ಬಂಟ್ವಾಳ, ನವೆಂಬರ್, 10, 2022 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಸಮೀಪದ ಸಜಿಪಮುನ್ನೂರು ಗ್ರಾಮದ ನಂದಾವರ-ಕೋಟೆ ಮೈದಾನದಲ್ಲಿ ಆಟವಾಡಿ ವಿಶ್ರಾಂತಿಯಲ್ಲಿದ್ದ ಯುವಕನಿಗೆ ಮೂರು ಮಂದಿಯ ತಂಡ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ಮಂಗಳವಾರ ರಾತ್ರಿ ವೇಳೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಟ್ವಾಳ ನಗರ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ನಂದಾವರ-ಕುರುಬರಕೇರಿ ನಿವಾಸಿ ಜಬ್ಬಾರ್ ಎಂಬವರ ಪುತ್ರ ಮುಹಮ್ಮದ್ ಅರ್ಫಾಸ್ (18) ಎಂಬಾತನೇ ಚೂರಿ ಇರಿತಕ್ಕೊಳಗಾದ ಯುವಕ. ಬಿ ಸಿ ರೋಡು ಸಮೀಪದ ನಿವಾಸಿಗಳಾದ ನವಾಝ್, ಸಫ್ವಾನ್ ಹಾಗೂ ಝಾಕಿರ್ ಎಂಬವರೇ ಚೂರಿ ಇರಿದ ಆರೋಪಿಗಳು.
ಅರ್ಫಾಸ್ ಎಂದಿನಂತೆ ಮಂಗಳವಾರ ಕೂಡಾ ಮನೆ ಬಳಿ ಇರುವ ನಂದಾವರ ಕೋಟೆಯ ಮೈದಾನಕ್ಕೆ ಗೆಳೆಯರ ಜೊತೆ ಆಟವಾಡಲು ಹೋಗಿ ಬಳಿಕ ರಾತ್ರಿ 8 ಗಂಟೆ ವೇಳೆಗೆ ಮೈದಾನದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಈತನ ಪರಿಚಯಸ್ಥರು ಹಾಗೂ ಸ್ನೇಹಿತರೇ ಆಗಿರುವ ತಾಳಿಪಡಪ್ಪು ನವಾಝ್ ಆತನ ಮೂವರು ಗೆಳೆಯರೊಂದಿಗೆ ಪಲ್ಸರ್ ಬೈಕಿನಲ್ಲಿ ಬಂದಿದ್ದು, ಈ ಪೈಕಿ ನವಾಜ್ ಎಂಬಾತ ಅರ್ಫಾಸ್‍ನಲ್ಲಿ 10 ಸಾವಿರ ರೂಪಾಯಿ ಸಾಲ ಕೇಳಿದ್ದಾನೆ. ಈ ಸಂದರ್ಭ ಅರ್ಫಾಸ್ ಕೆಲಸಕ್ಕೆ ಹೋಗದೆ ಮನೆಯಲ್ಲಿ ಇದ್ದೇನೆ. ಈಗ ನನ್ನಲ್ಲಿ ಸಾಲ ಕೊಡಲು ಹಣವಿಲ್ಲ ಎಂದು ಹೇಳಿದ್ದು, ಈ ಸಂದರ್ಭ ನವಾಜನು ಬೇವರ್ಸಿ ನೀನು ಸಾಲ ಕೇಳಿದಾಗ ನಾನು ಕೊಡುತ್ತೇನೆ, ನಾನು ಕೇಳಿದಾಗ ನೀನು ಯಾಕೆ ಕೊಡುವುದಿಲ್ಲ ಎಂದು ಹೇಳಿ ಆತನ ಪ್ಯಾಂಟಿನ ಕಿಸೆಯಲ್ಲಿ ಇಟ್ಟುಕೊಂಡು ಬಂದಿದ್ದ ಚೂರಿಯನ್ನು ತೆಗೆದು ಅರ್ಫಾಸನ ಎದೆಗೆ ತಿವಿದು ರಕ್ತಗಾಯ ಮಾಡಿರುತ್ತಾನೆ.
ಚೂರಿ ಇರಿತದಿಂದ ಗಂಭೀರ ಗಾಯಗೊಂಡ ಅರ್ಫಾಸ್ ಬೊಬ್ಬೆ ಹಾಕಿದಾಗ ಆರೋಪಿಗಳು ಬಂದಿದ್ದ ಬೈಕಿನಲ್ಲಿ ಪರಾರಿಯಾಗಿರುತ್ತಾರೆ. ಅರ್ಫಾಸನ ಬೊಬ್ಬೆ ಕೇಳಿ, ಸ್ವಲ್ವ ದೂರದಲ್ಲಿದ್ದ ಸಾದಿಕ್ ಹಾಗೂ ರಾಫಿತ್ ಎಂಬವರು ಬಂದಿದ್ದು, ಅವರ ಸಹಾಯದಿಂದ ಅರ್ಫಾಸ್ ಮನೆಗೆ ಬಂದಿರುತ್ತಾನೆ. ಬಳಿಕ ಆತನ ಅಣ್ಣ ಮಹಮ್ಮದ್ ಸಫಾನ ಎಂಬಾತ ಅರ್ಫಾಸನನ್ನು ಚಿಕಿತ್ಸೆಗಾಗಿ ಬಂಟ್ವಾಳ ಸರಕಾರಿ ಆಸ್ವತ್ರೆಗೆ ಚಿಕಿತ್ಸೆಗೆ ಕರೆ ತಂದಿರುವುದಾಗಿದೆ. ಗಾಯಾಳು ಅರ್ಫಾಸ್ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 108/2022 ಕಲಂ 504, 324, 307 ಜೊತೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment