ಬಂಟ್ವಾಳ, ಆಗಸ್ಟ್ 04, 2022 (ಕರಾವಳಿ ಟೈಮ್ಸ್) : ಇಲ್ಲಿನ ರೈಲು ನಿಲ್ದಾಣ ಮೇಲ್ದರ್ಜೆಗೇರಿದ ಬಳಿಕವೂ ಅವ್ಯವಸ್ಥೆಗೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಪರಿಹಾರ ದೊರೆತಂತೆ ಕಂಡು ಬರುತ್ತಿಲ್ಲ. ಮಳೆಗಾಲದಲ್ಲಂತೂ ಬಂಟ್ವಾಳ ರೈಲ್ವೆ ನಿಲ್ದಾಣ ಅವ್ಯವಸ್ಥೆಯ ಆಗರವಾಗಿದೆ. ಬಿರುಸಿನ ಮಳೆಗಾಲದಲ್ಲಿ ಈ ರೈಲ್ವೆ ನಿಲ್ದಾಣದ ಮೂಲಕ ರೈಲು ಪ್ರಯಾಣಕ್ಕೆ ಬರುವ ಪ್ರಯಾಣಿಕರಂತೂ ಹರಸಾಹಸ ಪಡುತ್ತಿರುವ ದೃಶ್ಯ ನಿತ್ಯ ಕಂಡು ಬರುತ್ತಿದೆ.
ಮಳೆಗಾಲದಲ್ಲಿ ಪ್ರಯಾಣಿಕರು ವಿಶ್ರಾಂತಿ ಪಡೆಯುವ ಜಾಗದವರೆಗೂ ಮಳೆ ನೀರು ಹರಿದು ಬರುತ್ತಿದೆ. ರೈಲು ನಿಲ್ದಾಣದ ಫ್ಲಾಟ್ ಫಾರಂನಲ್ಲಿಯೂ ಪ್ರಯಾಣಿಕರು ರೈಲು ಹತ್ತುವ ವೇಳೆ ಪೂರ್ತಿ ಒದ್ದೆಯಾಗುವಂತಹ ಪರಿಸ್ಥಿತಿ ಇಲ್ಲಿದೆ. ಫ್ಲ್ಯಾಟ್ ಫಾರಂನಲ್ಲಿ ಪ್ರಯಾಣಿಕರು ರೈಲು ಹತ್ತುವವರೆಗೂ ಯಾವುದೇ ಮೇಲ್ಛಾವಣಿ ವ್ಯವಸ್ಥೆ ಇಲ್ಲದೆ ಮಳೆಯಲ್ಲೇ ಒದ್ದೆಯಾಗಿ ರೈಲು ಹತ್ತುವ ಪರಿಸ್ಥಿತಿ ಇದೆ. ಮಳೆಗಾಲದಲ್ಲಿ ಸಮರ್ಪವಾಗಿ ಸುರಕ್ಷಿತವಾಗಿ ಲಗೇಜ್ ಇಟ್ಟುಕೊಳ್ಳಲೂ ಪ್ರಯಾಣಿಕರಿಗೆ ಇಲ್ಲಿ ಯಾವುದೇ ವ್ಯವಸ್ಥೆ ಇರುವುದಿಲ್ಲ. ಅದೇ ರೀತಿ ಫ್ಲ್ಯಾಟ್ ಫಾರಂ ನೆಲಕ್ಕೆ ಹಾಕಿರುವ ಸಿಮೆಂಟ್ ಪಾಲಿಶ್ ಅಂತೂ ಪ್ರಯಾಣಿಕರ ಪಾಲಿಗೆ ಅಪಾಯಕಾರಿಯಾದಂತಿದೆ. ಇಲ್ಲಿನ ಫ್ಲಾಟ್ ಫಾರಂನಲ್ಲಿ ಯಾವುದೇ ಸುರಕ್ಷಿತವಾದ ಇಂಟರ್ ಲಾಕ್ ವ್ಯವಸ್ಥೆ ಇಲ್ಲದೆ ಸಿಮೆಂಟ್ ಪಾಲಿಶ್ ಮಾಡಲಾಗಿದೆ. ಇದು ಮಳೆಗಾಲದಲ್ಲಿ ವಿಪರೀತವಾಗಿ ಜಾರುತ್ತಿದೆ. ರೈಲು ಹತ್ತುವ ಭರದಲ್ಲಿ ಪ್ರಯಾಣಿಕರು ಒಂದಷ್ಟು ಯಾಮಾರಿದರೂ ಇಲ್ಲಿ ಅಪಾಯ ನಿಶ್ಚಿತ ಎಂಬ ಪರಿಸ್ಥಿತಿ ಇದೆ.
ಮಂಗಳೂರಿನಂತಹ ರೈಲ್ವೆ ನಿಲ್ದಾಣಗಳಲ್ಲಿ ಫ್ಲಾಟ್ ಫಾರಂ ಮೇಲ್ಛಾವಣಿ ರೈಲು ಗಾಡಿಗಿಂತಲೂ ಮೇಲ್ಭಾಗದಲ್ಲಿದ್ದು, ವಿಶಾಲವಾಗಿ ನಿರ್ಮಿಸಲಾಗಿದ್ದು, ಮಳೆಗಾಲದಲ್ಲೂ ಪ್ರಯಾಣಿಕರಿಗೆ ಯಾವುದೇ ಒದ್ದೆಯಾಗುವ ತೊಂದರೆಯಿರುವುದಿಲ್ಲ. ಅಲ್ಲದೆ ರೈಲು ನಿಲ್ದಾಣದ ಒಳಭಾಗಕ್ಕೂ ಮಳೆ ನೀರು ನುಗ್ಗುವ ಸ್ಥಿತಿಯಿಲ್ಲ. ಪ್ರಯಾಣಿಕರು ಹಾಗೂ ಅವರ ಲಗೇಜುಗಳು ರೈಲ್ವೆ ನಿಲ್ದಾಣದಲ್ಲಿ ಅತ್ಯಂತ ಸುರಕ್ಷಿತವಾಗಿರುತ್ತದೆ. ಆದರೆ ಬಂಟ್ವಾಳದ ರೈಲು ನಿಲ್ದಾಣ ಇತ್ತೀಚೆಗೆ ಮೇಲ್ದೆರ್ಜಗೇರಿ ಬಹಳಷ್ಟು ಕಾಮಗಾರಿಗಳು ಭರದಿಂದ ನಡೆದರೂ ಮಳೆಗಾಲದಲ್ಲಿ ಮಾತ್ರ ಪ್ರಯಾಣಿಕರಿಗೆ ಸುರಕ್ಷತೆಯಾಗಿರುವ ಯಾವುದೇ ಪರಿಹಾರ ಕ್ರಮಗಳು ಇನ್ನೂ ಕೈಗೊಂಡಿಲ್ಲದೆ ಇರುವ ಬಗ್ಗೆ ರೈಲು ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಥಳೀಯ ಸಂಸದರು, ಜನಪ್ರತಿನಿಧಿಗಳು, ಇಲಾಖಾಧಿಕಾರಿಗಳು ತಕ್ಷಣ ಪರಿಶೀಲನೆ ನಡೆಸಿ ರೈಲು ಪ್ರಯಾಣಿಕರ ಹಿತದೃಷ್ಟಿಯಿಂದ ಸೂಕ್ತ ಪರಿಹಾರ ಕ್ರಮ ಕೈಗೊಂಡು ರೈಲು ಪ್ರಯಾಣಿಕರ ಸಮಸ್ಯೆಗೆ ಅಂತ್ಯ ಹಾಡುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ.
0 comments:
Post a Comment