ಆಝಾನ್, ಸುಪ್ರಭಾತದಿಂದ ಯಾವ ಧರ್ಮದ ಜನರಿಗೂ ತೊಂದರೆಯಾಗಿಲ್ಲ, ಎಲ್ಲವೂ ಸರಕಾರದ ನೀತಿಗಳ ವಿರುದ್ದ ಜನ ಎದ್ದೇಳದಂತೆ ನಡೆಯುವ ಪಿತೂರಿಯಾಗಿದೆ : ಕಮ್ಯುನಿಸ್ಟ್ ಮುಖಂಡ ವಿಜಯ ಭಾಸ್ಕರ್ ಕಿಡಿ - Karavali Times ಆಝಾನ್, ಸುಪ್ರಭಾತದಿಂದ ಯಾವ ಧರ್ಮದ ಜನರಿಗೂ ತೊಂದರೆಯಾಗಿಲ್ಲ, ಎಲ್ಲವೂ ಸರಕಾರದ ನೀತಿಗಳ ವಿರುದ್ದ ಜನ ಎದ್ದೇಳದಂತೆ ನಡೆಯುವ ಪಿತೂರಿಯಾಗಿದೆ : ಕಮ್ಯುನಿಸ್ಟ್ ಮುಖಂಡ ವಿಜಯ ಭಾಸ್ಕರ್ ಕಿಡಿ - Karavali Times

728x90

5 November 2022

ಆಝಾನ್, ಸುಪ್ರಭಾತದಿಂದ ಯಾವ ಧರ್ಮದ ಜನರಿಗೂ ತೊಂದರೆಯಾಗಿಲ್ಲ, ಎಲ್ಲವೂ ಸರಕಾರದ ನೀತಿಗಳ ವಿರುದ್ದ ಜನ ಎದ್ದೇಳದಂತೆ ನಡೆಯುವ ಪಿತೂರಿಯಾಗಿದೆ : ಕಮ್ಯುನಿಸ್ಟ್ ಮುಖಂಡ ವಿಜಯ ಭಾಸ್ಕರ್ ಕಿಡಿ

ಬಂಟ್ವಾಳ, ನವೆಂಬರ್ 05, 2022 (ಕರಾವಳಿ ಟೈಮ್ಸ್) : ನಾಡಿನ ಜನ ಎಲ್ಲ ಧರ್ಮ-ಜಾತಿ, ಭಾಷೆಗಳನ್ನು ಮೀರಿ ಅನ್ಯೋನ್ಯತೆಯಿಂದ ಇಂದಿಗೂ ಜೀವಿಸುತ್ತಿದ್ದು, ವಿವಿಧ ಧರ್ಮಗಳ ಕಟ್ಟುಪಾಡುಗಳು ವಿವಿಧ ಧರ್ಮದ ಜನರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗಿಲ್ಲ. ಎಲ್ಲರೂ ಒಂದಕ್ಕೊಂದು ಪೂರಕವಾಗಿ, ಹೊಂದಾಣಿಕೆಯಿಂದ ಜೀವಿಸುತ್ತಲೇ ಬರುತ್ತಿದ್ದಾರೆ. ಆಝಾನ್ ಕೇಳಿದರೆ ಯಾರಿಗೂ ತೊಂದರೆಯಾಗಿಲ್ಲ, ಸುಪ್ರಭಾತವನ್ನು ಎಲ್ಲರೂ ಕೇಳಿಸಿಕೊಳ್ಳುತ್ತಿದ್ದಾರೆ. ಇದರಿಂದ ಯಾವುದೇ ಸಾಮಾಜಿಕ ಶಾಂತಿಭಂಗವಾಗಿಯೇ ಇಲ್ಲ. ಆದರೆ ಸರಕಾರಗಳು ತಮ್ಮ ತಪ್ಪು ನೀತಿಗಳಿಂದಾಗಿ ಜನರಿಗೆ ಆಗುತ್ತಿರುವ ಅನ್ಯಾಯ, ಕಷ್ಟ-ಸಂಕಷ್ಟಗಳ ವಿರುದ್ದ ಧ್ವನಿಯೆತ್ತದಂತೆ ತಡೆಯುವ ಏಕಮಾತ್ರ ಉದ್ದೇಶದಿಂದ ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳನ್ನು ಛೂ ಬಿಟ್ಟು ಇಂತಹ ಷಡ್ಯಂತ್ರಗಳನ್ನು ನಡೆಸಿ ತಮ್ಮ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಾಮ್ರೆಡ್ ವಿಜಯ ಭಾಸ್ಕರ ಡಿ ಎ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 

ಶನಿವಾರ ಸಂಜೆ ಬಿ ಸಿ ರೋಡಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದೇಶದಲ್ಲಿ ನಿರುದ್ಯೋಗ, ಬೆಲೆ ಏರಿಕೆ, ವೈದ್ಯಕೀಯ, ಆರ್ಥಿಕ ಮೊದಲಾದ ಸಮಸ್ಯೆಗಳು ತಾರಕಕ್ಕೇರಿ ಜನ ಕಷ್ಟಗಳ ಮೇಲೆ ಕಷ್ಟ ಅನುಭವಿಸುತ್ತಿದ್ದರೂ ಸರಕಾರ ನಡೆಸುವ ಮಂದಿ ಮಾತ್ರ ಇನ್ನೂ ಧರ್ಮ, ಜಾತಿ, ಭಾಷೆ ಎಂದು ಜನರನ್ನು ಭಾವನಾತ್ಮಕವಾಗಿ ಸುಲಿಗೆ ಮಾಡುತ್ತಿದ್ದಾರೆ. ಇದರ ವಿರುದ್ದ ಜನ ಚಳುವಳಿ ರೂಪುಗೊಳ್ಳಬೇಕಾಗಿದೆ ಎಂದರು. 

ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ಕೃಷಿ ಕೂಲಿ ಕಾರ್ಮಿಕರು, ಅಸಂಘಟಿತ ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕಾದ ಸರಕಾರಗಳು ಆ ಬಗ್ಗೆ ಚಕಾರ ಎತ್ತದೆ ಜನರ ವಿರುದ್ದ ಜನರನ್ನು ಎತ್ತಿಕಟ್ಟಿ ಅರಾಜತೆ ಸೃಷ್ಟಿಸುತ್ತಿದೆ ಎಂದು ಆರೋಪಿಸಿದ ಅವರು ಕಾರ್ಮಿಕರ ಬವಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಾರ್ಮಿಕರಿಗೆ ಜೀವನ ನಡೆಸುವುದೇ ದುಸ್ತರವಾಗುತ್ತಿದೆ. ನಿರಂತವಾಗಿ ಕಾಡುತ್ತಿರುವ ಬೆಲೆ ಏರಿಕೆ ಸಮಸ್ಯೆ ಜನಸಾಮಾನ್ಯರನ್ನು ಏದುಸಿರುವ ಬಿಡುವಂತೆ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಕೆ ಎಸ್ ಆರ್ ಟಿ ಸಿ ನಿಗಮಗಳಡಿ ದುಡಿಯುತ್ತಿರುವ ನೌಕರರಿಗೆ ನ್ಯಾಯಬದ್ದವಾಗಿ ಸಿಗಬೇಕಾದ ಸವಲತ್ತುಗಳನ್ನು ಪಾವತಿಸದೆ, ಸುಪ್ರೀಂ ಕೋರ್ಟಿನ ತೀರ್ಪನ್ನೂ ಲೆಕ್ಕಿಸದೆ ಹೋರಾಟ, ಒಗ್ಗಟ್ಟನ್ನು ಮುರಿಯಲು ಸಂಚು ರೂಪಿಸುತ್ತಾ ನಿಗಮಗಳನ್ನು ಮತ್ತೆ ಒಡೆದು ಖಾಸಗೀಕರಿಸುವ ಹುನ್ನಾರ ನಡೆಯುತ್ತಿದೆ. ರಾಜ್ಯ ಸರಕಾರದ ಈ ನೀತಿಯನ್ನು ಎಐಟಿಯುಸಿ ಖಂಡಿಸುತ್ತಲ್ಲದೆ ಈ ಬಗ್ಗೆ ರಾಜ್ಯದಲ್ಲಿ ಚಳುವಳಿ ರೂಪಿಸಿದೆ ಎಂದ ವಿಜಯ ಭಾಸ್ಕರ ಪಿಂಚಣಿದಾರರಿಗೆ ಕನಿಷ್ಠ 6 ಸಾವಿರ ರೂಪಾಯಿ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು. ಸರಕಾರದ ವಿವಿಧ ಯೋಜನೆಗಳಡಿ ದುಡಿಯುತ್ತಿರುವ ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರಿಗೆ ಸರಿಯಾದ ಸಂಬಳ, ಸವಲತ್ತು ನೀಡದೆ ಅವರ ಉದ್ಯೋಗವನ್ನೂ ಖಾಯಂಗೊಳಿಸದೆ ಸತಾಯಿಸಲಾಗುತ್ತಿದೆ. ಈ ಬಗ್ಗೆ ಎಐಟಿಯುಸಿ ಚಳುವಳಿಯನ್ನು ಮತ್ತಷ್ಟು ತೀವ್ರಗೊಳಿಸುತ್ತದೆ ಎಂದರು. 

ಸುದ್ದಿಗೋಷ್ಠಿಯಲ್ಲಿ ಸೀತಾರಾಮ, ಸುರೇಶ್ ಕುಮಾರ್, ಎಚ್ ವಿ ರಾವ್, ಶೇಖರ್,  ಪ್ರವೀಣ್ ಕುಮಾರ್ ಮೊದಲಾದವರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಆಝಾನ್, ಸುಪ್ರಭಾತದಿಂದ ಯಾವ ಧರ್ಮದ ಜನರಿಗೂ ತೊಂದರೆಯಾಗಿಲ್ಲ, ಎಲ್ಲವೂ ಸರಕಾರದ ನೀತಿಗಳ ವಿರುದ್ದ ಜನ ಎದ್ದೇಳದಂತೆ ನಡೆಯುವ ಪಿತೂರಿಯಾಗಿದೆ : ಕಮ್ಯುನಿಸ್ಟ್ ಮುಖಂಡ ವಿಜಯ ಭಾಸ್ಕರ್ ಕಿಡಿ Rating: 5 Reviewed By: karavali Times
Scroll to Top