ಬಂಟ್ವಾಳ, ಅಕ್ಟೋಬರ್ 22, 2022 (ಕರಾವಳಿ ಟೈಮ್ಸ್) : ರಾಜ್ಯ ಸರಕಾರವು ನಿವೃತ್ತಿ ಹೆಸರಿನಲ್ಲಿ ನೌಕರರನ್ನು ಪಿಂಚಣಿ ನೀಡದೆ ಅಮಾನವೀಯವಾಗಿ ಬಿಡುಗಡೆಗೊಳಿಸುತ್ತಿದ್ದು, ಸರಕಾರದ ಈ ನಡೆಯ ವಿರುದ್ದ ಅಕ್ಷರ ದಾಸೋಹ ನೌಕರರು ಸಂಘಟಿತರಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಕಾರ್ಮಿಕ ಮುಖಂಡ ರಾಮಣ್ಣ ವಿಟ್ಲ ಅಭಿಪ್ರಾಯಪಟ್ಟರು.
ಬಿ ಸಿ ರೋಡಿನಲ್ಲಿ ನಡೆದ ಅಕ್ಷರ ದಾಸೋಹ ಕಾರ್ಮಿಕರ ಬಂಟ್ವಾಳ ತಾಲೂಕು ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು ಮೂರು ತಿಂಗಳ ಬಾಕಿ ಇರುವ ವೇತನವನ್ನು ಕೂಡಲೇ ಜಾರಿ ಮಾಡಬೇಕು. ತಪ್ಪಿದಲ್ಲಿ ಬಿಸಿಯೂಟ ಬಂದ್ ಮಾಡುವ ಮುಖಾಂತರ ಪ್ರತಿಭಟನೆ ನಡೆಸಲಾಗುವುದು ಎಂದವರು ಇದೇ ವೇಳೆ ಸರಕಾರವನ್ನು ಎಚ್ಚರಿಸಿದರಲ್ಲದೆ ಪ್ರತೀ ತಿಂಗಳ ವೇತನವನ್ನು 5ನೇ ತಾರೀಕಿನಂದು ನೌಕರರ ಖಾತೆಗೆ ಜಮಾ ಮಾಡಬೇಕೆಂದು ಒತ್ತಾಯಿಸಿದರು.
ಕಾರ್ಮಿಕ ಮುಖಂಡ ರಾಬರ್ಟ್ ಡಿ’ಸೋಜ ಸುಳ್ಯ ಮಾತನಾಡಿ, ಬಿಸಿಯೂಟ ನೌಕರರನ್ನು ಜೀತದಾಳುಗಳಂತೆ ಸರಕಾರವು ನಡೆಸಿಕೊಳ್ಳುತ್ತಿದ್ದು, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಬಂಡವಾಳ ಶಾಹಿಗಳ ಹಿತ ಕಾಯುವ ಸರಕಾರಕ್ಕೆ ಬಿಸಿಯೂಟ ನೌಕರರ ಗೋಳು ಅರ್ಥವಾಗುತ್ತಿಲ್ಲ. ಇದಕ್ಕಾಗಿ ದೊಡ್ಡ ಮಟ್ಟದಲ್ಲಿ ನೌಕರರು ಸಂಘಟಿತರಾಗಿ ಹೋರಾಡುವ ಅನಿವಾರ್ಯತೆ ಇದೆ ಎಂದರು. ಸರಕಾರಿ ಶಾಲೆಗಳ ಮೇಲುಸ್ತುವಾರಿ ನೋಡಿಕೊಳ್ಳಲು ಪ್ರತೀ ತಿಂಗಳಿಗೆ 100 ರಂತೆ ಪೆÇೀಷಕರಿಂದ ಹಣ ಸಂಗ್ರಹಿಸಲು ಆದೇಶ ನೀಡಿದ ಸರಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದರು.
ವಿನಯ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಕಾರ್ಮಿಕ ಮುಖಂಡ ಸುರೇಂದ್ರ ಕೋಟ್ಯಾನ್ ಭಾಗವಹಿಸಿದ್ದರು. ಇದೇ ವೇಳೆ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ನೂತನ ಅದ್ಯಕ್ಷರಾಗಿ ಜಯಶ್ರೀ ಉಪಾಧ್ಯಕ್ಷರುಗಳಾಗಿ ವಿನಯ, ಜಯಂತಿ, ಕಾರ್ಯದರ್ಶಿಯಾಗಿ ವಾಣಿಶ್ರೀ, ಜೊತೆ ಕಾರ್ಯದರ್ಶಿಗಳಾಗಿ ಸೌಮ್ಯ, ಯಶೋಧ, ಕೋಶಧಿಕಾರಿಯಾಗಿ ಸೇವಂತಿ ಸಹಿತ 22 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನಾಗಿ ಆರಿಸಲಾಯಿತು.
0 comments:
Post a Comment