ನಮ್ಮ ಸರಕಾರ ವಿದ್ಯಾಭ್ಯಾಸಕ್ಕೆ ನೆರವು ನೀಡಿ ವಿದ್ಯಾರ್ಥಿಗಳ ಭವಿಷ್ಯ ಬೆಳಗಿದರೆ, ಬಿಜೆಪಿ ಸರಕಾರ ಯೋಜನೆಗಳನ್ನು ರದ್ದು ಮಾಡುತ್ತಿದೆ
ಬೆಂಗಳೂರು ಅಕ್ಟೋಬರ್ 22, 2022 (ಕರಾವಳಿ ಟೈಮ್ಸ್) : ಶಿಕ್ಷಣ ಇಲಾಖೆ ರಾಜ್ಯದ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ವಿದ್ಯಾರ್ಥಿಗಳ ಪೋಷಕರಿಂದ ದೇಣಿಗೆ ರೂಪದಲ್ಲಿ ಎಸ್‍ಡಿಎಂಸಿಗಳ ಮೂಲಕ ಮಾಸಿಕ ತಲಾ 100 ರೂಪಾಯಿ ಸಂಗ್ರಹ ಮಾಡಲು ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಗೆ ವಿರೋಧ ಪಕ್ಷ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ವಿಧಾನಸಭೆಯ ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಿಜೆಪಿ ಸರಕಾರಕ್ಕೆ ಎಲ್ಲ ಕ್ಷೇತ್ರಗಳಲ್ಲೂ ಕೈಯಾಡಿಸಿ ಮುಗಿಯಿತು. ಇದೀಗ ಶಿಕ್ಷಣ ಕ್ಷೇತ್ರಕ್ಕೆ ಕೈ ಹಾಕಿದ್ದು, ಸರಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುವ ಬಡ ವಿದ್ಯಾರ್ಥಿಗಳ ಪೋಷಕರ ಜೇಬಿಗೂ ಕತ್ತರಿ ಹಾಕುವ ಸರಕಾರದ ಕ್ರಮ ಅತ್ಯಂತ ಖಂಡನೀಯ ಎಂದಿದ್ದಾರೆ.
ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ಪೋಷಕರಿಂದ ಹಣ ಸಂಗ್ರಹಿಸುವಂತೆ ಹೊರಡಿಸಿರುವ ಆದೇಶವನ್ನು ತಕ್ಷಣ ವಾಪಾಸು ಪಡೆಯಬೇಕು ಮಾತ್ರವಲ್ಲ ಅನುದಾನ ಕೊರತೆಯಿಂದ ಸ್ಥಗಿತಗೊಂಡಿರುವ ಎಲ್ಲಾ ಶೈಕ್ಷಣಿಕ ಯೋಜನೆಗಳಿಗೆ ಪುನರ್ ಚಾಲನೆ ನೀಡಬೇಕು ಎಂದವರು ಆಗ್ರಹಿಸಿದ್ದಾರೆ.
ಸರಕಾರಿ ಶಾಲೆಯ ಬಡ ಮಕ್ಕಳ ಮೇಲೆ ಬಿಜೆಪಿ ಸರಕಾರದ ಭ್ರಷ್ಟ ಕಣ್ಣು ಬಿದ್ದಿದೆ. ಕಮಿಷನ್ ಹೆಸರಲ್ಲಿ ರಾಜ್ಯದ ಖಜಾನೆ ಲೂಟಿ ಆಯಿತು, ಈಗ ಬಡ ಮಕ್ಕಳ ಪೋಷಕರ ಜೇಬಿಗೂ ಕತ್ತರಿ ಹಾಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಬಿಜೆಪಿ ಸರಕಾರಕ್ಕೆ ಇಂತಹ ದೈನೇಸಿ ಸ್ಥಿತಿ ಬರಬಾರದಿತ್ತು. ಕಾಂಗ್ರೆಸ್ ಸರಕಾರ ವಿದ್ಯಾರ್ಥಿಗಳಿಗೆ ಹಾಲು, ಬಿಸಿಯೂಟ, ಸಮವಸ್ತ್ರ-ಶೂ, ವಿದ್ಯಾಸಿರಿ, ಹಾಸ್ಟೆಲ್ ಸೌಲಭ್ಯಗಳನ್ನು ನೀಡಿತ್ತು. ಅವರಿಂದ ಒಂದೊಂದನ್ನೇ ಕಿತ್ತುಕೊಳ್ಳುತ್ತಿರುವ ಬಿಜೆಪಿ ಸರಕಾರ ಇದೀಗ ಅವರಿಂದ ದುಡ್ಡು ಕಿತ್ತುಕೊಳ್ಳಲು ಹೊರಟಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೇದಿಕೆ ಮೇಲೆ ನಿಂತು ವಿರೋಧ ಪಕ್ಷಗಳಿಗೆ ಧಮ್ ಹಾಗೂ ಧಮ್ಕಿ ಹಾಕಿ ಮಾತನಾಡುವ ಸಿಎಂ ಬೊಮ್ಮಾಯಿ ಅವರು ಧಮ್ ತಾಕತ್ ಇದ್ದರೆ ತಕ್ಷಣ ವಿದ್ಯಾರ್ಥಿಗಳ ನೆರವಿನ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿ ತಮ್ಮ ತಾಕತ್ ತೋರಿಸಲಿ ಎಂದು ಮಾಜಿ ಸಿಎಂ ಸವಾಲೆಸೆದಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಇದ್ದ ಯೋಜನೆಗಳ ಸಾಲಿಗೆ ಇನ್ನಷ್ಟನ್ನು ಸೇರಿಸಿ ದೇಶದ ಭವಿಷ್ಯದ ಕುಡಿಗಳಾದ ವಿದ್ಯಾರ್ಥಿಗಳ ಭವಿಷ್ಯ ಬೆಳಗಬೇಕಾದ ಜವಾಬ್ದಾರಿ ಹೊಂದಿರುವ ಸರಕಾರ ವಿದ್ಯಾರ್ಥಿಗಳ ಅವಕಾಶಗಳಿಗೆ ಬ್ರೇಕ್ ಹಾಕಹೊರಟಿರುವುದು ಅಕ್ಷಮ್ಯ ಹಾಗೂ ಖಂಡನೀಯ ಎಂದಿರುವ ಮಾಜಿ ಸಿಎಂ ಸಿದ್ದರಾಮಯ್ಯ ಸರಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಪ್ರತಿ ವರ್ಷ ಸರ್ಕಾರ ಬಜೆಟ್‍ನಲ್ಲಿ ಅನುದಾನ ಬಿಡುಗಡೆ ಮಾಡುತ್ತದೆ ಎಂದಿದ್ದಾರೆ.
ನಮ್ಮ ಸರಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲಗಳನ್ನು ಮನ್ನಾ ಮಾಡಿ ವ್ಯಾಸಂಗಕ್ಕೆ ನೆರವು ನೀಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕು ನೀಡಿದರೆ ಈಗಿನ ಬಿಜೆಪಿ ಸರಕಾರ ಓದುವ ಮಕ್ಕಳಿಗೆ ತ್ರಿಶೂಲ ದೀಕ್ಷೆ ನೀಡಿ ಅವರ ಬದುಕನ್ನು ಕತ್ತಲಿಗೆ ದೂಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
0 comments:
Post a Comment