ಬಂಟ್ವಾಳ, ಜುಲೈ 22, 2022 (ಕರಾವಳಿ ಟೈಮ್ಸ್) : ತಾಲೂಕಿನ ಕೇಪು ಗ್ರಾಮದ ಬೀಜಡ್ಕ ಬಳಿ ಶುಕ್ರವಾರ ಮ ಮುಂಜಾನೆ ಕಾರಿನಲ್ಲಿ ಹಿಂಸಾತ್ಮಕವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಸ್ಥಳೀಯರು ಬೇಧಿಸಿ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಸ್ಥಳಕ್ಕಾಗಮಿಸಿದ ವಿಟ್ಲ ಪೊಲೀಸರು ಕಾರು ಸಹಿತ ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳು ಪೊಲೀಸರಿಂದ ತಪ್ಪಿಸಿ ಪರಾರಿಯಾಗುವಲ್ಲಿ ಸಫಲರಾಗಿದ್ದಾರೆ.
ಕೆಎ-19-ಎಂಎ-5422ನೇ ಅಲ್ಟೋ ಕಾರಿನಲ್ಲಿ ಚಾಲಕ ಹಾಗೂ ಇನ್ನೋರ್ವ ಕಪ್ಪು ಬಣ್ಣದ ಹಾಗೂ ಬಿಳಿ ಕೆಂಪು ಮಿಶ್ರಿತ ಬಣ್ಣದ ಹೋರಿಗಳನ್ನು ಕುತ್ತಿಗೆ ಮತ್ತು ಕಾಲುಗಳಿಗೆ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಯಾವುದೇ ಪರವಾನಿಗೆ ಇಲ್ಲದೆ ಸಾಗಾಟ ಮಾಡುತ್ತಿದ್ದ ವೇಳೆ ಶುಕ್ರವಾರ ಬೆಳಿಗ್ಗೆ ಸುಮಾರು 6.15ರ ವೇಳೆಗೆ ಕಾರು ಕೆಟ್ಟು ನಿಂತಿದ್ದು, ಈ ಸಂದರ್ಭ ಜಾನುವಾರು ಸಾಗಾಟ ಸ್ಥಳೀಯ ನಿವಾಸಿಗಳ ಗಮನಕ್ಕೆ ಬಂದಿದೆ. ಕಾರಿನ ಗಾಜು ಒಡೆದು ಜಾನುವಾರು ರಕ್ಷಣೆ ಮಾಡಿದ ಸ್ಥಳೀಯರು ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ವಿಟ್ಲ ಪೊಲೀಸರು ಕಾರು ಸಹಿತ ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಈ ಬಗ್ಗೆ ಕೇಪು ಗ್ರಾಮದ ಸಾರಡ್ಕ ನಿವಾಸಿ ಅಚ್ಯುತ್ ಮಣಿಯಾನಿ ಅವರ ಪುತ್ರ ರಾಘವ ಮಣಿಯಾನಿ ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 122/2022 ಕಲಂ 5, 7, 12 ದಿ ಕರ್ನಾಟಕ ಪ್ರಿವೆನ್ಶನ್ ಆಫ್ ಸ್ಲಾಟರ್ ಆಂಡ್ ಪ್ರಿಸರ್ವೇಶನ್ ಆಫ್ ಕ್ಯಾಟಲ್ ಆರ್ಡಿನೆನ್ಸ್-2020 ಮತ್ತು 11 (1) (ಏ), 11 (1)(ಡಿ) ಪ್ರಾಣಿ ಹಿಂಸೆ ನಿಷೇಧ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment