ಬಂಟ್ವಾಳ, ನವೆಂಬರ್ 14, 2022 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಹಾಗೂ ಬಾಣಂತಿಯರಿಗೆ ವಿತರಿಸುವ ಪೌಷ್ಠಿಕ ಆಹಾರದ ಅಕ್ಕಿಯಲ್ಲಿ ಹುಳ ಹಾಗೂ ಗುಗ್ಗುರು ಇರುವುದು ಸಾಕ್ಷಿ ಸಮೇತ ಬಯಲಾದ ಬಳಿಕ ಕುಕ್ಕಿಪ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ಅಂಗನವಾಡಿ ಕಾರ್ಯರ್ತೆ ಹಾಗೂ ಸಹಾಯಕಿಯರನ್ನು ಪಂಚಾಯತ್ ಕಚೇರಿಗೆ ಕರೆಸಿ ಅವಾಚ್ಯವಾಗಿ ಬೈದು ನಿಂದಿಸಿದ್ದಲ್ಲದೆ ಬೆದರಿಕೆ ಒಡ್ಡಿರುವ ಪ್ರಕರಣವನ್ನು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ತೀವ್ರವಾಗಿ ಖಂಡಿಸಿದೆ.
ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದ ನಿಯೋಗ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ಸಂದರ್ಭ ಅಂಗನಾಡಿ ಕೇಂದ್ರಗಳ ಪೌಷ್ಟಿಕಾಂಶ ವಿತರಣೆಯ ಅಕ್ಕಿಯಲ್ಲಿ ಜೀವಂತ ಹುಳಗಳು ಹರಿದಾಡಿದ ಪ್ರಕರಣ ಪತ್ತೆಯಾಗಿತ್ತು. ಈ ಬಗ್ಗೆ ಅವರು ಮಾಧ್ಯಮಗಳ ಗಮನ ಸೆಳೆದಿದ್ದರು. ಪ್ರಕರಣ ಮಾಧ್ಯಮಗಳಲ್ಲು ದೊಡ್ಡ ಮಟ್ಟದ ಸುದ್ದಿಯಾಗಿತು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಲಂಕುಷÀವಾಗಿ ತನಿಖೆ ನಡೆಸಿ ಮುಂದಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಅಂಗನವಾಡಿ ಕೇಂದ್ರಗಳಿಗೆ ವಿತರಿಸುವಂತೆ ಮಾಜಿ ಸಚಿವ ಬಿ ರಮಾನಾಥ ರೈ ಅವರು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದರು.
ಈ ಎಲ್ಲಾ ಬೆಳವಣಿಗೆಗಳ ಬಳಿಕ ಇದೀಗ ಕುಕ್ಕಿಪ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರನ್ನು ಪಂಚಾಯತ್ ಕಚೇರಿಗೆ ಕರೆಸಿ ಬೈದು ಬೆದರಿಕೆ ಹಾಕಿರುವ ಘಟನೆ ವರದಿಯಾಗಿದೆ. ಈ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಅವರು ಘಟನೆಯನ್ನು ಕಠಿಣ ಶಬ್ದಗಳಲ್ಲಿ ಖಂಡಿಸಿದ್ದಾರೆ.
ಅಂಗನವಾಡಿ ಕೇಂದ್ರಕ್ಕೆ ಆಹಾರವನ್ನು ವಿತರಿಸುವ ವಿಚಾರದಲ್ಲಿ ಗಂಭೀರತೆಯನ್ನು ಕಾಯ್ದುಕೊಂಡು ಪುಟಾಣಿ ಮಕ್ಕಳ ಆರೋಗ್ಯ ಕಾಪಾಡುವಲ್ಲಿ ಯಾವುದೇ ರೀತಿಯ ರಾಜಕೀಯ ಮಾಡದೆ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಅಂಗನವಾಡಿ ಕೇಂದ್ರಗಳಿಗೆ ವಿತರಿಸಲು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಬೇಬಿ ಕುಂದರ್ ಆಗ್ರಹಿಸಿದ್ದಾರೆ.
0 comments:
Post a Comment