ಮಂಗಳೂರು, ಅಕ್ಟೋಬರ್ 18, 2022 (ಕರಾವಳಿ ಟೈಮ್ಸ್) : ಮಂಗಳೂರಿನ ಸುರತ್ಕಲ್ ಟೋಲ್ ಪ್ಲಾಝಾ ತೆರವಿಗಾಗಿ ಇಂದು (ಅ 18) ಭಾರೀ ಪ್ರತಿಭಟನೆ ನಡೆಯುತ್ತಿದ್ದು, ಬಿಜೆಪಿ ಹೊರತುಪಡಿಸಿ ಕಾಂಗ್ರೆಸ್ ಸಹಿತ ಇತರ ಬಹುತೇಕ ಸಮಾನ ಮನಸ್ಕ ಸಂಘಟನೆಗಳ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಕೈ ಜೋಡಿಸಿದ್ದಾರೆ. ಭಾರೀ ಪೊಲೀಸ್ ಸರ್ಪಗಾವಲಿನ ನಡುವೆಯೇ ಮಂಗಳವಾರ ಬೆಳಿಗ್ಗೆ ಭಾರೀ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಜಮಾಯಿಸಿ ಟೋಲ್ ಕೇಂದ್ರವನ್ನು ತಕ್ಷಣದಿಂದಲೇ ತೆರವಿಗೆ ಆಗ್ರಹಿಸಿದರು.
ಈ ಮಧ್ಯೆ ಸುರತ್ಕಲ್ ಟೋಲ್ ಕೇಂದ್ರದ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕೈ ಯುವ ನಾಯಕ ಮಿಥುನ್ ರೈ ಟೋಲ್ ಪ್ಲಾಝಾ ಮೇಲೇರಿ ಪ್ರತಿಭಟನೆಯ ಕೇಂದ್ರ ಬಿಂದುವಾದರು. ಮಿಥುನ್ ಟೋಲ್ ಪ್ಲಾಝಾ ಮೇಲೇರುತ್ತಿದ್ದಂತೆ ಸುತ್ತುವರಿದ ಪೊಲೀಸರು ಬಂಧನಕ್ಕೆ ಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ಮಾತಿನ ವಿನಿಮಯ ಹಾಗೂ ನೂಕಾಟವೂ ನಡೆಯಿತು.
ಸುರತ್ಕಲ್ ಅಕ್ರಮ ಟೋಲ್ ತೆರವು ಆಗ್ರಹಿಸಿ ಟೋಲ್ ವಿರೋಧಿ ಸಮಿತಿ ಈ ಪ್ರತಿಭಟನೆ ಆಯೋಜಿಸಿದ್ದು, ಹಲವು ಕಾಂಗ್ರೆಸ್ ಮುಖಂಡರು ಮುಂಚೂಣಿಯಲ್ಲಿ ಭಾಗವಹಿಸಿದ್ದರು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೆÇಲೀಸರು ಹರಸಾಹಸಪಟ್ಟರು. ಈ ವೇಳೆ ಪೊಲೀಸರು ಕಾಂಗ್ರೆಸ್ ಮುಖಂಡರಾದ ಮೊಯಿದಿನ್ ಬಾವಾ, ಐವನ್ ಡಿ’ಸೋಜ, ಜೆ ಆರ್ ಲೋಬೋ ಸಹಿತ ಸುಮಾರು 500ಕ್ಕೂ ಅಧಿಕ ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ಪ್ರತಿಭಟನಾ ಸ್ಥಳ ಸಹಿತ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. 6 ಕೆಎಸ್‍ಆರ್‍ಪಿ, 5 ಸಿಎಆರ್, 250 ಸಿವಿಲ್, 4 ಎಸಿಪಿ, 15 ಇನ್ಸ್‍ಪೆಕ್ಟರ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೆÇಲೀಸರನ್ನು ನಿಯೋಜಿಸಲಾಗಿದೆ.
0 comments:
Post a Comment