ಬಂಟ್ವಾಳ, ಆಗಸ್ಟ್ 15, 2022 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಬೋಳಂಗಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಧ್ವಜಾರೋಹಣಗೈದು ಮಾತನಾಡಿದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ, ಪತ್ರಕರ್ತ ಸಲೀಂ ಬೋಳಂಗಡಿ, ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ದೇಶ ನಮ್ಮದು. ಪರಸ್ಪರ ಸ್ನೇಹ-ಸೌಹಾರ್ದತೆಯಿಂದ ಬಾಳುವ ಮೂಲಕ ನಮ್ಮ ದೇಶವನ್ನು ಅಭಿವೃದ್ಧಿಗೊಳಿಸಬೇಕು. ತಿರಂಗಗಳು ಕೇವಲ ಪ್ರದರ್ಶನಕ್ಕೆ ಸೀಮಿತವಾಗದೆ ನಮ್ಮ ಹೃದಯದಲ್ಲಿ ಸದಾ ಅರಳುತ್ತಿರಬೇಕು. ಈ ಮೂಲಕ ನಾವೆಲ್ಲರೂ ಭಾರತೀಯರು ಎಂಬ ಭಾವನೆಯಿಂದ ಭಾವೈಕ್ಯತೆಯ ಸೌಹಾರ್ದದ ಭಾರತವನ್ನು ನಿರ್ಮಿಸೋಣ ಎಂದರು.
ಇದೇ ವೇಳೆ ಸ್ಥಳೀಯ ಉದ್ಯಮಿ ಜನಾರ್ದನ ಪೂಜಾರಿ ಅವರು ಶಾಲೆಗೆ ಉಚಿತವಾಗಿ ನಿರ್ಮಿಸಿಕೊಟ್ಟ ಅಡುಗೆ ಕೋಣೆ ಮೇಲ್ಚಾವಣಿಯನ್ನು ಉದ್ಯಮಿ ಪಿ ಬಿ ಅಬ್ದುಲ್ ಅಝೀಝ್ ಉದ್ಘಾಟಿಸಿದರು. ಜನಾರ್ದನ ಬೋಳಂಗಡಿ ಅವರನ್ನು ಶಾಲಾಭಿವೃದ್ಧಿ ಸಮಿತಿ, ಶಿಕ್ಷಕರ ವೃಂದ ಹಾಗೂ ಹಳೆ ವಿದ್ಯಾರ್ಥಿಗಳ ಪರವಾಗಿ ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಉದ್ಯಮಿಗಳಾದ ಎಂ ಎಚ್ ಮುಸ್ತಫಾ, ಎಂ ಎನ್ ಕುಮಾರ್ ಮೆಲ್ಕಾರ್, ಪುರಸಭಾ ಸದಸ್ಯೆ ಗಾಯತ್ರಿ ಪ್ರಕಾಶ್, ಮಾಜಿ ಸದಸ್ಯೆ ವಸಂತಿ ಗಂಗಾಧರ್, ಯೋಧ ಪ್ರವೀಣ್ ಕುಮಾರ್ ಕಟೀಲ್, ಎಸ್ ಐ ಓ ಇದರ ರಿಝ್ವಾನ್ ಅವರು ಶುಭ ಹಾರೈಸಿದರು.
ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ರೂಪ, ಮೆಲ್ಕಾರ್ ಯುವ ಸಂಗಮದ ಅಧ್ಯಕ್ಷ ಶ್ರೀನಿವಾಸ್, ಉದ್ಯಮಿ ಶಿವಾನಂದ, ಶಾಲಾ ಮುಖ್ಯೋಪಾಧ್ಯಾಯ ಶ್ರೀಧರ್, ಶಿಕ್ಷಕಿಯರಾದ ರೇಣುಕಾ ಮೊದಲಾದವರು ಭಾಗವಹಿಸಿದ್ದರು. ಬಳಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
0 comments:
Post a Comment