ಬಂಟ್ವಾಳ, ಅಕ್ಟೋಬರ್ 04, 2022 (ಕರಾವಳಿ ಟೈಮ್ಸ್) : ನಿಷೇಧಿತ ಸಂಘಟನೆ ಪಿ ಎಫ್ ಐ ಹೆಸರಿನಲ್ಲಿ ಯಾಓ ಕಿಡಿಗೇಡಿಗಳು ರಸ್ತೆಯಲ್ಲಿ ಎಚ್ಚರಿಕೆ ಬರಹ ಬರೆದು ಸಮಾಜದ ಅಶಾಂತಿಗೆ ಯತ್ನಿಸಿದ ಘಟನೆ ತಾಲೂಕಿನ ಪಿತಾಬೆಟ್ಟು ಗ್ರಾಮದ ಸ್ನೇಹಗಿರಿ ಎಂಬಲ್ಲಿನ ನೈನಾಡು-ಗೋಳಿಯಂಗಡಿ ರಸ್ತೆಯಲ್ಲಿ ಕಂಡು ಬಂದಿದ್ದು, ಈ ಬಗ್ಗೆ ಲಕ್ಷ್ಮಿ ನಾರಾಯಣ ಹೆಗ್ಡೆ ಎಂಬವರು ಸೂಕ್ತ ಕ್ರಮಕ್ಕೆ ಆಗ್ರಹಿಸಿ ಪೂಂಜಾಲಕಟ್ಟೆ ಠಾಣೆಗೆ ದೂರು ನೀಡಿದ್ದಾರೆ.
ಅ 3 ಮಧ್ಯರಾತ್ರಿಯಿಂದ ಅ 4 ಬೆಳಗ್ಗಿನ ಅವಧಿಯಲ್ಲಿ ಬಂಟ್ವಾಳ ತಾಲೂಕು ಪಿಲಾತಬೆಟ್ಟು ಗ್ರಾಮದ ಸ್ನೇಹಗಿರಿ ಎಂಬಲಿ ನೈನಾಡು-ಗೋಳಿಯಂಗಡಿ ಕಡೆಗೆ ಹಾದು ಹೋಗುವ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಯಾರೋ ಕಿಡಿಗೇಡಿಗಳು “ಚಡ್ಡಿಗಳೇ ಎಚ್ಚರಿಕೆ” “ಪಿ ಎಫ್ ಐ - ನಾವು ಮರಳಿ ಬರುತ್ತೇವೆ” ಎಂದು ಬಿಳಿ ಬಣ್ಣದ ಸ್ಪ್ರೇ ಪೈಂಟಿನಿಂದ ಬೆದರಿಕೆ ಬರಹಗಳನ್ನು ಬರೆದು ಡಾಮಾರು ರಸ್ತೆಯನ್ನು ಹಾಳು ಮಾಡಿದ್ದಲ್ಲದೆ, ಸಮಾಜದ ಸಾಮಾಜಿಕ ಅಶಾಂತಿಗೆ ಹಾಗೂ ಕೋಮು ದ್ವೇಷಕ್ಕೆ ಕಾರಣವಾಗಿದ್ದು, ಬರಹದ ಹಿಂದಿರುವ ಸಮಾಜ ಘಾತುಕ ಶಕ್ತಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರ ಲಕ್ಷ್ಮಿನಾರಾಯಣ ಹೆಗ್ಡೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 74/2022 ಕಲಂ 153, 427, 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ ಎಂದು ಠಾಣಾ ಪಿಎಸ್ಸೈ ಸುತೇಶ್ ಕೆಪಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
0 comments:
Post a Comment