ಬಂಟ್ವಾಳ, ನವೆಂಬರ್ 24, 2022 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ವಿವಿಧೆಡೆ ವಿವಿಧ ಧಾರ್ಮಿಕ ಸಂಸ್ಥೆ ಹಾಗೂ ಸಂಘಟನೆಗಳಿಗೆ ಸಂಬಂಧಿಸಿದ ಕಟ್ಟೆಗಳು ಹಾಗೂ ಕಾಣಿಕೆ ಡಬ್ಬಿಗಳಿದ್ದರೂ ನಿರ್ದಿಷ್ಟ ಧರ್ಮದ ಸಂಕೇತದ ವಿರುದ್ದ ಕೆಲ ಸಂಘಟನೆ ಕಾರ್ಯಕರ್ತರು ವಕ್ರ ದೃಷ್ಟಿ ಬೀರುತ್ತಿರುವ ಬಗ್ಗೆ ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶ್ (ರಿ) ಅಲ್ಲಿಪಾದೆ ಘಟಕ ತೀವ್ರ ಆಕ್ರೋಶ ಹಾಗೂ ವಿಷಾದ ವ್ಯಕ್ತಪಡಿಸಿದೆ.
ತಾಲೂಕಿನ ಮಣಿಹಳ್ಳ, ಸರಪಾಡಿ, ಅಜಿಲಮೊಗರು ರಸ್ತೆಯ ಇಕ್ಕೆಲಗಳಲ್ಲಿ ವಿವಿಧ ಧಾರ್ಮಿಕ ಸಂಸ್ಥೆಗಳ ಹಾಗೂ ವಿವಿಧ ಸಂಘಟನೆಗಳಿಗೆ ಸಂಬಂಧಿಸಿದ ಹಲವು ಕಟ್ಟೆಗಳು ಹಾಗೂ ಕಾಣಿಕೆ ಡಬ್ಬಿಗಳು ಇವೆ. ಆದರೆ ಇತ್ತೀಚೆಗೆ ಕೆಲ ಸಂಘಟನೆ ಕಾರ್ಯಕರ್ತರು ಕ್ರೈಸ್ತ ಧರ್ಮದ ಯೇಸು ಕ್ರಿಸ್ತನ ಪ್ರತಿಮೆಯನ್ನು ಮಾತ್ರ ತೆರವುಗೊಳಿಸುವಂತೆ ಆಗ್ರಹಿಸಿ ದೂರು ಹಾಗೂ ಮನವಿ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಎಂದು ಕ್ಯಾಥೋಲಿಕ್ ಸಭಾ ಅಲ್ಲಿಪಾದೆ ಘಟಕದ ಪದಾಧಿಕಾರಿಗಳು ವಿಷಾದ ವ್ಯಕ್ತಪಡಿಸಿದ್ದು, ಈ ಬಗ್ಗೆ ಬಂಟ್ವಾಳ ತಾಲೂಕು ತಹಲ್ದಾರ್ ಅವರಿಗೆ ಮನವಿ ಸಲ್ಲಿಸಿದೆ.
ತಾಲೂಕಿನ ಸರಕಾರಿ ಸ್ಥಳಗಳಲ್ಲಿರುವ ಕಾಣಿಕೆ ಡಬ್ಬಿ, ಕಟ್ಟೆಗಳು ಮೊದಲಾದ ಕುರುಹುಗಳ ಬಗ್ಗೆ ಕ್ರಮ ಕೈಗೊಳ್ಳುವುದಾದರೆ ನಿರ್ದಿಷ್ಟ ಧರ್ಮಕ್ಕೆ ಸೀಮಿತಗೊಂಡು ಕ್ರಮ ಕೈಗೊಳ್ಳದೆ ನ್ಯಾಯೋಚಿತವಾಗಿ ಮಾತ್ರ ಕ್ರಮ ಜರುಗಿಸುವಂತೆ ನಿಯೋಗ ತಹಶೀಲ್ದಾರ್ ಸ್ಮಿತಾ ರಾಮು ಅವರಿಗೆ ಮನವಿ ಸಲ್ಲಿಸಿದೆ.
ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ) ಇದರ ಅಲ್ಲಿಪಾದೆ ಘಟಕಾಧ್ಯಕ್ಷ ಸ್ಟ್ಯಾ£ ಮಿನೇಜಸ್, ಕಾರ್ಯದರ್ಶಿ ಫಿಲೋಮಿನಾ ಫೆರ್ನಾಂಡಿಸ್, ಪ್ರಮುಖರಾದ ನವೀನ್ ಮೊರಾಸ್, ಲವೀನಾ ಮೊರಾಸ್, ಪ್ರವೀಣ್ ಪಿಂಟೋ, ನೇವಿಲ್ ಪಿಂಟೋ, ಅವಿನಾಶ್ ಪಿಂಟೋ, ಮೇರಿ ಲಸ್ರಾದೋ ಮೊದಲಾದವರು ಮನವಿ ನೀಡಿದ ನಿಯೋಗದಲ್ಲಿದ್ದರು.
0 comments:
Post a Comment