ಬಂಟ್ವಾಳ, ಅಕ್ಟೋಬರ್ 30, 2022 (ಕರಾವಳಿ ಟೈಮ್ಸ್) : ಆತಂಕ ಮನುಷ್ಯನ ಸ್ವಭಾವ. ಆದರೆ ಮಿತಿ ಮೀರಿದಾಗ ಅದು ಮನೋ ವ್ಯಾದಿಗೆ ಕಾರಣವಾಗುತ್ತದೆ. ಮಾನಸಿಕ ರೋಗವನ್ನು ಇಂದಿನಿಂದ ನಾಳೆಗೆ ರೋಗ ಗುಣಪಡಿಸಲು ಸಾಧ್ಯವಿಲ್ಲ. ಆದರೆ ರೋಗಕ್ಕೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆಯನ್ನು ನೀಡಿದಾಗ ರೋಗ ಗುಣಪಡಿಸಲು ಸಾಧ್ಯವಿದೆ ಎಂದು ಮನೋ ಶಾಸ್ತ್ರಜ್ಞ ಡಾ ಜೋನಾತನ್ ಹೇಳಿದರು.
ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ, ಬಂಟ್ವಾಳ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆÀ, ದೇರಳಕಟ್ಟೆ ಕೆ ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಮನೋರೋಗ ಚಿಕಿತ್ಸಾ ವಿಭಾಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಫರಂಗಿಪೇಟೆ ಸೇವಾಂಜಲಿ ಸಭಾಂಗಣದಲ್ಲಿ ಭಾನುವಾರ ನಡೆದ ಮಾನಸಿಕ ಆರೋಗ್ಯದ ಬಗ್ಗೆ ಮಾಹಿತಿ ಮತ್ತು ಮುಕ್ತ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಆಪ್ತ ಸಮಾಲೋಚಕಿ ಸುಮನ ಮಾತನಾಡಿ, ಯಾವುದೋ ಒಂದು ಸನ್ನಿವೇಶಕ್ಕೆ ಸಿಲುಕಿ ವ್ಯಕ್ತಿ ಕುಡಿತದ ದಾಸನಾಗುತ್ತಾನೆ. ಆದರೆ ಆತ ಕೆಟ್ಟವನಾಗಿರುವುದಿಲ್ಲ. ಆತನನ್ನು ಹಂತ ಹಂತವಾಗಿ ಈ ಚಟದಿಂದ ಮುಕ್ತಗೊಳಿಸಲು ಸಾಧ್ಯವಿದೆ. ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳ ಆರೋಗ್ಯದ ಮೇಲಾಗುವ ದುಷ್ಪರಿಣಾಮದ ಬಗ್ಗೆ ಹಾಗೂ ಮಾದಕ ವಸ್ತುಗಳ ಸೇವನೆಯಿಂದಾಗುವ ತೊಂದರೆಯ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಯಾಗಿದ್ದ ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ನರಿಕೊಂಬು ಮಾತನಾಡಿ, ಮನೋರೋಗಕ್ಕೆ ಚಿಕಿತ್ಸೆಯಿದ್ದು, ರೋಗ ಕಾಣಿಸಿಕೊಂಡ ಆರಂಭದಲ್ಲಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಜಯಾನಂದ ಪಿ, ಮೇಲ್ವಿಚಾರಕಿ ಮಮತಾ, ಸೇವಾಂಜಲಿ ಆರೋಗ್ಯ ಕೇಂದ್ರದ ಡಾ ಚೇತನ್, ರೋಟರಿ ಜಿಲ್ಲಾ ಕಾರ್ಯದರ್ಶಿ ನಾರಾಯಣ ಹೆಗ್ಡೆ, ಸುಕುಮಾರ್ ಅರ್ಕುಳ, ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ, ವಿದ್ಯಾ ಶಿವರಾಜ್, ಪ್ರಶಾಂತ್ ಕುಮಾರ್ ತುಂಬೆ, ಬಿ ನಾರಾಯಣ ಮೇರಮೇಜಲು, ಅರ್ಜುನ್ ಪೂಂಜ, ವಿಕ್ರಂ ಬರ್ಕೆ, ಸೇವಾ ಪ್ರತಿನಿಧಿ ಮಲ್ಲಿಕಾ, ಅಮಿತಾ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment