ಕಡಬ, ಅಕ್ಟೋಬರ್ 22, 2022 (ಕರಾವಳಿ ಟೈಮ್ಸ್) : ತಾಲೂಕಿನ ಕಾಣಿಯೂರು ಗ್ರಾಮದ ಬೆದ್ರಾಜೆ ಎಂಬಲ್ಲಿ ಬೆಡ್ ಶೀಟ್ ಮಾರಾಟಕ್ಕೆ ಬಂದಿದ್ದ ಮುಸ್ಲಿಂ ವ್ಯಾಪಾರಿಗಳ ಮೇಲೆ ನಡೆದ ಗುಂಪು ಹಲ್ಲೆಗೆ ಸಂಬಂಧಿಸಿದಂತೆ ಕಡಬ ಹಾಗೂ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಇದೀಗ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಮೊದಲನೇ ಪ್ರಕರಣದಲ್ಲಿ ಪರಿಶಿಷ್ಠ ಜಾತಿಗೆ ಸೇರಿದ ಮಹಿಳೆ ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕೂಲಿ ಕೆಲಸ ಮಾಡಿಕೊಂಡಿರುವ ನಾನು ಗುರುವಾರ (ಅ 20) ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದಾಗ ಮಧ್ಯಾಹ್ನ ಸುಮಾರು 12.30 ರ ವೇಳೆಗೆ ನೀಲಿ ಬಣ್ಣದ ಕಾರಿನಲ್ಲಿ ಬಂದ ರಫೀಕ್ ಹಾಗೂ ರಮಿಯಾಸುದ್ದೀನ್ ಎಂಬವರು ಬೆಡ್ ಶೀಟ್ ಮಾರಾಟ ಮಾಡುವರೇ ಮನೆಯ ಬಾಗಿಲಿನ ಬಳಿ ಬಂದು ಬೆಡ್ ಶೀಟ್ ಬೇಕಾ ಎಂದು ಕೇಳಿದಾಗ ನಾನು ಎಷ್ಟು ಹಣ ಎಂದು ಕೇಳಿದಾಗ ಆರೋಪಿತರು ಬೆಡ್ ಶೀಟ್ ರೇಟ್ ಹೇಳದೇ ನೀವು ತಗೊಳ್ಳಿ, ನಾವು ಕಡಿಮೆ ರೇಟ್ ಮಾಡಿ ಕೊಡೋಣ ಎಂದು ಹೇಳಿದ್ದಾರೆ. ನಂತರ ನಾನು ನಾವು ಕೂಲಿ ಕೆಲಸ ಮಾಡುವ ಹರಿಜನರಾದ ಅಜಿಲ ಜಾತಿಯವರು. ನಮ್ಮಲ್ಲಿ ಹೆಚ್ಚಿನ ಹಣ ಇರುವುದಿಲ್ಲ. ನೀವು ರೇಟ್ ಹೆಳಿದರೆ ನಾನು ಬೆಡ್‍ಶೀಟ್ ನೋಡುತ್ತೇನೆ ಎಂದು ಹೇಳಿದರೂ ಆರೋಪಿತರು ಬೆಡ್‍ಶೀಟ್ ರೇಟ್ ಹೇಳದೇ ಸ್ವಲ್ಪ ಸಮಯ ಚರ್ಚಿಸಿ ನಿಮ್ಮಲ್ಲಿ ಹಣವಿಲ್ಲದಿದ್ದರೇ ಪರವಾಗಿಲ್ಲ ನಾವು ಈಗ ಕೊಟ್ಟು ಹೋಗಿರುತ್ತೇವೆ ನಂತರ ಇನ್ನೋಮ್ಮೆ ಬಂದಾಗ ತೆಗೆದುಕೊಳ್ಳುತ್ತೇವೆ ಎಂದು ಹೇಳಿದಾಗ ನಾನು ಬೇಡ ಎಂದು ಹೇಳಿದಾಗ ಅವರಲ್ಲೊಬ್ಬ ಕೂದಲು ಕಡಿಮೆ ಇರುವವನು ನಿಮ್ಮಲ್ಲಿ ಹಣವಿಲ್ಲದಿದ್ದರೇ ನೀವು ನನ್ನೊಂದಿಗೆ ಸ್ವಲ್ಪ ಅಡ್ಜೆಸ್ಟ್ ಮಾಡಿಕೊಂಡು ನಮ್ಮೊಂದಿಗೆ ಮಲಗಿದರೆ ನಿಮಗೆ ಬೇಕಾದರೆ ನಾವು ಹಣವನ್ನು ಸಹ ಕೊಟ್ಟು ಹೋಗುತ್ತೇವೆ ಎಂದು ಹೇಳಿದಾಗ ನಾವು ಆ ರೀತಿ ಜನರಲ್ಲ ನೀವು ಮನೆಯಿಂದ ಹೋಗಿ ಎಂದು ಹೇಳಿದಾಗ ಆರೋಪಿತನು ನನ್ನ ಕೈಹಿಡಿದು ಎಳೆದು ಬಳಿಕ ಮನೆಯೊಳಗೆ ಬಂದು ನನ್ನ ಮೈ ಕೈ ಮುಟ್ಟಿ ಮಾನಭಂಗಕ್ಕೆ ಪ್ರಯತ್ನಿಸಿದಾಗ ನಾನು ಜೋರಾಗಿ ಬೊಬ್ಬೆ ಹಾಕಿದಾಗ ಆರೋಪಿತರು ಅಲ್ಲಿಂದ ಪರಾರಿಯಾಗಿರುತ್ತಾರೆ. ಅಸಭ್ಯವಾಗಿ ವರ್ತಿಸಿ ಮಾನಭಂಗಕ್ಕೆ ಪ್ರಯತ್ನಿಸಿದ ಆರೋಪಿತರಾದ ರಫೀಕ್ ಮತ್ತು ರಮಿಯೂಸಿದ್ದೀನ್ ಎಂಬವರನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕಡಬ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 88/2022 ಕಲಂ 448, 354 ಜೊತೆಗೆ 34 ಐಪಿಸಿ ಮತ್ತು ಕಲಂ 3(2)(ವಿಎ) ಎಸ್ ಸಿ ಆಂಡ್ ಎಸ್ ಟಿ ಅಮೆಂಡ್‍ಮೆಂಟ್ ಆಕ್ಟ್ 2015ರಂತೆ ಪ್ರಕರಣ ದಾಖಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಂದು ಪ್ರಕರಣದಲ್ಲಿ ಸಂತ್ರಸ್ತ ಮಂಗಳೂರು ತಾಲೂಕು, ಅಡ್ಡೂರು ಗ್ರಾಮದ ಹೊಳೆಬದಿ ನಿವಾಸಿ ಅಬ್ದುಲ್ ಲತೀಫ್ ಎಂಬವರ ಪುತ್ರ ರಮೀಜುದ್ದೀನ್ (29) ಅವರು ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಿಸಿದ್ದು, ನಾನು ಸಂಬಂಧಿಕ ಮಹಮ್ಮದ್ ರಫೀಕ್ ಎಂಬವರೊಂದಿಗೆ ಬೆಡ್ ಶೀಟ್ ಮಾರಾಟಕ್ಕೆಂದು ಗುರುವಾರ (ಅ 20) ಕಡಬ ತಾಲೂಕು ಎಡಮಂಗಲ ಹಾಗೂ ದೋಲ್ಪಾಡಿ ಗ್ರಾಮ ಪರಿಸರದಲ್ಲಿ ನೋಂದಣಿ ಸಂಖ್ಯೆ ಕೆಎ 51 ಎಂಎ 2319 ರ ಕಾರಿನಲ್ಲಿ ಬಂದು ಮಾರಾಟ ಮಾಡುತ್ತಿರುವ ವೇಳೆ ಮನೆಯೊಂದರದಲ್ಲಿದ್ದ ಹೆಂಗಸರ ಜೊತೆ ಬೆಡ್ ಶೀಟ್ ಮಾರಾಟದ ವಿಚಾರದಲ್ಲಿ ತಕರಾರು ಉಂಟಾಗಿ ಅಲ್ಲಿಂದ ವಾಪಸ್ಸು ಕಾಣಿಯೂರು ಕಡೆಗೆ ಬರುತ್ತಾ, ಕಾಣಿಯೂರು ಗ್ರಾಮದ ಬೆದ್ರಾಜೆ ಎಂಬಲ್ಲಿಗೆ ಮಧ್ಯಾಹ್ನ 2 ಗಂಟೆಗೆ ತಲುಪಿದಾಗ ಅಲ್ಲಿ ಗುಂಪು ಸೇರಿದ್ದ ನೋಡಿದರೆ ಗುರುತಿಸಬಹುದಾದ ಮಂದಿಗಳು ಪಿಕಪ್ ವಾಹನವೊಂದನ್ನು ರಸ್ತೆಗೆ ಅಡ್ಡವಾಗಿಟ್ಟು ನಾವು ಚಲಾಯಿಸುತ್ತಿದ್ದ ಕಾರನ್ನು ತಡೆದು ನಿಲ್ಲಿಸಿ ನನ್ನ ಹಾಗೂ ಜೊತೆಯಲ್ಲಿದ್ದ ಮಹಮ್ಮದ್ ರಫೀಕ್ ಅವರನ್ನು ಕಾರಿನಿಂದ ರಸ್ತೆಗೆ ಬೀಳಿಸಿ ಅವಾಚ್ಯ ಶಬ್ದಗಳಿಂದ ಬೈದು ಕೆಲವರ ಕೈಯಲ್ಲಿದ್ದ ದೊಣ್ಣೆ ಹಾಗೂ ಕಬ್ಬಿಣದ ರಾಡಿನಿಂದ, ಕೈಯಿಂದ ಹೊಡೆದು ಕಾಲಿನಿಂದ ತುಳಿದು ರಸ್ತೆಯಲ್ಲಿ ಎಳೆದಾಡಿ, ತರಚಿದ, ಗುದ್ದಿದ, ರಕ್ತ ಹೆಪ್ಪುಗಟ್ಟಿದ ಹಾಗೂ ರಕ್ತಗಾಯಗಳು ಉಂಟು ಮಾಡಿದ ಅವರು, ಬಂದಿದ್ದ ಕಾರನ್ನು ಹುಡಿ ಮಾಡಿ ಜಾಖಂಗೊಳಿಸಿ ಸುಮಾರು 1.50 ಲಕ್ಷಗಳಷ್ಟು ನಷ್ಟ ಹಾಗೂ ಕಾರಿನಲ್ಲಿದ್ದ ಬೆಡ್ ಶೀಟ್ ಗಳನ್ನೂ ಬಿಸಾಡಿ ಆ ಪೈಕಿ 25 ಸಾವಿರ ರೂಪಾಯಿ ನಷ್ಟವನ್ನುಂಟುಮಾಡಿರುತ್ತಾರೆ ಎಂದು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬೆಳ್ಳಾರೆ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 83/2022 ಕಲಂ 143, 144, 341, 504, 323, 324, 427 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಕಡಬ ಹಾಗೂ ಬೆಳ್ಳಾರೆ ಠಾಣಾ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
0 comments:
Post a Comment