ಬಂಟ್ವಾಳ, ಸೆಪ್ಟೆಂಬರ್ 05, 2022 (ಕರಾವಳಿ ಟೈಮ್ಸ್) : ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದ ಜಕ್ರಿಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಜಕ್ರಿಬೆಟ್ಟು ದಾಸ ರೈ ಮೈದಾನದಲ್ಲಿ 5 ದಿನಗಳ ಕಾಲದ ನಡೆದ 19ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮದ ಸಮಾರೋಪ, ಗಣೇಶ ಮೂರ್ತಿಯ ಭವ್ಯ ಶೋಭಾ ಯಾತ್ರೆ ಹಾಗೂ ಜಲಸ್ಥಂಭನವು ಭಾನುವಾರ ರಾತ್ರಿ ನಡೆಯಿತು.
ಈ ಸಂದರ್ಭ ಭಕ್ತರಿಗೆ ಹಾಗೂ ಭಾಗವಹಿಸಿದ ಹಾಗೂ ಸಹಕಾರ ನೀಡಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದ ಸಮಿತಿಯ ಗೌರವಾಧ್ಯಕ್ಷ, ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ, ಯಾವುದೇ ಜಾತಿ-ಧರ್ಮದ ಬಣ್ಣ ಹಚ್ಚದೆ ಸೌಹಾರ್ದ ಭಾರತ ಕಟ್ಟುವ ನಿಟ್ಟಿನಲ್ಲಿ ಬಂಟ್ವಾಳ ಗಣೇಶೋತ್ಸವ ಪ್ರಾರಂಭಿಸಿ 19 ವರ್ಷ ಸಮಾಜದ ಎಲ್ಲ ವರ್ಗದವರ ಸಹಕಾರದಿಂದ ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗಿದೆ, ಮುಂದಿನ ದಿನಗಳಲ್ಲಿ ನಮ್ಮ ದಿನಗಳ ನಂತರ ಯುವ ಪೀಳಿಗೆ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುವಂತೆ ಕರೆ ನೀಡಿದರು.
ಬೆಳಿಗ್ಗೆಯಿಂದ ವೈದಿಕ ಕಾರ್ಯಕ್ರಮಗಳು, 108 ಕಾಯಿ ಗಣಹೋಮ, ಅಪ್ಪದ ಪೂಜೆ, ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ಬಳಿಕ ಸಜಿಪಮೂಡ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ, ಬಸ್ತಿಕೋಡಿ ಶ್ರೀ ಗಣೇಶ ಭಜನಾ ಮಂಡಳಿ, ತುಂಬೆ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ, ಕೊಯಿಲ ಸಿದ್ದಶ್ರೀ ಮಹಿಳಾ ಭಜನಾ ಮಂಡಳಿ ವತಿಯಿಂದ ಭಜನಾ ಸಂಕೀರ್ತನೆ, ಮಧ್ವ ಯಕ್ಷಕೂಟ ವತಿಯಿಂದ ಜಿಲ್ಲೆಯ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ಭಕ್ತ ಸುಧನ್ವ ನಡೆಯಿತು.
ಸಂಜೆ ಸಂಧ್ಯಾ ಪೂಜೆ, ವಿಸರ್ಜನಾ ಪೂಜೆ, ಪ್ರಾರ್ಥನೆ ಬಳಿಕ ಶೋಭಾ ಯಾತ್ರೆ ನಡೆಯಿತು. ಶೋಭಾಯಾತ್ರೆಯು ಪ್ರತಿಷ್ಠಾಪನಾ ಸ್ಥಳದಿಂದ ಬಲಕ್ಕೆ ತಿರುಗಿ ಜಕ್ರಿಬೆಟ್ಟು ಮೂಲಕ ಬೈಪಾಸ್ ರಸ್ತೆ, ತುಂಬ್ಯ ಜಂಕ್ಷನ್, ಅಜೆಕಲ, ಭಂಡಾರಿಬೆಟ್ಟು ತಲುಪಿ, ನೆರೆ ವಿಮೋಚನಾ ರಸ್ತೆಯಾಗಿ ಬಂಟ್ವಾಳ ಪೇಟೆ ಮುಖ್ಯ ರಸ್ತೆಯಿಂದ ಶ್ರೀ ವೆಂಕಟರಮಣ ದೇವಸ್ಥಾನದ ನದಿ ಕಿನಾರೆಯಲ್ಲಿ ಜಲಸ್ಥಂಭನ ಮಾಡಲಾಯಿತು.
ಶೋಭಾ ಯಾತ್ರೆಯಲ್ಲಿ ಕಲ್ಲಡ್ಕ ಶಿಲ್ಪಾ ಬೊಂಬೆ ಬಳಗದಿಂದ ಗೊಂಬೆ ಕುಣಿತ ಹಾಗೂ ಕೂಲು ಕುದುರೆ ಪ್ರದರ್ಶನ, ಬಿ ಎಸ್ ಬ್ಯಾಂಡ್ ಬ್ರಹ್ಮಕೂಟ್ಲು, ಸತ್ಯ ಸಾರಮಾಣಿ ಎಡಪದವು, ಶಾರದಾಂಬಾ ವಗ್ಗ ಇವರಿಂದ ನಾಸಿಕ್ ಬ್ಯಾಂಡ್ ಪ್ರದರ್ಶನ, ಬಿಲ್ಲವ ಯುವ ವೇದಿಕೆ ಬಂಟ್ವಾಳ ವಿಧಾನಸಭಾ ಕ್ಷೇತ್ರ ಹಾಗೂ ವಿವಿಧ ಸಂಘಟನೆಗಳ ಟ್ಯಾಬ್ಲೋ, ವಿವಿಧ ನಾಸಿಕ್ ಬ್ಯಾಂಡ್ ತಂಡಗಳು, ಗೊಂಬೆ ಕುಣಿತ, ಚೆಂಡೆ ತಂಡಗಳು ಭಾಗವಹಿಸಿ ವಿಶೇಷ ಮೆರುಗು ನೀಡಿತು.
ಪ್ರಮುಖರಾದ ಬಿ ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪಿಯೂಸ್ ಎಲ್ ರೋಡ್ರಿಗಸ್, ಯೂಸುಫ್ ಕರಂದಾಡಿ, ಸಂಪತ್ ಕುಮಾರ್ ಶೆಟ್ಟಿ, ಪ್ರವೀಣ್ ಜಕ್ರಿಬೆಟ್ಟು, ಪ್ರಕಾಶ್ ಶೆಟ್ಟಿ ಶ್ರೀ ಶೈಲ ತುಂಬೆ, ಬಿ ವಾಸು ಪೂಜಾರಿ, ಲೋಲಾಕ್ಷ ಶೆಟ್ಟಿ, ಸದಾಶಿವ ಬಂಗೇರ, ಪದ್ಮನಾಭ ರೈ, ಜಿನರಾಜ ಅರಿಗ, ಗಂಗಾಧರ ಪೂಜಾರಿ, ಜಗದೀಶ್ ಕುಂದರ್, ರಾಜೀವ್ ಶೆಟ್ಟಿ ಎಡ್ತೂರು, ರಾಜೀವ್ ಕಕ್ಕೆಪದವು, ಪ್ರಶಾಂತ್ ಕುಲಾಲ್, ಲೋಕೇಶ್ ಸುವರ್ಣ, ಡೆಂಝಿಲ್ ನೊರೊನ್ಹಾ, ರಂಜಿತ್ ಪೂಜಾರಿ ಬಿ ಸಿ ರೋಡು, ತಿಲಕ್ ಮಂಚಿ, ವೆಂಕಪ್ಪ ಪೂಜಾರಿ, ಜಯಂತಿ ಪೂಜಾರಿ, ಮಲ್ಲಿಕಾ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment