ಬಂಟ್ವಾಳ, ನವೆಂಬರ್ 15, 2022 (ಕರಾವಳಿ ಟೈಮ್ಸ್) : ಪೊಲೀಸ್ ಇಲಾಖೆಯ ವತಿಯಿಂದ “ನಾವು ಸೇವೆ ಮಾಡಲು ಕಲಿಯುತ್ತೇವೆ (We Learnt to Serve)” ಎಂಬ ಧ್ಯೇಯ ವಾಕ್ಯದೊಂದಿಗೆ ಜಿಲ್ಲಾದ್ಯಂತ ಹಮ್ಮಿಕೊಳ್ಳಲಾದ “ಸ್ಟೂಡೆಂಟ್-ಪೊಲೀಸ್ ಕೆಡೆಟ್” ಯೋಜನೆಗೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಮಂಚಿ-ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಎಸ್ಪಿ ಋಷಿಕೇಶ್ ಭಗವಾನ್ ಸೊನಾವಣೆ ಅವರು ಚಾಲನೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಈ ಯೋಜನೆಯಡಿಯಲ್ಲಿ 17 ಶಾಲೆಗಳನ್ನು ಗುರುತಿಸಲಾಗಿದ್ದು, ಪ್ರತಿಯೊಂದು ಶಾಲೆಯಲ್ಲಿ ಬೋಧಕ ವೃಂದದೊಂದಿಗೆ ಚರ್ಚಿಸಿ 8 ಮತ್ತು 9ನೇ ತರಗತಿ ವಿದ್ಯಾರ್ಥಿ-ವಿದ್ಯಾರ್ಥಿನಿಯರುಗಳನ್ನು ಯೋಜನೆಯ ಅನುಷ್ಠಾನದ ಸಲುವಾಗಿ ಆಯ್ಕೆ ಮಾಡಲಾಗಿದೆ.
ಯೋಜನೆಯಲ್ಲಿ ಪರಿಣಿತ ಸಿಬ್ಬಂದಿಗಳಿಂದ ಶಾಲಾ ವಿದ್ಯಾರ್ಥಿಗಳಿಗೆ ಮಕ್ಕಳ ಹಕ್ಕುಗಳು ಮತ್ತು ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳ ಕುರಿತು ಅರಿವು ಹಾಗೂ ಕವಾಯತಿನ ಬೋಧನೆ ನೀಡಲಾಗುತ್ತದೆ. ಅಲ್ಲದೆ ಸರಕಾರದ ವಿವಿಧ ಇಲಾಖೆ-ಸಂಘ ಸಂಸ್ಥೆಗಳಿಗೆ ಭೇಟಿ ಏರ್ಪಡಿಸುವ ಮೂಲಕ ಇಲಾಖೆ-ಸಂಘ ಸಂಸ್ಥೆಗಳ ಕಾರ್ಯನಿರ್ವಹಣಾ ಪ್ರಕ್ರಿಯೆ ಕುರಿತಂತೆ ಅರಿವು ಮೂಡಿಸಲಾಗುತ್ತದೆ. ಮಕ್ಕಳಿಗೆ ನಾಗರಿಕರ ರಕ್ಷಣೆ, ಅಪರಾಧ ನಿಯಂತ್ರಣ, ವಿಪತ್ತು ನಿರ್ವಹಣೆಯ ಕುರಿತಂತೆ ತರಬೇತಿ ನೀಡಲಾಗುತ್ತದೆ. ಮಕ್ಕಳಿಗೆ ಸಮಸ್ಯೆಗಳನ್ನು ಎದುರಿಸುವ ಸಾಮಥ್ರ್ಯ, ಸಾಮಾಜಿಕ ಸಮಸ್ಯೆಗಳ ನಿರ್ವಹಣಾ ಕೌಶಲ್ಯ, ಸಹಾನುಭೂತಿ, ಶಿಸ್ತುಬದ್ದ ಜೀವನವನ್ನು ಅಳವಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಸದ್ರಿ ಯೋಜನೆಯ ವಿಶೇಷ ಅಂಗವಾಗಿ ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ವಿದ್ಯಾರ್ಥಿನಿಯರುಗಳ ಆತ್ಮರಕ್ಷಣಾ ಕೌಶಲ್ಯ ತರಬೇತಿಯೆಡೆಗೆ ವಿಶೇಷ ಆತ್ಮರಕ್ಷಣಾ ಕೌಶಲ್ಯ ತರಬೇತಿಯೆಡೆಗೆ ವಿಶೇಷ ಕಾಳಜಿ ವಹಿಸಲಾಗುವುದು ಎಂದು ಪೊಲೀಸ್ ಇಲಾಖಾ ಪ್ರಕಟಣೆ ತಿಳಿಸಿದೆ.
0 comments:
Post a Comment