ಬಂಟ್ವಾಳ, ಡಿಸೆಂಬರ್ 30, 2022 (ಕರಾವಳಿ ಟೈಮ್ಸ್) : ಪ್ರೇಮ ಪ್ರಕರಣ ಊರಿಡೀ ಹೇಳುತ್ತಿಯಾ ಎಂದು ಬೆದರಿಸಿದ ತಂಡವೊಂದು ವ್ಯಕ್ತಿಯೋರ್ವರಿಗೆ ರಾತೋರಾತ್ರಿ ಮನೆಯಂಗಳಕ್ಕೆ ಕರೆದು ತಲವಾರು, ದೊಣ್ಣೆ ಮೊದಲಾದ ಮಾರಕಾಯುಧಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪುದು ಗ್ರಾಮದ ಮಾರಿಪಳ್ಳ ಸಮೀಪದ ಕುಮ್ಡೇಲು ಎಂಬಲ್ಲಿ ಡಿ 25 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಮಾರಣಾಂತಿಕ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯನ್ನು ಪುದು ಗ್ರಾಮದ ಕುಮ್ಡೇಲು ನಿವಾಸಿ ಎಂ ಬಿ ರವಿ ಅವರ ಪುತ್ರ ನಿತೇಶ್ (29) ಎಂದು ಹೆಸರಿಸಲಾಗಿದ್ದು, ಆರೋಪಿಗಳನ್ನು ಅದೇ ಪರಿಸರವಾಸಿಗಳಾದ ರೋಷನ್ ಕುಮಾರ್ ಬಿನ್ ಸೀತಾರಾಮ ಶೆಟ್ಟಿ (27), ಸುಜೀತ್ ಬಿನ್ ಬಾಬು ಪೂಜಾರಿ (23), ಲೋಕೇಶ್ ಬಿನ್ ಅರುಣ್ ಕೊರಗ (30) ಹಾಗೂ ಸುಮಂತ್ ಎಂದು ಗುರುತಿಸಲಾಗಿದೆ.
ಡಿಸೆಂಬರ್ 24 ರಂದು ರಾತ್ರಿ 12:00 ಗಂಟೆ ವೇಳೆಗೆ ನಿತೇಶ್ ಮನೆ ಸಮೀಪದ ಸುಮಂತನು ಆತನ ಮನೆ ಬಳಿಗೆ ಬರ ಮಾಡಿಸಿ ಅಲ್ಲಿದ್ದ ಲೋಕೇಶ್ ಮತ್ತು ಶ್ರವಣ್ ರವರು ಅವರ ಲವ್ ವಿಚಾರದಲ್ಲಿ ಭಾಗಿಯಾಗಬಾರದಾಗಿ ಎಚ್ಚರಿಸಿ ಕೈಯಿಂದ ಹೊಡೆದಿರುತ್ತಾರೆ. ಡಿಸೆಂಬರ್ 25 ರಂದು ರಾತ್ರಿ 11ಗಂಟೆಯ ವೇಳೆಗೆ ಮನೆಯಲ್ಲಿದ್ದ ನಿತೇಶನನ್ನು ಮತ್ತೆ ಮನೆ ಸಮೀಪದ ಸುಮಂತನು ಮನೆಯಂಗಳಕ್ಕೆ ಬರ ಮಾಡಿಸಿ, ಅಲ್ಲಿದ್ದ ಸುಮಂತ್, ಲೋಕೇಶ್, ಸುಜಿತ್ ಮತ್ತು ರೋಶನ್ ಎಂಬವರು ಒಟ್ಟು ಸೇರಿಕೊಂಡು ಅವರ ಪೈಕಿ ಸುಮಂತ್ ಮತ್ತು ಸುಜಿತ್ ರವರು ನಿತೇಶನನ್ನುದ್ದೇಶಿಸಿ ಬೇವರ್ಸಿ, ರಂಡೇ ಮಗ ನಮ್ಮ ಲವ್ ವಿಚಾರದಲ್ಲಿ ಇಡೀ ಊರಿಗೆ ತಿಳಿಸುತ್ತೀಯಾ ಎಂದು ಅವಾಚ್ಯ ಶಬ್ದದಿಂದ ಬೈದು ಬೆದರಿಸಿ ಅವರುಗಳ ಪೈಕಿ ಲೋಕೇಶ್, ರೋಶನ್ ಮತ್ತು ಸುಜಿತ್ ರವರು ಅವರ ಕೈಯಲ್ಲಿದ್ದ ತಲವಾರಿನಿಂದ ನಿತೇಶನ ತಲೆಗೆ, ಎಡ ಕಣ್ಣಿನ ಬಳಿ, ಬಲ ಕೆನ್ನೆಗೆ, ಗಲ್ಲಕ್ಕೆ, ಕೆಳತುಟಿಗೆ, ಎರಡೂ ಕಾಲಿನ ಮೊಣಗಂಟಿಗೆ, ಹೊಟ್ಟೆಯ ಎಡಬದಿಗೆ, ಬೆನ್ನಿನ ಪಕ್ಕೆಲುಬಿನ ಎಡಬದಿಗೆ ಹಾಗೂ ಬಲಕೈ ಬೆರಳುಗಳಿಗೆ ಯದ್ವಾ ತದ್ವಾ ಕೊಲೆ ಮಾಡುವ ಉದ್ದೇಶದಿಂದ ಕಡಿದಿರುವುದಲ್ಲದೇ ಸುಮಂತನು ಮರದ ದೊಣ್ಣೆಯಿಂದ ನಿತೇಶನ ದೇಹದ ವಿವಿಧ ಭಾಗಗಳಿಗೆ ಯದ್ವಾತದ್ವಾ ಹೊಡೆದಿರುತ್ತಾನೆ.
ತೀವ್ರ ಗಾಯಗೊಂಡು ಸುಮಂತನ ಮನೆಯಂಗಳದಲ್ಲಿ ಬಿದ್ದು ಬೊಬ್ಬೆ ಹೊಡೆಯುತ್ತಿದ್ದ ನಿತೇಶನನ್ನು ಆರೋಪಿಗಳೆಲ್ಲರೂ ಒಟ್ಟು ಸೇರಿ ಆತನನ್ನು ಎತ್ತಿ ಆತನ ಮನೆಯ ಹಿಂಬದಿ ಜಾಗದಲ್ಲಿ ಎಸೆದು ಹೋಗಿರುತ್ತಾರೆ. ಬಳಿಕ ನಿತೇಶನ್ ತಂದೆ ಮತ್ತು ತಾಯಿಯವರು ಆತನನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ 99/2022 ಕಲಂ 504, 506, 324, 326, 307 ಆರ್/ಡಬ್ಲ್ಯು 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಆರೋಪಿಗಳಾದ ರೋಷನ್ ಕುಮಾರ್, ಸುಜೀತ್ ಹಾಗೂ ಲೋಕೇಶ್ ಅವರನ್ನು ಡಿ 27 ರಂದು ದಸ್ತಗಿರಿ ಮಾಡಿದ್ದು, ಕೃತ್ಯಕ್ಕೆ ಬಳಸಿದ್ದ 2 ಕತ್ತಿ, ದೊಣ್ಣೆಯನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇತರ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ತನಿಖೆ ಮುಂದುವರಿಸಿದ್ದಾರೆ.
0 comments:
Post a Comment