ಪುತ್ತೂರು, ಸೆಪ್ಟೆಂಬರ್ 15, 2022 (ಕರಾವಳಿ ಟೈಮ್ಸ್) : ಪುತ್ತೂರು ಹೃದಯ ಭಾಗದ ಬಸ್ ನಿಲ್ದಾಣದ ಬಳಿಯ ಚಪ್ಪಲಿ ಅಂಗಡಿಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ನಗದು ಹಣ ಎಗರಿಸಿದ ಘಟನೆ ಶುಕ್ರವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಪುತ್ತೂರು ತಾಲೂಕು, ಪುತ್ತೂರು ಕಸಬಾ ಗ್ರಾಮದ ದರ್ಬೆ ಅಂಚೆ ಕಚೇರಿ ಎದುರು ಭಾಗದ ಪ್ರಕಾಶ್ ಮಂಜಿಲ್ ನಿವಾಸಿ ದಿವಂಗತ ಅಬ್ದುಲ್ ರಝಾಕ್ ಅವರ ಪುತ್ರ ಮೊಹಮ್ಮದ್ ಶಮೀರ್ (51) ಅವರಿಗೆ ಸೇರಿದ ಪುತ್ತೂರು ಕಸಬಾ ಗ್ರಾಮದ ಪುತ್ತೂರು ಬಸ್ ನಿಲ್ದಾಣದ ಬಳಿಯ ಮಾಯಿದೆ ದೇವೋಸ್ ಚರ್ಚ್ ಎದುರುಗಡೆ ಇರುವ ಪ್ರಕಾಶ್ ಫೂಟ್‍ವೇರ್ ಕೋ ಎಂಬ ಹೆಸರಿನ ಚಪ್ಪಲಿ ಅಂಗಡಿಯನ್ನು ಹೊಂದಿದ್ದು, ಅಂಗಡಿ ವ್ಯಾಪಾರ ಅಲ್ಲದೆ ಬೆಂಗಳೂರಿನಿಂದ ಹಳೆಯ ಕಾರುಗಳನ್ನು ಖರೀದಿಸಿ ತಂದು ಪುತ್ತೂರಿನಲ್ಲಿ ಮಾರಾಟ ಮಾಡುವ ವ್ಯವಹಾರವನ್ನು ಮಾಡುತ್ತಿದ್ದಾರೆ. ಕಾರು ವ್ಯವಹಾರದ ಬಗ್ಗೆ ಅವರಲ್ಲಿದ್ದ ನಗದು ಹಣ 8 ಲಕ್ಷ ರೂಪಾಯಿ ಮತ್ತು ಸ್ನೇಹಿತ ಸಿದ್ದೀಕ್ ಎಂಬವರು ನೀಡಿದ 7 ಲಕ್ಷ ರೂಪಾಯಿ ನಗದು ಹಣ ಸೇರಿ ಚಪ್ಪಲಿ ವ್ಯಾಪಾರ ಮಾಡುತ್ತಿರುವ ಅಂಗಡಿಯ ಕ್ಯಾಶ್ ಡ್ರಾವರ್ ಹಿಂಬದಿ ಇನ್ನೊಂದು ಮರದ ಬಾಕ್ಸಿನಲ್ಲಿಟ್ಟಿದ್ದು, ಸೆ 16 ರಂದು ಬೆಳಿಗ್ಗೆ ಸುಮಾರು 9 ಗಂಟೆಗೆ ಶಮೀರ್ ಅವರ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದ ತಾಜುದ್ದೀನ್ ಅವರು ಅಂಗಡಿಯಲ್ಲಿ ಕಳ್ಳತನವಾದ ಬಗ್ಗೆ ತಿಳಿಸಿರುತ್ತಾರೆ.
ಅದರಂತೆ ಶಮೀರ್ ಅವರು ಪುತ್ತೂರಿಗೆ ಬಂದು ಅಂಗಡಿಯಲ್ಲಿ ನೋಡುವಾಗ ಅಂಗಡಿಯ ಹಂಚು ಛಾವಣಿಯ ಮಾಡಿನ ಹಂಚನ್ನು ತೆಗೆದು ಯಾರೋ ಕಳ್ಳರು ಅಂಗಡಿ ಮುಚ್ಚಿಗೆಯನ್ನು ಮುರಿದು ಒಳ ಪ್ರವೇಶಿಸಿ ಅಂಗಡಿಯ ಡ್ರಾವರ್‍ನಲ್ಲಿದ್ದ ವ್ಯಾಪಾರದ ಹಣ 24,500/- ನಗದು ಹಾಗೂ ಹಿಂಬದಿ ಮರದ ಬಾಕ್ಸಿನಲ್ಲಿಟ್ಟಿದ್ದ 14.50 ಲಕ್ಷ ರೂಪಾಯಿ ನಗದು ಹಣವನ್ನು ಹಾಗೂ ಅಂಗಡಿಯ ಸಿಸಿ ಕ್ಯಾಮರಾದ ಡಿವಿಆರ್ ಕಳವಾಗಿರುವುದು ಗಮನಕ್ಕೆ ಬಂದಿದೆ.
ಒಟ್ಟು ನಗದು 14,74,500/- ಮತ್ತು 10 ಸಾವಿರ ರೂಪಾಯಿ ಮೌಲ್ಯದ ಸೀಸಿ ಕ್ಯಾಮೆರಾ ಡಿವಿಆರ್ ಕಳವಾಗಿರುವ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 76/2022 ಕಲಂ 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment