ಮಂಗಳೂರು, ಜುಲೈ 29, 2022 (ಕರಾವಳಿ ಟೈಮ್ಸ್): ನಗರದ ಹೊರವಲಯದ ಸುರತ್ಕಲ್ ಬಳಿ ಗುರುವಾರ ಸಂಜೆ ವೇಳೆಗೆ ಕಾರಿನಲ್ಲಿ ಬಂದ ತಂಡವೊಂದು ಮಂಗಳಪದವು ನಿವಾಸಿ ಫಾಝಿಲ್ ಎಂಬ ಯುವಕನನ್ನು ಅಟ್ಟಾಡಿಸಿ ಭೀಕರವಾಗಿ ಕೊಲೆ ಮಾಡಿದ ಹಿನ್ನಲೆಯಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿಯಿಂದ ಶನಿವಾರ ಬೆಳಗ್ಗಿನವರೆಗೆ ಸೆಕ್ಷನ್ 144 ಪ್ರಕಾರ ನಿಷೇಧಾಜ್ಞೆ ವಿಧಿಸಿ ಮಂಗಳೂರು ನಗರ ಕಮಿಷನರ್ ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.
ಮಂಗಳೂರಿನ ಬಜ್ಪೆ, ಪಣಂಬೂರು, ಮುಲ್ಕಿ, ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ನಿಷೇಧಾಜ್ಞೆ ಆದೇಶ ಜಾರಿಯಲ್ಲಿರಲಿದೆ.
ಫಾಝಿಲ್ ಕೊಲೆಗೆ ಸೂಕ್ತ ಕಾರಣ ತಿಳಿದು ಬಂದಿಲ್ಲ, ತನಿಖೆ ಬಳಿಕವೇ ಹತ್ಯೆಗೆ ಕಾರಣ ತಿಳಿದು ಬರಲಿದೆ ಎಂದು ಮಂಗಳೂರು ಕಮಿಷನರ್ ಶಶಿಕುಮಾರ್ ಇದೇ ವೇಳೆ ತಿಳಿಸಿದ್ದಾರೆ.
ಸುರತ್ಕಲ್ ಮೊಬೈಲ್ ಅಂಗಡಿ ಬಳಿ ಸ್ನೇಹಿತರೊಂದಿಗೆ ಫಾಝಿಲ್ ಮಾತನಾಡುತ್ತಿದ್ದ ವೇಳೆ ಕಾರಿನಲ್ಲಿ ಬಂದ ತಂಡ ಭೀಕರವಾಗಿ ಅಟ್ಟಾಡಿಸಿ ಹಲ್ಲೆ ನಡೆಸಿದ್ದಾರೆ. ಮಾರಣಾಂತಿಕ ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ಫಾಝಿಲ್ ನನ್ನು ತಕ್ಷಣ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಫಾಝಿಲ್ ಸಾವನ್ನಪ್ಪಿದ್ದಾನೆ.
ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಬೆನ್ನಿಗೇ ಸುರತ್ಕಲ್ ಕೊಲೆ ನಡೆದಿದ್ದು ಕರಾವಳಿ ಜಿಲ್ಲೆಯ ಜನ ಆತಂಕಗೊಳ್ಳುವಂತೆ ಮಾಡಿದೆ. ಮುಖ್ಯಮಂತ್ರಿ ಹಾಗೂ ಗೃಹಮಂತ್ರಿ ಸಹಿತ ಅರ್ಧ ಸರಕಾರವೇ ಕರಾವಳಿ ಜಿಲ್ಲೆಯ ಪ್ರವಾಸದಲ್ಲಿರುವ ಸಂದರ್ಭದಲ್ಲೇ ಈ ಭೀಕರ ಘಟನೆ ನಡೆದಿರುವುದು ಜಿಲ್ಲೆಯ ಜನ ಸಹಜವಾಗಿಯೇ ಕಾನೂನು ಸುವ್ಯವಸ್ಥೆಯ ಬಗ್ಗೆ ಆತಂಕಗೊಳ್ಳುವಂತೆ ಮಾಡಿದೆ.
ಗ್ಯಾಸ್ ಏಜೆನ್ಸಿಯಾಗಿ ಕೆಲಸ ಮಾಡುತ್ತಿದ್ದ ಫಾಝಿಲ್ ಗುರುವಾರ ಸಂಜೆ ವೇಳೆ ಮೊಬೈಲ್ ಅಂಗಡಿ ಸಮೀಪ ಫ್ರೆಂಡ್ ಜತೆ ಮಾತನಾಡಿ ಹೊರಬಂದ ಸಂದರ್ಭ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಎರ್ರಾಬಿರ್ರಿಯಾಗಿ ತಲವಾರು ಬೀಸಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ಫಾಝಿಲ್ ನನ್ನು ಅತ್ಯಂತ ಭೀಕರವಾಗಿ ಕೊಲೆ ಮಾಡಲಾಗಿದೆ. ಭೀಕರ ಘಟನೆಯ ಸೀಸಿ ಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಜಿಲ್ಲೆಯನ್ನು ತಲ್ಲಣಗೊಳಿಸಿದೆ. ಸೀಸಿ ಟಿವಿ ಫೂಟೇಜ್ ಪಡೆದುಕೊಂಡಿರುವ ಪೊಲೀಸರು ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ.
ಘಟನೆಯ ಬೆನ್ನಲ್ಲೇ ಜಿಲ್ಲೆಯ ವಿವಿಧ ಪೇಟೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸಿ ಬಿಗು ಬಂದೋಬಸ್ತ್ ಕೈಗೊಂಡಿದ್ದಾರೆ.
0 comments:
Post a Comment