ಡೌನ್ ಹಿನ್ನಲೆಯಲ್ಲಿ ಕೇಂದ್ರ ಸರಕಾರ ವಿತರಿಸುತ್ತಿದ್ದ 5 ಕೆಜಿ ಅಕ್ಕಿಯನ್ನು ಜನವರಿ ತಿಂಗಳಿನಿಂದ ಸದ್ದಿಲ್ಲದೆ ನಿಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ. ಕೇಂದ್ರ ಸರಕಾರದ 5 ಕೆಜಿ ಹಾಗೂ ರಾಜ್ಯ ಸರಕಾರದ 5 ಕೆಜಿ ಸೇರಿ ಒಟ್ಟು 10 ಕೆಜಿ ಅಕ್ಕಿಯನ್ನು ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದ ಪ್ರತಿಯೋರ್ವ ಸದಸ್ಯರಿಗೆ ಕೋವಿಡ್ ಲಾಕ್ ಡೌನ್ ಬಳಿಕ ವಿತರಿಸಲಾಗುತ್ತಿತ್ತು. ಇದೀಗ ಕೇಂದ್ರ ಸರಕಾರದ 5 ಕೆಜಿ ಅಕ್ಕಿಯನ್ನು ಹಠಾತ್ ಆಗಿ ನಿಲ್ಲಿಸಲಾಗಿದ್ದು, ಅದನ್ನು ಸರಿದೂಗಿಸಲು ರಾಜ್ಯ ಸರಕಾರ ಹೆಚ್ಚುವರಿಯಾಗಿ 1 ಕೆಜಿ ಅಕ್ಕಿ ವಿತರಿಸುವ ಬಗ್ಗೆ ಘೋಷಣೆ ಮಾಡಿದೆ. ಜನವರಿಯಿಂದ ಹೆಚ್ಚುವರಿ 1 ಕೆಜಿ ಸೇರಿ ರಾಜ್ಯ ಸರಕಾರದಿಂದ ವಿತರಣೆಯಾಗುವ 6 ಕೆಜಿ ಅಕ್ಕಿ ಮಾತ್ರ ಬಿಪಿಎಲ್ ಪಡಿತರ ಚೀಟಿದಾರರು ಪಡೆಯಲಿದ್ದಾರೆ. ಆದರೆ ಹೆಚ್ಚುವರಿ 1 ಕೆಜಿ ಅಕ್ಕಿ ವಿತರಣೆ ಜನವರಿಯಿಂದಲೇ ಜಾರಿ ಎಂದು ಸರಕಾರ ಘೋಷಿಸಿಕೊಂಡಿದ್ದರೂ ನ್ಯಾಯಬೆಲೆ ಅಂಗಡಿದಾರರಿಗೆ ಈ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ ಎನ್ನಲಾಗಿದೆ. ಈ ಮಧ್ಯೆ ಕಳೆದ ಕೆಲವು ತಿಂಗಳುಗಳಿಂದ ಕರಾವಳಿಯ ಸಚಿವರು-ಶಾಸಕರು ಮುಖ್ಯಮಂತ್ರಿಯೊಂದಿಗೆ ನಿರಂತರ ಚರ್ಚಿಸಿ ಕುಚ್ಚಲಕ್ಕಿ ನೀಡುವ ಬಗ್ಗೆ ಪದೇ ಪದೇ ಹೇಳಿಕೆ-ಘೋಷಣೆ ನೀಡುತ್ತಾ ಬರುತ್ತಿದ್ದರೂ ಅದಿನ್ನೂ ಜಾರಿಗೆ ಬರುವ ಬಗ್ಗೆ ಯಾವುದೇ ಸೂಚನೆಗಳೂ ಕಂಡು ಬರುತ್ತಿಲ್ಲ.
ಕಳೆದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಪದಗ್ರಹಣ ಮಾಡಿದ ತಕ್ಷಣ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 7 ಕೆಜಿ ಅಕ್ಕಿ ವಿತರಿಸುವ ಘೋಷಣೆ ಮಾಡಿ ತನ್ನ ಅಧಿಕಾರಾವಧಿ ಕೊನೆಯವರೆಗೂ ಅದನ್ನು ವಿತರಿಸಲಾಗಿತ್ತು. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅದನ್ನು 5 ಕೆಜಿಗೆ ಇಳಿಸಲಾಗಿತ್ತು. ಬಳಿಕ ಕೊರೋನಾ ಹಾಗೂ ಲಾಕ್ ಡೌನ್ ಘೋಷಣೆಯಾದ ಬಳಿಕ ಕೇಂದ್ರ ಸರಕಾರ 5 ಕೆಜಿ ಅಕ್ಕಿ ನೀಡುವುದರೊಂದಿಗೆ ಡಿಸೆಂಬರ್ ವರೆಗೆ ತಲಾ 10 ಕೆಜಿ ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ನೀಡಲಾಗುತ್ತಿತ್ತು. ಇದೀಗ ಕೇಂದ್ರ ಸರಕಾರದ ಅಕ್ಕಿ ವಿತರಣೆಯನ್ನು ವಾಪಾಸು ಪಡೆದುಕೊಂಡಿದ್ದು, ರಾಜ್ಯ ಸರಕಾರ 1 ಕೆಜಿ ಹೆಚ್ಚುವರಿ ಸೇರಿ 6 ಕೆಜಿ ಅಕ್ಕಿ ಮಾತ್ರ ವಿತರಿಸಲಿದೆ.
0 comments:
Post a Comment