ಬಂಟ್ವಾಳ, ಡಿಸೆಂಬರ್ 05, 2022 (ಕರಾವಳಿ ಟೈಮ್ಸ್) : ಯುವ ವಕೀಲ ಕುಲ್ ದೀಪ್ ಶೆಟ್ಟಿಯವರನ್ನು ಸಿವಿಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಪ್ರಕರಣ ದಾಖಲಿಸಿ ದೌರ್ಜನ್ಯ ನಡೆಸಿದ ಪೂಂಜಾಲಕಟ್ಟೆ ಪೊಲೀಸರ ಅಮಾನತಿಗೆ ಆಗ್ರಹಿಸಿ ದಕ್ಷಿಣ ಕನ್ನಡ ಲೀಗಲ್ ಪಾರಂ ನೇತೃತ್ವದಲ್ಲಿ ಸೋಮವಾರ (ಡಿ 5) ಬಿ ಸಿ ರೋಡಿನಲ್ಲಿರುವ ಬಂಟ್ವಾಳ ಡಿವೈಎಸ್ಪಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ದ ಕ ಜಿಲ್ಲಾ ಲೀಗಲ್ ಪಾರಂ ಅಧ್ಯಕ್ಷ ಎಸ್ ಪಿ ಚೆಂಗಪ್ಪ, ಪೊಲಿಸರ ಈ ಕೃತ್ಯವು ಖಂಡನೀಯವಾಗಿದ್ದು, ಇದು ಇಡೀ ವಕೀಲ ಸಮುದಾಯವನ್ನೇ ಬೆದರಿಸುವ ಕ್ರಮವಾಗಿದೆ. ಪೊಲೀಸರ ಇಂತಹ ಕೃತ್ಯದ ವಿರುದ್ಧ ಇಡೀ ವಕೀಲ ಸಮುದಾಯ ಒಗ್ಗಟ್ಟಾಗಿದ್ದು, ಕೂಡಲೇ ಹಲ್ಲೆ ಸಡೆಸಿದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕು. ತಪ್ಪಿದಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ ಅವರು ಸಾಮಾನ್ಯ ಕಾನೂನಿನ ಜ್ಞಾನ ಇಲ್ಲದವರಿಗೆ ಪೊಲೀಸರಾಗಲು ಯೋಗ್ಯತೆ ಇಲ್ಲ ಎಂದು ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಬಂಟ್ವಾಳ ಡಿವೈಎಸ್ಪಿ ಪ್ರತಾಪ್ ಸಿಂಗ್ ಥೋರಟ್ ಅವರು ವಕೀಲರಿಂದ ಮನವಿ ಸ್ವೀಕರಿಸಿ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ವಕೀಲರು ಪ್ರತಿಭಟನೆ ವಾಪಾಸು ಪಡೆದುಕೊಂಡಿದ್ದಾರೆ.
ಮಂಗಳೂರಿನ ಹಿರಿಯ ವಕೀಲರು ಹಾಗೂ ಮಾನವ ಹಕ್ಕು ಹೋರಾಟಗಾರರಾದ ದಿನೇಶ್ ಹೆಗ್ಡೆ ಉಳೆಪ್ಪಾಡಿ, ಉದನೇಶ್ವರ್, ಪುಷ್ಪಲತಾ ಯು ಕೆ, ಬಂಟ್ವಾಳದ ಹಿರಿಯ ವಕೀಲರಾದ ಸುರೇಶ್ ಪೂಜಾರಿ, ಜಯರಾಮ ರೈ, ಪ್ರಸಾದ್ ಕುಮಾರ್, ಸುರೇಶ್ ಕುಮಾರ್ ನಾವೂರು, ಚಂದ್ರಶೇಖರ ಪೂಜಾರಿ, ಹಾತಿಮ್ ಅಹಮ್ಮದ್, ಸತೀಶ್ ಬಿ, ಮಹಮ್ಮದ್ ಕಬೀರ್ ಕೆಮ್ಮಾರ, ಚೇತನ್ ನಾಯಕ್ ಪುತ್ತೂರು, ವೀರೇಂದ್ರ ಸಿದ್ದಕಟ್ಟೆ, ಮಲಿಕ್ ಅನ್ಸಾರ್ ಕರಾಯ, ಮೋಹನ್ ಕುಮಾರ್ ಕಡೇಶ್ವಾಲ್ಯ, ಅಬ್ದುಲ್ ಜಲೀಲ್ ನಂದಾವರ, ತುಳಸೀದಾಸ್ ವಿಟ್ಲ, ಎ ಪಿ ಮೊಂತೆರೋ, ಮಹಮ್ಮದ್ ಅಶ್ರಪ್, ಸುಹಾಸ್ ಶೆಟ್ಟಿ, ಚಂದ್ರಶೇಖರ್ ಬೈರಿಕಟ್ಟೆ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಮಂಗಳೂರು ವಕೀಲರ ಸಂಘದ ಸದಸ್ಯ, ಯುವ ವಕೀಲ ಕುಲ್ ದೀಪ್ ಶೆಟ್ಟಿ ಅವರನ್ನು ಸಿವಿಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಪ್ರಕರಣ ದಾಖಲಿಸಿದ ಪೂಂಜಾಲಕಟ್ಟೆ ಪೊಲೀಸರು ಬಂಧನ ನಡೆಸಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ನಡೆಸಿ ದೌರ್ಜನ್ಯವೆಸಗಿದ್ದಲ್ಲದೆ ಜಾಮೀನು ರಹಿತ ಸೆಕ್ಷನ್‍ಗಳಡಿ ಎಫ್ ಐ ಆರ್ ದಾಖಲಿಸಿ ಬಳಿಕ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಈ ಬಗ್ಗೆ ತಕ್ಷಣ ಕಾರ್ಯಪ್ರವೃತ್ತರಾದ ವಕೀಲ ಸಮೂಹ ಬಂಟ್ವಾಳ ನ್ಯಾಯಾಲಯದಲ್ಲಿ ಒಟ್ಟು ಸೇರಿ ಮದ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದ ಹಿನ್ನಲೆಯಲ್ಲಿ ನ್ಯಾಯಾಲಯ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.
ಮಂಗಳೂರಿನ ಹಿರಿಯ ನ್ಯಾಯವಾದಿ ಎಸ್ ಪಿ ಚೆಂಗಪ್ಪ, ಮಂಗಳೂರು ವಕೀಲರ ಸಂಘದ ಉಪಾದ್ಯಕ್ಷರಾದ ಮನೋರಾಜ್, ಉದಯಾನಂದ ಎ, ವರದರಾಜ್, ಬಂಟ್ವಾಳದ ಹಿರಿಯ ವಕೀಲರಾದ ಸುರೇಶ್ ಪೂಜಾರಿ, ಉಮೇಶ್ ಕುಮಾರ್ ವೈ, ಪುತ್ತೂರು ವಕೀಲರಾದ ಪ್ರಸಾದ್, ಸುರಕ್ಷಿತ್, ಅರುಣ್ ಗಣಪತಿ ಅವರು ಯುವ ನ್ಯಾಯವಾದಿಯ ವಿರುದ್ದ ಪೊಲೀಸರು ದಾಖಲಿಸಿದ ಸುಳ್ಳು ಎಫ್ ಐ ಆರ್ ವಿರುದ್ದ ವಾದಿಸಿದ್ದರು. ವಕೀಲರ ವಾದ ಪುರಸ್ಕರಿಸಿದ ನ್ಯಾಯಾಧೀಶೆ ಭಾಗ್ಯಮ್ಮ ಅವರು ಯುವ ವಕೀಲರಿಗೆ ತಕ್ಷಣ ಮಧ್ಯಂತರ ಜಾಮೀನು ನೀಡುವ ಮೂಲಕ ಪೊಲೀಸರ ದುರುದ್ದೇಶಪೂರ್ವಕ ಪ್ರಕರಣಕ್ಕೆ ತಡೆ ನೀಡಿದ್ದರು ಎಂದು ವಕೀಲರ ತಂಡ ತಿಳಿಸಿದೆ.
ಪೊಲೀಸರಿಂದ ಹಲ್ಲೆಗೊಳಗಾದ ಯುವ ವಕೀಲ ಕುಲ್ ದೀಪ್ ಶೆಟ್ಟಿ ತಮ್ಮ ಜಾಗದ ತಕರಾರಿನ ಬಗ್ಗೆ ಬಂಟ್ವಾಳ ಸಿವಿಲ್ ನ್ಯಾಯಾಲಯದಲ್ಲಿ ತಾತ್ಕಾಲಿಕ ತಡಯಾಜ್ಞೆ ಪಡೆದುಕೊಂಡಿದ್ದರು. ಆದರೆ ಪ್ರತಿವಾದಿಗಳು ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿರುತ್ತಾರೆ ಎಂದು ಪೂಂಜಾಲಕಟ್ಟೆ ಪೊಲಿಸ್ ಠಾಣೆಗೆ ದೂರು ನೀಡಿದ್ದು, ಸದ್ರಿ ದೂರು ಸ್ವೀಕರಿಸಿದ ಪೊಲೀಸರು, ಎದುರುದಾರರಿಂದ ಪ್ರೇರಿತರಾಗಿ ರಾತ್ರೋರಾತ್ರಿ ಕುಲ್ ದೀಪ್ ಶೆಟ್ಟಿ ಅವರ ಮನೆಗೆ ದಾಳಿ ನಡೆಸಿ ಹಲ್ಲೆ ನಡೆಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ದೌರ್ಜನ್ಯ ಎಸಗಿರುತ್ತಾರೆ. ಹಲ್ಲೆಗೊಳಗಾದ ವಕೀಲರ ವಿರುದ್ಧ ಕ್ರೈಮ್ ನಂಬ್ರ 94/2022, ಐಪಿಸಿ ಸೆಕ್ಷನ್ 379, 447 ರಂತೆ ಪ್ರಕರಣ ದಾಖಲಿಸಿದ್ದರು ಎಂದು ವಕೀಲರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
0 comments:
Post a Comment