ಮಂಗಳೂರು, ಡಿಸೆಂಬರ್ 13, 2022 (ಕರಾವಳಿ ಟೈಮ್ಸ್) : ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಡೂರು-ಅಳಕೆ ಎಂಬಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರ ಶೌಚಾಲಯ ಗುಂಡಿ ತೋಡುತ್ತಿದ್ದ ವೇಳೆ ಮೇಲೆ ರಾಶಿ ಹಾಕಿದ್ದ ಮಣ್ಣು ಹಠಾತ್ ಕುಸಿದು ಬಿದ್ದು ಘೋರ ದುರಂತ ಮಂಗಳವಾರ ಸಂಭವಿಸಿದ್ದು, ಮಣ್ಣಿನಡಿ ಸಿಲುಕಿದ ಪರಿಣಾಮ ಓರ್ವ ಕಾರ್ಮಿಕ ಮೃತಪಟ್ಟಿದ್ದಾರೆ. ಇತರ ಇಬ್ಬರು ಕಾರ್ಮಿಕರು ಗಾಯಗೊಂಡಿದ್ದು, ಇನ್ನೋರ್ವ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾನೆ ಎನ್ನಲಾಗಿದೆ.
ದುರಂತದಲ್ಲಿ ಮಡಿದವರನ್ನು ಮೂಲತಃ ಅಡ್ಡೂರು-ಪೊಳಲಿ ನಿವಾಸಿ, ಪ್ರಸ್ತುತ ಅಡ್ಡೂರಿನಲ್ಲೇ ವಾಸವಾಗಿರುವ ಕೂಲಿ ಕಾರ್ಮಿಕ ಆದಂ (45) ಎಂದು ಗುರುತಿಸಲಾಗಿದ್ದು, ಪತ್ನಿ ಇದ್ದು, ಮಕ್ಕಳು ಇಲ್ಲ ಎಂದು ತಿಳಿದು ಬಂದಿದೆ. ಗುತ್ತಿಗೆದಾರ ಯೂಸುಫ್ ಎಂಬವರ ಗುತ್ತಿಗೆದಾರಿಕೆಯಲ್ಲಿ ನಿರ್ಮಾಣ ಹಂತದ ಮನೆಯೊಂದಕ್ಕೆ ಶೌಚಾಲಯ ಕಾಮಗಾರಿ ನಡೆಯುತ್ತಿದ್ದು, ಶೌಚಾಲಯದಿಂದ ತೆಗೆದ ಮಣ್ಣು ಗುಂಡಿಯ ಮೇಲ್ಭಾಗದಲ್ಲಿ ಅಲ್ಲೇ ರಾಶಿ ಹಾಕಿದ ಪರಿಣಾಮ ಅದೇ ಮಣ್ಣು ಗುಂಡಿಯ ಒಳಗೆ ಕುಸಿದು ಈ ದುರಂತ ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ನಾಲ್ಕು ಮಂದಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದ್ದು, ಈ ಪೈಕಿ ಆದಂ ಅವರು ಮಣ್ಣಿನಡಿ ಸಿಲುಕಿ ಮೃತಪಟ್ಟರೆ, ಇತರ ಇಬ್ಬರು ಕಾರ್ಮಿಕರಾದ ಇಂತಿಯಾಝ್ ಹಾಗೂ ಇಬ್ರಾಹಿಂ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೋರ್ವ ಕಾರ್ಮಿಕ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾನೆ ಎನ್ನಲಾಗಿದೆ.
ದುರಂತ ಸಂಭವಿಸಿದ ತಕ್ಷಣ ಜಮಾಯಿಸಿದ ಸ್ಥಳೀಯರು ಹರಸಾಹಸಪಟ್ಟು ಮಣ್ಣಿನಡಿಯಿಂದ ಆದಂ ಅವರನ್ನು ಹೊರ ತೆಗೆದು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದರಾದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
0 comments:
Post a Comment