ಬಂಟ್ವಾಳ, ಸೆಪ್ಟೆಂಬರ್ 14, 2022 (ಕರಾವಳಿ ಟೈಮ್ಸ್) : ತಾಲೂಕಿನ ವಿಟ್ಲಪಡ್ನೂರು ಗ್ರಾಮದ ಕೊಡಂಗೆ-ಬನಾರಿ ಎಂಬಲ್ಲಿ ತಮ್ಮನೇ ಅಣ್ಣನನ್ನು ಹೊಡೆದು ಕೊಂಡ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಮೃತ ಅಣ್ಣನನ್ನು ಸ್ಥಳೀಯ ನಿವಾಸಿ ಶೀನಪ್ಪ ದೇವಾಡಿಗ ಅವರ ಪುತ್ರ ಗಣೇಶ ಬಂಗೇರ (54) ಎಂದು ಹೆಸರಿಸಲಾಗಿದ್ದು, ಆರೋಪಿಯನ್ನು ಮೃತರ ತಮ್ಮ ಪದ್ಮನಾಭ ಬಂಗೇರ (49) ಎಂದು ಹೆಸರಿಸಲಾಗಿದೆ. ಆರೋಪಿ ತಮ್ಮನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಸಹೋದರರು ಅಜ್ಜಿ ಜೊತೆ ವಾಸವಾಗಿದ್ದು, ತಮ್ಮ ಪದ್ಮನಾಭ ಬಂಗೇರ ಅಣ್ಣ ಗಣೇಶ್ ಬಂಗೇರ ಅವರಿಗೆ ಯಾವುದೋ ದ್ವೇಷದಿಂದ ಪದೇ ಪದೇ ಹಲ್ಲೆ ನಡೆಸುತ್ತಿದ್ದು, ಒಂದೆರಡು ಬಾರಿ ಗಣೇಶ ಬಂಗೇರ ಹಲ್ಲೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನೂ ಪಡೆದಿದ್ದರು. ಮಂಗಳವಾರ ರಾತ್ರಿಯೂ ಪದ್ಮನಾಭ ಬಂಗೇರ ಅಣ್ಣ ಗಣೇಶ್ ಬಂಗೇರ ಅವರ ತಲೆ, ಎದೆ ಹಾಗೂ ಮುಖಕ್ಕೆ ಯಾವುದೋ ಆಯುಧದಿಂದ ಕೊಲೆ ಮಾಡುವ ಉದ್ದೇಶದಿಂದ ಮಾರಣಾಂತಿಕವಾಗಿ ಹೊಡೆದು ಗಾಯಗೊಳಿಸಿ ಕೊಲೆ ಮಾಡಿದ್ದು ಆ ಬಳಿಕ ಮೃತ ದೇಹದ ಬಟ್ಟೆಗಳನ್ನು ಹಾಗೂ ಮೃತ ದೇಹವನ್ನು ಸ್ವಚ್ಚಗೊಳಿಸಿ ಮಲಗುವ ಕೋಣೆಯ ಮಂಚದ ಮೇಲೆ ಮಲಗಿಸಿರುತ್ತಾರೆ ಎಂದು ಮೃತರ ಸಂಬಂಧಿ ಪ್ರಸಾದ್ ಕುಮಾರ್ ಎಂಬವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 143/2022 ಕಲಂ 302, 201 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಆರೋಪಿ ಪದ್ಮನಾಭ ಬಂಗೇರನನ್ನು ಪೊಲೀಸರು ಬಂಧಿಸಿದ್ದಾರೆ.
0 comments:
Post a Comment