ಬಂಟ್ವಾಳ, ಡಿಸೆಂಬರ್ 9, 2022 (ಕರಾವಳಿ ಟೈಮ್ಸ್) : ಕತಾರ್ ದೇಶದಲ್ಲಿ ಮಂಗಳವಾರ (ಡಿ 6) ರಾತ್ರಿ ಕಾರು ಅಪಘಾತಕ್ಕೊಳಗಾಗಿ ಮೃತಪಟ್ಟ ಸಜಿಪ ಸಮೀಪದ ಕಂಚಿನಡ್ಕಪದವು-ಚಟ್ಟೆಕ್ಕಲ್ ನಿವಾಸಿ, 24 ವರ್ಷದ ಅವಿವಾಹಿತ ಯುವಕ ಫಹದ್ ಮೃತದೇಹ ಗುರುವಾರ ಸಂಜೆ 7 ಗಂಟೆ ವೇಳೆಗೆ ಮನೆಗೆ ತಲುಪಿತು.
ಅಪಘಾತ ಸಂಭವಿಸಿದ ಬಳಿಕ ಕತಾರ್ ದೇಶದ ಕಾನೂನಾತ್ಮಕ ಪ್ರಕ್ರಿಯೆಗಳನ್ನು ನಿನ್ನೆ ರಾತ್ರಿ ವೇಳೆಯೇ ಪೂರ್ಣಗೊಳಿಸಿ ಗುರುವಾರ ಮಧ್ಯಾಹ್ನದ ವೇಳೆಗೆ ಮೃತದೇಹವನ್ನು ಬಿಟ್ಟುಕೊಡಲಾಗಿತ್ತು. ಕತಾರಿನಿಂದ ನೇರ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಅಂಬ್ಯುಲೆನ್ಸ್ ಮೂಲಕ ಮೃತದೇಹ ಸಜಿಪದ ಕಂಚಿನಡ್ಕ ಪದವಿನ ಮನೆಗೆ ತರಲಾಯಿತು.
ಮನೆಯಲ್ಲಿ ಭಾರೀ ಸಂಖ್ಯೆಯಲ್ಲಿ ಸಂಬಂಧಿಕರು, ಊರವರು ಹಾಗೂ ಸಾರ್ವಜನಿಕರು ಸೇರಿದ್ದು, ಅಂತಿಮ ದರ್ಶನದ ಬಳಿಕ ಸಜಿಪನಡು ಕೇಂದ್ರ ಜುಮಾ ಮಸೀದಿ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಫಹದ್ ಮಂಗಳವಾರ ರಾತ್ರಿ ತನ್ನ ಕಾರಿನಲ್ಲಿ ಮಾಲಕನ ಕೆಲಸದ ನಿಮಿತ್ತ ತೆರಳಿ ವಾಪಾಸು ಬರುತ್ತಿದ್ದ ವೇಳೆ ರಸ್ತೆಯಲ್ಲಿ ಕಾರು ಉರುಳಿ ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದಾನೆ. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದ. ಫಹದ್ ಕಳೆದ ಐದು ತಿಂಗಳ ಹಿಂದೆಯಷ್ಟೆ ಡ್ರೈವರ್ ವೀಸಾದಲ್ಲಿ ಕತಾರಿಗೆ ತೆರಳಿದ್ದ. ಮೃತ ಫಹದ್ ತಂದೆ-ತಾಯಿ, ಸಹೋದರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾನೆ.
0 comments:
Post a Comment