ಬಂಟ್ವಾಳ, ಸೆಪ್ಟೆಂಬರ್ 08, 2022 (ಕರಾವಳಿ ಟೈಮ್ಸ್) : ಸರಕಾರ ಆಚರಿಸುವ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆಯನ್ನು 1912 ರಲ್ಲಿ ನಾರಾಯಣ ಗುರುಗಳೇ ಸ್ಥಾಪಿಸಿದ ಕುದ್ರೋಳಿ ದೇವಸ್ಥಾನದಲ್ಲೇ ಆಚರಿಸಬೇಕು ಎಂದು ಬಿಲ್ಲವ ಮಹಾಮಂಡಳ ಮುಲ್ಕಿ (ರಿ) ಇದರ ಕಾರ್ಯಕಾರಿ ಸಮಿತಿ ಸದಸ್ಯ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಆಗ್ರಹಿಸಿದ್ದಾರೆ.
ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆಯನ್ನು ಮಂಗಳೂರಿನ ಖಾಸಗಿ ಸ್ಥಳದಲ್ಲಿ ಮಾಡುವುದರ ಬದಲಾಗಿ ಗುರುಗಳೇ ಸ್ಥಾಪಿಸಿದ ಕುದ್ರೋಳಿ ದೇವಸ್ಥಾನದಲ್ಲೇ ಆಚರಿಸಿದರೆ ಗುರುಗಳಿಗೆ ನೀಡುವ ಅತೀ ಹೆಚ್ಚಿನ ಗೌರವ ಇದಾಗಿದೆ ಎಂದಿದ್ದಾರೆ. ಈಗಾಗಲೇ ಗುರುಗಳ ಪಾಠವನ್ನು ಶಾಲಾ ಪಠ್ಯದಲ್ಲಿ ಕೈ ಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಸರಕಾರದ ನಿಲುವಿನ ಬಗ್ಗೆ ಯಾವುದೇ ಚಕಾರ ಎತ್ತದೆ ಕೆಲವು ರಾಜಕೀಯ ಹಿತಾಸಕ್ತಿಗಳು ಕೈ ಕಟ್ಟಿ ಕುಳಿತಿದ್ದರು. ಇದುವೇ ಸಮುದಾಯದ ಮನೋ ವೇದನೆಗೆ ಕಾರಣವಾಗಿತ್ತು. ಇದೀಗ ಮತ್ತೆ ಗುರುಗಳ ಜನ್ಮ ಜಯಂತಿಯನ್ನು ಸರಕಾರಿ ಮಟ್ಟದಲ್ಲಿ ಆಚರಿಸಲು ಖಾಸಗಿ ಸ್ಥಳ ಹಾಗೂ ಇತರ ಯಾವುದೋ ಹಾದಿ ಬೀದಿಯಲ್ಲಿ ಆಚರಿಸುವ ಬಗ್ಗೆಯೂ ಚಕಾರ ಎತ್ತದೆ ಇರುವುದು ಮತ್ತಷ್ಟು ನೋವು ಸಂಗತಿಯಾಗಿದೆ.
ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ವಿವಿಧ ಬಿಲ್ಲವ ಸಂಘಟನೆಗಳ ಮಹತ್ವಾಕಾಂಕ್ಷೆಗೆ ಪೂರಕವಾಗಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಹಾಗೂ ಬಿಲ್ಲವರ ಎರಡನೇ ನಾರಾಯಣ ಗುರುಗಳಾಗಿರುವ ಬಿ ಜನಾರ್ದನ ಪೂಜಾರಿ ಅವರ ಮುತುವರ್ಜಿಯಿಂದ ಸರಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಸರಕಾರಿ ಮಟ್ಟದಲ್ಲಿ ಆಚರಿಸಲು ಅವಕಾಶ ಒದಗಿಸಿಕೊಟ್ಟು ಸಮುದಾಯದ ಧ್ವನಿಯನ್ನು ಎತ್ತಿ ಹಿಡಿಯಲಾಗಿತ್ತು. ಇದನ್ನು ಮುಂದಿನ ಎಲ್ಲಾ ಸರಕಾರಗಳು ಗೌರವಯುತವಾಗಿ ನಡೆಸಿಕೊಂಡು ಬರಲು ಕ್ರಮ ಕೈಗೊಳ್ಳಬೇಕು.
ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ತಕ್ಷಣ ಎಚ್ಚೆತ್ತುಕೊಂಡು ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಗುರುಗಳೇ ಸ್ಥಾಪಿಸಿದ ಕುದ್ರೋಳಿ ದೇವಸ್ಥಾನದಲ್ಲೇ ಅತ್ಯಂತ ವಿಜ್ರಂಭಣೆಯಿಂದ ಆಚರಿಸಲು ಕ್ರಮ ಕೈಗೊಳ್ಳುವಂತೆ ಬೇಬಿ ಕುಂದರ್ ಆಗ್ರಹಿಸಿದ್ದಾರೆ.
0 comments:
Post a Comment