ಬೆಂಗಳೂರು, ಡಿಸೆಂಬರ್ 23, 2022 (ಕರಾವಳಿ ಟೈಮ್ಸ್) : ರಾಜ್ಯ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಹಾಗೂ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಂಟಿಯಾಗಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಈ ಪ್ರವಾಸಕ್ಕೆ ಕಾಂಗ್ರೆಸ್ ಪಕ್ಷದ ವತಿಯಿಂದ ವೇಳಾಪಟ್ಟಿ ಪ್ರಕಟಿಸಲಾಗಿದೆ.
ಡಿಸೆಂಬರ್ 30 ರಿಂದ ಜನವರಿ 29ರವರೆಗೆ ಇಬ್ಬರು ನಾಯಕರು ಒಟ್ಟಾಗಿ ಬಸ್ ಮೂಲಕ ಯಾತ್ರೆ ಕೈಗೊಳ್ಳಲಿದ್ದಾರೆ. ಈ ಮಧ್ಯೆ, ಹೊಸ ವರ್ಷಾಚರಣೆ, ಸಂಕ್ರಾಂತಿ ಹಬ್ಬ ಸೇರಿದಂತೆ ಮತ್ತಿತರ ಕಾರಣಕ್ಕೆ ಕೆಲ ದಿನಗಳ ಬಿಡುವು ಹೊರತುಪಡಿಸಿ ಒಟ್ಟು 16 ದಿನಗಳ ಕಾಲ ಜಂಟಿ ಯಾತ್ರೆ ನಡೆಯಲಿದೆ. ಯಾತ್ರೆ ವೇಳೆ ನಿತ್ಯ ಬಸ್ ಮೂಲಕ ಇಬ್ಬರೂ ನಾಯಕರು ಕನಿಷ್ಠ ಎರಡು ಜಿಲ್ಲೆಗಳಲ್ಲಿ ತಲಾ 60 ರಿಂದ 80 ಕಿ.ಮೀ.ನಷ್ಟುದೂರ ಯಾತ್ರೆ ನಡೆಸುವರು ಮತ್ತು ವಿವಿಧೆಡೆ ಬಹಿರಂಗ ಸಾರ್ವಜನಿಕ ಸಭೆ, ಸಮಾರಂಭ, ಸಮಾವೇಶಗಳಲ್ಲಿ ಭಾಗವಹಿಸಲಿದ್ದಾರೆ.
ಯಾತ್ರೆಗೆ ಸಿದ್ಧತೆ ನಡೆಸುವಂತೆ ಕೆಪಿಸಿಸಿ ತಂಡ ರಚಿಸಿದೆ. ಕೆಪಿಸಿಸಿ ಜಿಲ್ಲಾ ಉಸ್ತುವಾರಿ ಕಾರ್ಯಾಧ್ಯಕ್ಷರು, ಅಖಿಲ ಭಾರತ ಕಾಂಗ್ರೆಸ್ ಸಮಿತಿ ಕಾಯದರ್ಶಿಗಳು (ಕರ್ನಾಟಕ ರಾಜ್ಯ ಜಿಲ್ಲಾ ಉಸ್ತುವಾರಿ), ಕೆಪಿಸಿಸಿ ಜಿಲ್ಲಾ ಉಸ್ತುವಾರಿ ಪದಾಧಿಕಾರಿಗಳನ್ನೊಳಗೊಂಡ ತಂಡವು ಮುಂಚಿತವಾಗಿಯೇ ಸಭೆಗಳು ನಡೆಯುವ ಪ್ರತಿಯೊಂದು ಬ್ಲಾಕ್ ಮತ್ತು ವಿಧಾನಸಭಾ ಕ್ಷೇತ್ರಗಳಿಗೆ ತೆರಳಿ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಎಲ್ಲಾ ಜಿಲ್ಲಾ ಕಾಂಗ್ರೆಸ್ ಸಮಿತಿಗಳು ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿಗಳು ಪಕ್ಷದ ಎಲ್ಲಾ ಹಂತಗಳಲ್ಲಿ ನಡೆಯುವ ಬೃಹತ್ ಸಭೆಗಳ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು. ಪಕ್ಷದ ಎಲ್ಲಾ ನಾಯಕರು ಮತ್ತು ಕಾರ್ಯದರ್ಶಿಗಳು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ನಿರ್ದೇಶನ ನೀಡಲಾಗಿದೆ.
ಇದೇ ವೇಳೆ ಚಿತ್ರದುರ್ಗದಲ್ಲಿ ಜ 8 ರಂದು ಎಸ್ಸಿ-ಎಸ್ಟಿ ಸಮುದಾಯದ ಸಮಾವೇಶ ನಡೆಯಲಿದೆ. ಅದರಲ್ಲೂ ಉಭಯ ನಾಯಕರು ಪಾಲ್ಗೊಳ್ಳುವರು. ಉತ್ತರ ಕನ್ನಡ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳ ಕಾರ್ಯಕ್ರಮಗಳಿಗೆ ಪಟ್ಟಿಪ್ರತ್ಯೇಕವಾಗಿ ಪ್ರಕಟವಾಗಲಿದೆ.
ಯಾತ್ರೆ ವೇಳಾಪಟ್ಟಿ ಈ ರೀತಿ ತಯಾರಿಸಲಾಗಿದೆ
ಡಿ 30 : ವಿಜಯಪುರ (ಕೃಷ್ಣಾ ಜಲಾನಯನ), ಜನವರಿ 2 : ಹುಬ್ಬಳ್ಳಿ-ಧಾರವಾಡ (ಮಹದಾಯಿ ಜಲಾನಯನ), ಜ 8 : ಚಿತ್ರದುರ್ಗದಲ್ಲಿ ಎಸ್ಸಿ-ಎಸ್ಟಿ ಸಮಾವೇಶ, ಜ. 11 : ಬೆಳಗಾವಿ, ಚಿಕ್ಕೋಡಿ, ಜ 17 : ಹೊಸಪೇಟೆ, ಕೊಪ್ಪಳ, ಜ 18 : ಬಾಗಲಕೋಟೆ, ಗದಗ, ಜ 19 : ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಜ. 21 : ಹಾಸನ, ಚಿಕ್ಕಮಗಳೂರು, ಮಂಗಳೂರು, ಜ 22 : ಉಡುಪಿ, ಮಂಗಳೂರು, ಜ 23 : ಕೋಲಾರ, ಚಿಕ್ಕಬಳ್ಳಾಪುರ, ಜ. 24 : ಬೆಂಗಳೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ದೊಡ್ಡಬಳ್ಳಾಪುರ, ಜ. 25 : ಬೆಂಗಳೂರು, ಮೈಸೂರು, ಜ. 26 : ಮೈಸೂರು, ಚಾಮರಾಜನಗರ, ಜ 27 : ಮೈಸೂರು, ಮಂಡ್ಯ, ರಾಮನಗರ, ಜ. 28 : ಕಲಬುರಗಿ, ಯಾದಗಿರಿ, ವಿಜಯಪುರ, ಜ. 29 : ಬೆಂಗಳೂರಿಗೆ ವಾಪಸ್.
ಜಂಟಿ ಬಸ್ ಯಾತ್ರೆ ಬಳಿಕ ಪ್ರತ್ಯೇಕ ಯಾತ್ರೆ ಕೈಗೊಳ್ಳಲಿರುವ ನಾಯಕರು
ಇಬ್ಬರು ನಾಯಕರ ಜಂಟಿ ಬಸ್ ಯಾತ್ರೆ ಮುಗಿದ ಬಳಿಕ ಜಿಲ್ಲಾ ಪ್ರವಾಸದ ಮುಂದುವರೆದ ಭಾಗವಾಗಿ ಎರಡು ಪ್ರತ್ಯೇಕ ತಂಡಗಳು ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರವಾಸ ಕೈಗೊಳ್ಳಲಿವೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ತಂಡ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ತಂಡ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಪ್ರವಾಸ ಮಾಡಿ ಬಹಿರಂಗ ಸಭೆ ನಡೆಸಲಿವೆ. ಈ ಪ್ರವಾಸಗಳ ವೇಳಾಪಟ್ಟಿಯನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗುವುದು ಎಂದು ಕೆಪಿಸಿಸಿ ತಿಳಿಸಿದೆ.
ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಅವರನ್ನು ದಕ್ಷಿಣ ಕರ್ನಾಟಕ ಭಾಗದ ಪ್ರವಾಸ ಕಾರ್ಯಕ್ರಮಗಳ ಸಂಯೋಜಕರಾಗಿ, ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರನ್ನು ಉತ್ತರ ಕರ್ನಾಟಕ ಭಾಗದ ಪ್ರವಾಸ ಕಾರ್ಯಕ್ರಮಗಳ ಸಂಯೋಜಕರಾಗಿ ನೇಮಿಸಲಾಗಿದೆ. ಈ ತಂಡಗಳಲ್ಲಿ ಆಯಾ ಭಾಗದ ಜಿಲ್ಲಾ ಕಾಂಗ್ರೆಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಕೆಪಿಸಿಸಿ ಉಸ್ತುವಾರಿ ಪದಾಧಿಕಾರಿಗಳು, ಕಳೆದ ಚುನಾವಣೆಯ ಪರಾಜಿತ ಅಭ್ಯರ್ಥಿಗಳು, ಭಾರತ್ ಜೋಡೋ ಯಾತ್ರೆಯ ಸಮಿತಿಯವರು, ವಿಧಾನಸಭಾವಾರು ಕೆಪಿಸಿಸಿ ಸಂಯೋಜಕರು, ಪಕ್ಷದ ಟಿಕೆಟ್ ಆಕಾಂಕ್ಷಿಗಳು ಪ್ರವಾಸ ಕಾರ್ಯಕ್ರಮಗಳನ್ನು ಸಂಘಟಿಸಲು ಪೂರ್ಣ ಸಹಕಾರ ನೀಡುವಂತೆ ಪಕ್ಷ ಸೂಚಿಸಿದೆ.
0 comments:
Post a Comment