ಬಂಟ್ವಾಳ, ಆಗಸ್ಟ್ 24, 2022 (ಕರಾವಳಿ ಟೈಮ್ಸ್) : ತಾಲೂಕಿನ ಚೆನ್ನೈತೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಜ್ಜಿಬೆಟ್ಟು ಗ್ರಾಮದ ಕೊರಗಟ್ಟೆ ಎಂಬಲ್ಲಿನ ಸಜಂಕಬೆಟ್ಟು (ಕನಸಡ್ಕ) ಎಂಬಲ್ಲಿ ಇತ್ತೀಚೆಗಷ್ಟೇ ನಿರ್ಮಾಣ ಆರಂಭಗೊಂಡಿರುವ ಕಿಂಡಿ ಅಣೆಕಟ್ಟು ಹಾಗೂ ಸೇತುವೆ ಕಾಮಗಾರಿಯು ಅತ್ಯಂತ ಕಳಪೆ ಮಟ್ಟದಲ್ಲಿದ್ದು, ಅಪಾಯವನ್ನು ಆಹ್ವಾನಿಸುತ್ತಿದೆ ಎಂದು ಸ್ಥಳೀಯರು ಕಾಮಗಾರಿಯ ಫೋಟೋ ಸಹಿತ ಅಧಿಕಾರಿ ವರ್ಗದ ಗಮನ ಸೆಳೆದಿದ್ದಾರೆ.
ಅಧಿಕಾರಿಗಳು ಇಲ್ಲಿನ ಸೇತುವೆ ಹಾಗೂ ಕಿಂಡಿ ಅಣೆಕಟ್ಟಿನ ಕಳಪೆ ಕಾಮಗಾರಿ ಬಗ್ಗೆ ತಕ್ಷಣ ಗಮನಹರಿಸಿ ಅಪಾಯ ಹಾಗೂ ಜೀವಹಾನಿ ಸಂಭವಿಸುವ ಮುಂಚಿತವಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಗಂಭೀರವಾಗಿ ಆಗ್ರಹಿಸಿದ್ದಾರೆ.
ಸುಮಾರು 5.40 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಕಾಮಗಾರಿಯ ಹಿಂದೆ ಭ್ರಷ್ಟಾಚಾರದ ವಾಸನೆ ಬಡಿಯುತ್ತಿದೆ ಎಂದು ಆರೋಪಿಸಿರುವ ಸ್ಥಳೀಯರು ಈಗಾಗಲೇ ಶೇಕಡಾ 80ರಷ್ಟು ಕಾಮಗಾರಿ ಮುಗಿದಿದ್ದು, ಇನ್ನೇನು ಈ ಕಿಂಡಿ ಅಣೆಕಟ್ಟು ಹಾಗೂ ಸೇತುವೆಯು ಜನರ ಸೇವೆಗೆ ಲೋಕಾರ್ಪಣೆಗೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಅಧಿಕಾರಿಗಳ ಗಮನ ಸೆಳೆದಿದ್ದಾರೆ.
ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಇಲ್ಲಿನ ತಡೆಗೋಡೆಯ ಕಾಮಗಾರಿಯ ಅಡಿಪಾಯ ಕಿತ್ತು ಹೊರಗೆ ಬಂದಂತಿದೆ. ತಡೆಗೋಡೆ ಕೂಡಾ ಒಡೆದು ಹೋದಂತಿದ್ದು, ಅಪಾಯದ ಸ್ಥಿತಿಯಲ್ಲಿದೆ. ಕಿಂಡಿ ಅಣೆಕಟ್ಟು ಹಾಗೂ ಸೇತುವೆ ತಡೆಗೋಡೆಯ ಅಡಿಪಾಯವು ನದಿಯ (ಸಣ್ಣ ನದಿ, ದೊಡ್ಡದಾದ ತೋಡು) ನೀರಿನ ಕೆಳಮಟ್ಟದಿಂದ ಕನಿಷ್ಠ 8 ಅಡಿಯಿಂದ ತಡೆಗೋಡೆ ಅಡಿಪಾಯವನ್ನು ಹಾಕಬೇಕು. ಆದರೆ ಈ ತಡೆಗೋಡೆಯ ಅಡಿಪಾಯವು ಮೇಲ್ನೋಟಕ್ಕೆ 1 ಅಡಿ ಅಂತರದಲ್ಲಿ ಕಾಣಿಸ್ತಾ ಇದೆ. ತಡೆಗೋಡೆಯು ಅಡಿಪಾಯದಿಂದ ಹಿಡಿದು ಹಲವು ಕಡೆ ಬಿರುಕು ಬಿಟ್ಟಿದೆ. ಇದರಿಂದ ಸೇತುವೆ ಅಪಾಯ ಮಟ್ಟದಲ್ಲಿದೆ. ಒಂದು ಬದಿಯ ತಡೆಗೋಡೆಯು 2 ಇಂಚು ಈಗಾಗಲೇ ಒಡೆದು ಹೊರಗೆ ಬಂದಿದ್ದು, ಯಾವುದೇ ಸಂದರ್ಭ ದುರಂತ ಎದುರಾಗುವ ಸನ್ನಿವೇಶ ಕಂಡು ಬರುತ್ತಿದೆ, ಯಾವ ಕಡೆಗೆ ನೀರು ಹರಿಯಬಾರದು ತಡೆಗೋಡೆ ನಿರ್ಮಿಸಲಾಗಿದೆಯೋ ಆ ತಡೆಗೋಡೆಯ ಅಡಿಪಾಯದಿಂದಲೇ ನೀರು ಹೊರಗಡೆ ಬರುವುದು ಕಂಡು ಬರುತ್ತಿದೆ. ಸೇತುವೆಯ ಮೇಲ್ಭಾಗದಲ್ಲೂ ಕೆಲವು ಕಡೆ ಬಿರುಕು ಬಿಟ್ಟಿರುವುದು ಕಂಡು ಬರುತ್ತಿದೆ.
ಸಾಮಾನ್ಯವಾಗಿ ಜನ ಆರ್ ಸಿ ಸಿ ಮನೆ ಕಟ್ಟುವಾಗ 16/20 ಇಂಚಿನ ಕಬ್ಬಿಣದ ಸಲಾಕೆಯನ್ನು ಉಪಯೋಗಿಸುತ್ತಾನೆ. ಆದರೆ ಸರಕಾರದ ಇಷ್ಟು ದೊಡ್ಡ ಕಿಂಡಿ ಅಣೆಕಟ್ಟು ಹಾಗೂ ಸೇತುವೆಯ ಕಾಮಗಾರಿಯಲ್ಲಿ ಬಳಸಿದ ಕಬ್ಬಿಣದ ಸಲಾಕೆಯು 8-10-12 ಇಂಚಿನಷ್ಟು ಮಾತ್ರ ಕಂಡು ಬರುತ್ತಿದೆ. ಈ ಕಾಮಗಾರಿಗೆ ಕನಿಷ್ಠ ಎಂದರೂ 30 ಇಂಚಿಗೂ ಮೇಲ್ಪಟ್ಟ ಕಬ್ಬಿಣದ ಸಲಾಕೆಯನ್ನು ಉಪಯೋಗಿಸಬೇಕಿದೆ.
ಈ ಎಲ್ಲಾ ವಿವರಗಳೊಂದಿಗೆ ಹಾಗೂ ಕಾಮಗಾರಿಯ ದುಸ್ಥಿತಿಯ ಭಾವಚಿತ್ರದೊಂದಿಗೆ ಸ್ಥಳೀಯರು ಅಧಿಕಾರಿಗಳ ಗಮನ ಸೆಳೆದಿದ್ದಾರಲ್ಲದೆ ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲೂ ಆತಂಕ ವ್ಯಕ್ತಪಡಿಸಿ ಅಪಾಯದ ಬಗ್ಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ತುಳುನಾಡ ರಕ್ಷಣಾ ವೇದಿಕೆ ಆಕ್ರೋಶ
ತಾಲೂಕಿನ ಚೆನ್ನೈತೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಜ್ಜಿಬೆಟ್ಟು ಗ್ರಾಮದ ಕೊರಗಟ್ಟೆ ಎಂಬಲ್ಲಿನ ಸಜಂಕಬೆಟ್ಟು (ಕನಸಡ್ಕ) ಎಂಬಲ್ಲಿ ಇತ್ತೀಚೆಗಷ್ಟೇ ನಿರ್ಮಾಣ ಆರಂಭಗೊಂಡಿರುವ ಕಿಂಡಿ ಅಣೆಕಟ್ಟು ಹಾಗೂ ಸೇತುವೆ ಕಾಮಗಾರಿಯು ಅತ್ಯಂತ ಕಳಪೆ ಮಟ್ಟದಲ್ಲಿದ್ದು, ಅಪಾಯವನ್ನು ಆಹ್ವಾನಿಸುತ್ತಿರುವ ಬಗ್ಗೆ ವಾಮದಪದವು ತುಳುನಾಡ ರಕ್ಷಣಾ ವೇದಿಕೆ ಕಾರ್ಯಕರ್ತರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ವಿವಿಧ ಸಂಘ ಸಂಸ್ಥೆಯೊಂದಿಗೆ ಕೈ ಜೋಡಿಸಿ ಈ ಕಳಪೆ ಕಾಮಗಾರಿಯ ವಿರುದ್ದ ಪ್ರತಿಭಟನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡುವುದಾಗಿ ವೇದಿಕೆ ಸಭೆಯಲ್ಲಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಬಂಟ್ಟಾಳ ತಾಲೂಕಿನ ವಾಮದಪದವು ಸಮೀಪದ ಚೆನೈತ್ತೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಜ್ಜಿಬೆಟ್ಟು ಗ್ರಾಮದ ವೇಣೂರು ಸಂಪರ್ಕ ಸೇತುವೆಗೆ 5 ಕೋಟಿ 40 ಲಕ್ಷ ಮಂಜೂರು ಆಗಿ 80% ಕೆಲಸ ಪೂರ್ಣಗೊಂಡಿದೆ. ಗುತ್ತಿಗೆದಾರ ಮತ್ತು ಇಂಜಿನಿಯರ್ ಅವರುಗಳ ಅಸಡ್ಡೆ ವರ್ತನೆಯಿಂದ ಪೂರ್ಣಗೊಂಡ ಸಂಪೂರ್ಣ ಕೆಲಸ ಕಳಪೆ ಆಗಿ ನೀರಿನಲ್ಲಿ ಕೊಚ್ಚಿ ಹೋಗುವ ಹಂತದಲ್ಲಿದೆ ಎಂದು ವೇದಿಕೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಲಾನ್ಯಾಸಗೈದು 3 ತಿಂಗಳಲ್ಲಿ 80% ಕೆಲಸ ಮುಗಿಸಿ 5 ತಿಂಗಳಲ್ಲಿ ನೀರಿನಲ್ಲಿ ಕೊಚ್ಚಿ ಹೋಗುವಂತಿದೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ.
0 comments:
Post a Comment