ಬಂಟ್ವಾಳ, ಡಿಸೆಂಬರ್ 29, 2022 (ಕರಾವಳಿ ಟೈಮ್ಸ್) : ತಾಲೂಕಿನ ಬಿ ಮೂಡ ಗ್ರಾಮದ ಗೂಡಿನಬಳಿಯ ಶಾಲೆ, ಮಸೀದಿ-ಮದ್ರಸ ಇರುವ ಏಕಮುಖ ಸಂಚಾರದ ರಸ್ತೆಯಲ್ಲಿ ಪಾರ್ಸೆಲ್ ವಾಹನ ಓವರ್ ಸ್ಪೀಡ್ ಮೂಲಕ ಸಂಚರಿಸಿದ್ದನ್ನು ಪ್ರಶ್ನಿಸಿದ್ದ ಬಗ್ಗೆ ಮಾತಿನ ವಿನಿಮಯ ನಡೆದದ್ದನ್ನೇ ರಾದ್ದಾಂತ ಮಾಡಿದ ಪಾರ್ಸೆಲ್ ವಾಹನ ಚಾಲಕ ಕೋಮು ಆಧಾರಿತವಾಗಿ ಪೊಲೀಸ್ ದೂರು ನೀಡಿರುವುದನ್ನು ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯಕ್ಷಿತ್ ಎಂಬವರು ಮಂಗಳವಾರ ಸಂಜೆ ವೇಳೆಗೆ ಪಾರ್ಸೆಲ್ ವಾಹನವನ್ನು ಗೂಡಿನಬಳಿ ಶಾಲಾ-ಮದ್ರಸ ರಸ್ತೆಯಲ್ಲಿ ಅತ್ಯಂತ ವೇಗವಾಗಿ ಚಲಾಯಿಸಿಕೊಂಡು ಬಂದಿದ್ದು, ಇದು ಇಲ್ಲಿನ ಏಕಮುಖ ರಸ್ತೆಯಲ್ಲಿ ಅತ್ಯಂತ ಅಪಾಯಕಾರಿ ಸಂಚಾರ ಎಂದು ಸ್ಥಳೀಯ ನಿವಾಸಿ, ಮೀನು ವ್ಯಾಪಾರಿ ಇಕ್ಬಾಲ್ ಎಂಬವರು ಪ್ರಶ್ನಿಸಿದ್ದರು ಎನ್ನಲಾಗಿದೆ. ಈ ಸಂದರ್ಭ ವಾಹನ ಚಾಲಕ ಯಕ್ಷಿತ್ ಹಾಗೂ ಇಕ್ಬಾಲ್ ಮಧ್ಯೆ ಸಣ್ಣ ಮಟ್ಟಿನ ಮಾತಿನ ವಿನಿಮಯ ನಡೆದಿದ್ದು, ಸ್ಥಳೀಯರು ಇದಕ್ಕೆ ಸಾಕ್ಷಿಯಾಗಿದ್ದರು ಕೂಡಾ ಎನ್ನಲಾಗಿದೆ. ಏಕಮುಖ ರಸ್ತೆಯಲ್ಲಿ ವಾಹನ ವೇಗವಾಗಿ ಚಲಾಯಿಸಿರುವ ಬಗ್ಗೆ ಸೀಸಿ ಕ್ಯಾಮೆರಾ ಫೂಟೇಜ್ ಕೂಡಾ ಇದೀಗ ವೈರಲ್ ಆಗಿದೆ. ಪ್ರಕರಣ ಅಲ್ಲಿಗೆ ಮುಕ್ತಾಯಗೊಂಡಿದೆ ಎನ್ನುವಷ್ಟರಲ್ಲಿ ಪಾರ್ಸೆಲ್ ವಾಹನ ಚಾಲಕ ಯಕ್ಷಿತ್ ಅವರು ಅಯ್ಯಪ್ಪ ವೃತಾಧಾರಿಗೆ ಅವಮಾನ, ಜೀವ ಬೆದರಿಕೆ ಎಂದೆಲ್ಲಾ ಪೊಲೀಸ್ ದೂರು ನೀಡಿದ್ದು, ಒಂದು ರೀತಿಯ ಕೋಮು ವೈಷಮ್ಯ ಉಂಟು ಮಾಡುವ ರೀತಿಯಲ್ಲಿ ದೂರು ನೀಡಿರುವುದು ಸರಿಯಲ್ಲ ಎಂದು ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯಕ್ಷಿತ್ ಅವರ ದೂರಿಗೆ ಸಂಬಂಧಿಸಿದಂತೆ ಇಕ್ಬಾಲ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದ್ದು, ಘಟನೆ ನಡೆದ ಬಗ್ಗೆ ಇರುವ ಸೀಸಿ ಕ್ಯಾಮೆರಾ ಫೂಟೇಜನ್ನು ಸ್ಥಳೀಯರು ಪೊಲೀಸರಿಗೆ ನೀಡಿದ್ದು ಸೂಕ್ತ ತನಿಖೆ ನಡೆಸಿ ಸತ್ಯಾಸತ್ಯತೆ ಅವಲೋಕನ ನಡೆಸುವಂತೆಯೂ ಸಮಾಜದ ಶಾಂತಿಗೆ ಸವಾಲಾಗಿರುವ ಪ್ರಕರಣವನ್ನು ಶಾಂತಿಯುತವಾಗಿ ಮುಗಿಸುವಂತೆ ಕೋರಿದ್ದಾರೆ.
0 comments:
Post a Comment