ಬಂಟ್ವಾಳ, ನವೆಂಬರ್ 05, 2022 (ಕರಾವಳಿ ಟೈಮ್ಸ್) : ಕ್ರೀಡಾ ಸ್ಪೂರ್ತಿಯಿಂದ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಬೇಕು. ಉತ್ತಮವಾದ ತರಬೇತಿ ದೊರೆತಾಗ ಇನ್ನೂ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಿದೆ. ತೆರೆ ಮೆರೆಯಲ್ಲಿರುವ ಅನೇಕ ಪ್ರತಿಭೆಗಳು ನಮ್ಮಲ್ಲಿದ್ದಾರೆ. ಅವರಿಗೂ ಅವಕಾಶ, ತರಬೇತಿಗಳು ಸಿಗಬೇಕು. ಈ ನಿಟ್ಟಿನಲ್ಲಿ ಸಕಲ ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತ ತಾಲೂಕು ಕೀಡಾ ಸಂಕೀರ್ಣ ಸ್ಥಾಪಿಸಲು ಯೋಜನೆ ರೂಪಿಸಿರುವುದಾಗಿ ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಎಸೋಸಿಯೇಶನ್ ಆಶ್ರಯದಲ್ಲಿ ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಬಾಲಕ-ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಬಂಟ್ವಾಳ ತಾಲೂಕಿನ 14, 16, 18 ರ ವಯೋಮಾನದ ಮೂರು ತಂಡಗಳು ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಬಂಟ್ವಾಳ ತಾಲೂಕು ವಾಲಿಬಾಲ್ ಅಸೋಸಿಯೇಷನ್ ವತಿಯಿಂದ ಬಿ ಸಿ ರೋಡಿನ ಹೊಟೇಲ್ ರಂಗೋಲಿ ಸಭಾಂಗಣದಲ್ಲಿ ಆಯೋಜಿಸಲಾದ ವಿಜೇತ ವಿದ್ಯಾರ್ಥಿಗಳ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯುವಕರು ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಂಡಾಗ ದುಶ್ಚಟಗಳಿಂದ ದೂರ ಇರುವುದರ ಜೊತೆಗೆ ದುರಾಲೋಚನೆಗಳು ದೂರವಾಗಿ ಸಾಧನೆ ಮಾಡಲು ಸಾಧ್ಯವಿದೆ ಎದವರು ಹೇಳಿದರು.
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಮಾತನಾಡಿ ಆಟದಿಂದ ಮನಸ್ಸು ಸಂತೋಷಗೊಳ್ಳುತ್ತದೆ. ಮನಸ್ಸು ಉಲ್ಲಾಸಗೊಂಡಾಗ ದೇಹಾರೋಗ್ಯವೂ ಉತ್ತಮವಾಗುತ್ತದೆ ಎಂದರು.
ದೈಹಿಕ ಶಿಕ್ಷಣ ಪರಿವೀಕ್ಷಕ ವಿಷ್ಣು ನಾರಾಯಣ ಹೆಬ್ಬಾರ್, ವಾಲಿಬಾಲ್ ಅಸೋಸಿಯೇಷನ್ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಸುಪ್ರಿತ್ ಆಳ್ವ, ಪ್ರಮುಖರಾದ ಶಂಕರ್ ಶೆಟ್ಟಿ, ಅಶ್ರಫ್, ರಝಾಕ್, ಬಂಟ್ವಾಳ ತಾಲೂಕು ವಾಲಿಬಾಲ್ ಎಸೋಸಿಯೇಶನ್ ಪದಾಧಿಕಾರಿಗಳಾದ ಸಲಾಂ ಫರಂಗಿಪೇಟೆ, ಐತಪ್ಪ ಪೂಜಾರಿ, ಮಹಮ್ಮದ್ ಬೊಳ್ಳಾಯಿ, ಸತ್ತಾರ್ ಗೂಡಿನಬಳಿ ಮೊದಲಾದವರು ಭಾಗವಹಿಸಿದ್ದರು.
ಎಸೋಸಿಯಷನ್ ಕಾರ್ಯದರ್ಶಿ ಚಂದ್ರಹಾಸ ಬಂಟ್ವಾಳ ಸ್ವಾಗತಿಸಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಹಮ್ಮದ್ ಮುಸ್ತಾಫ ಗೋಳ್ತಮಜಲು ವಂದಿಸಿದರು. ದೈಹಿಕ ಶಿಕ್ಷಕ ಜಗದೀಶ್ ರೈ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment