ಬಂಟ್ವಾಳ, ಆಗಸ್ಟ್ 27, 2022 (ಕರಾವಳಿ ಟೈಮ್ಸ್) : ತಾಲೂಕಿನ ಮಂಚಿ ಗ್ರಾಮ ಪಂಚಾಯತ್ ಆಡಳಿತ ನಡೆಸಿದ ಅಕ್ರಮ ಗೂಡಂಗಡಿ ತೆರವು ಕಾರ್ಯಾಚರಣೆಯಿಂದ ಮಾನಸಿಕವಾಗಿ ಉದ್ವೇಗಕ್ಕೆ ಒಳಗಾದ ಬಡ ವ್ಯಾಪಾರಿ ರಾಮಕೃಷ್ಣ ಕಾಮತ್ (50) ಅವರು ಹಠಾತ್ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯ ತೀವ್ರ ನಿಗಾ ವಿಭಾಗಕ್ಕೆ ದಾಖಲಾದ ಘಟನೆ ವರದಿಯಾಗಿದೆ.
ಸ್ಥಳೀಯ ನಿವಾಸಿ ರಾಮಕೃಷ್ಣ ಕಾಮತ್ ಅವರು ಕುಕ್ಕಾಜೆ ಪೇಟೆಯ ಒಂದು ಬದಿಯಲ್ಲಿ ತಳ್ಳು ಗಾಡಿ ಇಟ್ಟು ಸಣ್ಣ ಪ್ರಮಾಣದಲ್ಲಿ ಕ್ಯಾಂಟೀನ್ ವ್ಯಾಪಾರ ನಡೆಸಿ ಜೀವನ ನಡೆಸುತ್ತಿದ್ದರು. ಈ ಬಗ್ಗೆ ಯಾವುದೋ ಪ್ರಭಾವಕ್ಕೆ ಒಳಗಾದ ಮಂಚಿ ಗ್ರಾಮ ಪಂಚಾಯತ್ ಯಾವುದೇ ಪೂರ್ವ ಪ್ರಕ್ರಿಯೆ ನಡೆಸದೆ ಏಕಾಏಕಿ ಕಾಮತ್ ಅವರ ಕ್ಯಾಂಟೀನ್ ತಳ್ಳುಗಾಡಿಯನ್ನು ತೆರವುಗೊಳಿಸಿ ಪಂಚಾಯತ್ ಆವರಣದಲ್ಲಿ ತಂದು ನಿಲ್ಲಿಸಿದ್ದಾರೆ.
ಸಣ್ಣ ಕ್ಯಾಂಟೀನ್ ವ್ಯವಹಾರದಿಂದಲೇ ಜೀವನ ಬಂಡಿ ಎಳೆಯುತ್ತಿದ್ದ ಕಾಮತ್ ಅವರು ಪಂಚಾಯತ್ ಆಡಳಿತದ ಬ್ರಹ್ಮಾಸ್ತ್ರದಿಂದ ಮಾನಸಿಕವಾಗಿ ತೀವ್ರ ಜರ್ಝರಿತಗೊಂಡಿದ್ದಲ್ಲದೆ ಹಠಾತ್ ತೀವ್ರ ರಕ್ತದೊತ್ತಡ ಅನಾರೋಗ್ಯಕ್ಕೆ ಒಳಗಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಇದೀಗ ಅಡ್ಯಾರ್ ಫಸ್ಟ್ ನ್ಯೂರೋ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾಮತ್ ಅವರು ಮಂಚಿ ಪೇಟೆಯಲ್ಲಿ ಎಲ್ಲರೊಂದಿಗೆ ಅನ್ಯೋನ್ಯತೆ ಹಾಗೂ ಆತ್ಮೀಯ ಸ್ವಭಾವ ಹೊಂದಿ ಸಣ್ಣ ಮಟ್ಟಿನಲ್ಲಿ ಕ್ಯಾಂಟೀನ್ ವ್ಯವಹಾರ ನಡೆಸಿ ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ. ಪಂಚಾಯತ್ ವ್ಯಾಪ್ತಿಯಲ್ಲಿ ಅದೆಷ್ಟೋ ದೊಡ್ಡ ದೊಡ್ಡ ಕುಳಗಳು ಅಕ್ರಮ ವ್ಯವಹಾರ ನಡೆಸುತ್ತಿದ್ದರೂ ಕ್ರಮ ಜರುಗಿಸದ ಆಡಳಿತ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದಾರೆ ಎಂದು ಸ್ಥಳೀಯರು ಪಂಚಾಯತ್ ಆಡಳಿತ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿ ಸಾಮಾಜಿಕ ತಾಣಗಳಲ್ಲಿ ಅಭಿಯಾನ ಶುರು ಮಾಡಿದ್ದಾರೆ.
ಬಿಜೆಪಿ ಅಧಿಕಾರದಲ್ಲಿರುವ ಮಂಚಿ ಗ್ರಾಮ ಪಂಚಾಯತ್ ಅಭಿವೃದ್ಧಿ ಸಾಧನೆಗಳು ಶೂನ್ಯವಾಗಿದ್ದು, ಕಾನೂನಿನ ಹೆಸರಿನಲ್ಲಿ ಅಧ್ಯಕ್ಷರು ಅಧಿಕಾರಿಗಳನ್ನು ಛೂ ಬಿಟ್ಟು ಸ್ವಜಾತಿಯ ಹಾಗೂ ಸ್ವಪಕ್ಷದ ಬಡ ಕ್ಯಾಂಟೀನ್ ವ್ಯಾಪಾರಿಯ ವಿರುದ್ದ ಸಮರ ಸಾರಿದ್ದು, ಪಂಚಾಯತ್ ಅಧ್ಯಕ್ಷೆಯ ಅಮಾನವೀಯತೆಗೆ ಸಾಕ್ಷಿ ಎಂದು ಸ್ವಪಕ್ಷೀಯರೇ ಆರೋಪಿಸಿದ್ದಾರೆ.
ಎಲ್ಲದಕ್ಕೂ ಕಾನೂನು ಪಾಲನೆ ಮಾಡುವ ಮನಸ್ಸಿದ್ದಲ್ಲಿ ಪಂಚಾಯತ್ ಪಿಡಿಒಗೆ ಈಗಾಗಲೇ ಹಲವು ಅಕ್ರಮಗಳ ಪಟ್ಟಿಯನ್ನೆ ಗ್ರಾಮಸ್ಥರು ನೀಡಲು ಸಿದ್ದರಿದ್ದು ಬಡ ವ್ಯಾಪಾರಿಯ ಮೇಲೆ ದೌರ್ಜನ್ಯ ಮಾಡಿ ಸಾಧಿಸಿದ್ದಾದರೂ ಏನು ಎಂದು ಗ್ರಾಮಸ್ಥರು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಬಡ ವ್ಯಾಪಾರಿ ರಾಮಕೃಷ್ಣ ಕಾಮತ್ ಅವರ ಜಫ್ತಿ ಮಾಡಿದ ತಳ್ಳು ಗಾಡಿಗೆ ದಂಡ ಕಟ್ಟಿ ಬಿಡಿಸಿಕೊಳ್ಳಲು ಸಿದ್ಧರಿದ್ದರೂ ಅದನ್ನು ಹಿಂದಿರುಗಿಸದೆ ಪಂಚಾಯತ್ ಆಡಳಿತ ಕಳೆದೆರಡು ದಿನಗಳಿಂದ ಸತಾಯಿಸಿದ್ದೇ ಇದೀಗ ಅವರು ಹಠಾತ್ ಅನಾರೋಗ್ಯಕ್ಕೀಡಾಗಲು ಕಾರಣ ಎನ್ನಲಾಗುತ್ತಿದೆ.
ಸಂಜೆಯ ನಂತರ ಹೊಟ್ಟೆಪಾಡಿಗಾಗಿ ಸಣ್ಣ ಗೂಡಂಗಡಿ ಕ್ಯಾಂಟೀನ್ ಇಟ್ಟು ಮಂಚಿ ಗ್ರಾಮದ ಕುಕ್ಕಾಜೆ ಪೇಟೆಯಲ್ಲಿ ಎಲ್ಲರ ಮನಸ್ಸನ್ನು ಗೆದ್ದು ವ್ಯಾಪಾರ ಮಾಡುತ್ತಿದ್ದ ರಾಮಕೃಷ್ಣ ಕಾಮತ್ ರವರಿಗೆ ಮಂಚಿ ಗ್ರಾಮ ಪಂಚಾಯತ್ ಮಾಡಿದ ಅಮಾನವೀಯ ತಾಲಿಬಾನ್ ಬುಲ್ಡೋಜರ್ ಮಾದರಿಯ ರಾಕ್ಷಸೀ ಸಂಸ್ಕೃತಿಯನ್ನು ಗ್ರಾಮಸ್ಥರು ಪಕ್ಷಾತೀತವಾಗಿ, ಜಾತಿ-ಧರ್ಮ ಮರೆತು ಖಂಡಿಸಿದ್ದಾರೆ.
ಬಿಜೆಪಿ ಬೆಂಬಲಿತ ಪಂಚಾಯತ್ ಆಡಳಿತ, ಬಿಜೆಪಿ ಶಾಸಕರು, ಸಂಸದರು, ರಾಜ್ಯ, ಕೇಂದ್ರ ಸರಕಾರ ಎಲ್ಲವೂ ಇದ್ದರೂ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರಾಗಿರುವ ಬಡ ವ್ಯಾಪಾರಿಗೆ ಇಂತಹ ಅನ್ಯಾಯ ಎಸಗಿರುವುದು ಸಹಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
0 comments:
Post a Comment