ಬಂಟ್ವಾಳ, ಜುಲೈ 12, 2022 (ಕರಾವಳಿ ಟೈಮ್ಸ್) : ಬಂಟ್ವಾಳದಲ್ಲಿ ಈ ಬಾರಿ ಸಾಮಾನ್ಯಕ್ಕಿಂತ ಜಾಸ್ತಿಯಾಗಿ ಪ್ರಾಕೃತಿಕ ವಿಕೋಪ ಪ್ರಕರಣಗಳು ವರದಿಯಾಗಿದ್ದು, ಜನರ ಕಷ್ಟಗಳಿಗೆ ಸೂಕ್ತ ಸಮಯದಲ್ಲಿ ಸ್ಪಂದಿಸಲು ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಕಿಡಿ ಕಾರಿದರು.
ಮಂಗಳವಾರ ಬಿ ಸಿ ರೋಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಂಜಿಕಲ್ಲು ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಗುಡ್ಡ ಕುಸಿತ ಮಹಾ ದುರಂತದಲ್ಲಿ ಸ್ಥಳೀಯಾಡಳಿತದ ಸ್ಪಷ್ಟ ನಿರ್ಲಕ್ಷ್ಯ ಹಾಗೂ ಸಹಾನುಭೂತಿ ಇಲ್ಲದ ಪರಿಣಾಮ ಮೂರು ಮಂದಿ ವಲಸೆ ಕಾರ್ಮಿಕರು ದುರಂತ ಅಂತ್ಯ ಕಾಣುವಂತಾಗಿದೆ. ಅಲ್ಲದೆ ಮೊದಲೇ ಅನಿರೀಕ್ಷಿತ ಘೋರ ದುರಂತದಿಂದ ಮಾನಸಿಕವಾಗಿ ಕುಗ್ಗಿ ಹೋಗಿರುವ ಮನೆ ಮಾಲಿಕರ ಮೇಲೆ ಸ್ಥಳೀಯ ಗ್ರಾಮ ಕರಣಿಕರು ತಮ್ಮ ತಪ್ಪನ್ನು ಮುಚ್ಚಿ ಹಾಕುವ ಸಲುವಾಗಿ ಎಫ್ ಐ ಆರ್ ದಾಖಲಿಸಿ ಸಂಪೂರ್ಣ ಅಮಾನವೀಯತೆ ಮೆರೆದಿದ್ದಾರೆ ಇದು ಅತ್ಯಂತ ಖಂಡನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯಾಡಳಿತ ಕನಿಷ್ಠ ಜೆಸಿಬಿ ವ್ಯವಸ್ಥೆ ಮಾಡಿ, ವೈದ್ಯಕೀಯ ತಂಡವನ್ನು ಸ್ಥಳಕ್ಕೆ ತರಿಸುವಲ್ಲಿ ವಿಫಲವಾಗಿರುವುದೇ ಅಮಾಯಕ ಕಾರ್ಮಿಕರು ಜೀವ ಕಳೆದುಕೊಳ್ಳಲು ಕಾರಣವಾಗಿದ್ದು, ಸ್ಥಳೀಯರು ತಮ್ಮ ಜೆಸಿಬಿ ಬಳಸಿ ಕಾರ್ಯಾಚರಣೆ ನಡೆಸಿ ಕಾರ್ಮಿಕರನ್ನು ಮೇಲಕ್ಕೆತ್ತಿದ ಬಳಿಕ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆತಂದರೆ ಅಲ್ಲಿ ಸೂಕ್ತ ವ್ಯವಸ್ಥೆಯಿಲ್ಲದೆ ಅಲ್ಲಿಂದ ಅವರನ್ನು ಮಂಗಳೂರು ಎಜೆ ಆಸ್ಪತ್ರೆಗೆ ಸಾಗಿಸಲಾಯಿತು. ಖಾಸಗಿ ಆಸ್ಪತ್ರೆಯಲ್ಲಿ ಬಿಲ್ ಭದ್ರತೆ ವಹಿಸಿಕೊಳ್ಳಲು ಜನರಿಲ್ಲದ ಪರಿಣಾಮ ಮತ್ತೆ ಅಲ್ಲಿಂದ ಮಂಗಳಾ ಆಸ್ಪತ್ರೆಗೆ ಸಾಗಿಸಲಾಗಿದೆ. ಹೀಗೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಸುಮಾರು ನಾಲ್ಕು ಗಂಟೆಗಳ ಕಾಲ ಮಣ್ಣಿನಡಿಯಲ್ಲಿದ್ದು ಗಂಭೀರ ರೀತಿಯ ಗಾಯಗಳಾದವರನ್ನು ಅಲೆದಾಡಿಸಿ ಪರಿಣಾಮ ಮೂರು ಜೀವಗಳು ಅನ್ಯಾಯವಾಗಿ ಬಲಿಯಾಗಿದೆ ಎಂದು ಗಂಭೀರವಾಗಿ ಆರೋಪಿಸಿದ ರೈ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿಗಳು ಎಲ್ಲಿ ವೈದ್ಯರು ಎಂದು ಪ್ರಶ್ನಿಸಿ ಸ್ಥಳದಲ್ಲೇ ವೈದ್ಯರಿಗೆ ನೋಟೀಸು ಜಾರಿಗೊಳಿಸಿ ಎಂದು ಸೂಚಿಸಿರುವುದೇ ವೈಫಲ್ಯತೆಗೆ ಸಾಕ್ಷಿಯಾಗಿದೆ ಎಂದರು.
ಪ್ರಾಕೃತಿಕ ವಿಕೋಪ ತಡೆಯಲು ಸಂತ್ರಸ್ತರ ತೆರವಿಗೆ ನೋಟೀಸು ಹಂಚುವುದು ಬಿಟ್ಟರೆ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ಆಡಳಿತ ವಿಫಲವಾಗುತ್ತಿದೆ. ವಿಕೋಪ ಸಂಭವಿಸುವ ಸ್ಥಳದಲ್ಲಿ ತೆರವುಗೊಂಡ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕಾದದು ಗ್ರಾಮ ಕರಣಿಕರ ಜವಾಬ್ದಾರಿಯಾಗಿದ್ದು, ಕೇವಲ ಫೋನ್ ಮೂಲಕ ಮಾತನಾಡಿ ಮನೆ ಮಾಲಿಕರ ಮೇಲೆ ಎಫ್ ಐ ಆರ್ ದಾಖಲಿಸುವುದಾದರೆ ಮಾನವೀಯತೆ ಎಲ್ಲಿ ಬಂತು ಎಂದು ಪ್ರಶ್ನಿಸಿದ ರಮಾನಾಥ ರೈ ಅವರು ಈಗಾಗಲೇ ಮನೆ ಮಂದಿಯ ಬೆಲೆ ಬಾಳುವ ವಸ್ತುಗಳು ಮಣ್ಣಿನಡಿಯಲ್ಲಿದೆ. ಮನೆ ಮಾಲಕರ ಮೇಲೆ ಎಫ್ ಐ ಆರ್ ದಾಖಲಾದ ಕಾರಣ ಸ್ಥಳಕ್ಕೆ ಬಾರದ ಪರಿಸ್ಥಿತಿ ಇದೆ. ಹೀಗಿದ್ದರೆ ಸಂತ್ರಸ್ತರ ರಕ್ಷಣೆ ಮಾಡುವವರು ಯಾರು ಎಂದವರು ಪ್ರಶ್ನಿಸಿದರು.
ಪ್ರಾಕೃತಿಕ ವಿಕೋಪ ಸಂದರ್ಭ ನೀಡಲ್ಪಡುವ ಪರಿಹಾರ ಮೊತ್ತದ ಬಗ್ಗೆ ಸಚಿವರು ಜಿಪುಣತನ ತೋರದಿರಿ ಎಂದು ಅಧಿಕಾರಿಗಳಿಗೆ ಸೂಚಿಸಿರುವುದು ಉತ್ತಮ ಬೆಳವಣಿಗೆ. ಆದರೆ ಸರಕಾರ ಕೂಡಾ ಪರಿಹಾರ ಮೊತ್ತ ಬಿಡುಗಡೆ ಮಾಡುವಲ್ಲಿ ಜಿಪುಣತನ ತೋರಬಾರದು ಎಂದು ಆಗ್ರಹಿಸಿದರು. ಎಲ್ಲಾ ಸಾಮಾಗ್ರಿಗಳ ಬೆಲೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಈ ನಿಟ್ಟಿನಲ್ಲಿ ಪರಿಹಾರ ಮೊತ್ತ ಕೂಡಾ ಪರಿಣಾಮಕಾರಿಯಾಗಿ ಏರಿಸುವ ಅನಿವಾರ್ಯತೆ ಇದೆ ಎಂದು ರಮಾನಾಥ ರೈ ಆಗ್ರಹಿಸಿದರು.
ಈ ಸಂದರ್ಭ ಪ್ರಮುಖರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಅಬ್ಬಾಸ್ ಅಲಿ, ಸುದರ್ಶನ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಬಿ ಪದ್ಮಶೇಖರ್ ಜೈನ್, ಜಯಂತಿ ಪೂಜಾರಿ ಮೊದಲಾದವರು ಜೊತೆಗಿದ್ದರು.
0 comments:
Post a Comment