ಬಂಟ್ವಾಳ, ಜುಲೈ 03, 2022 (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪಪಡು ಗ್ರಾಮದ ತಲೆಮೊಗರು ನೇತ್ರಾವತಿ ನದಿಗೆ 5 ಮಂದಿ ಯುವಕತ ತಂಡ ಭಾನುವಾರ (ಜುಲೈ 3) ಸಂಜೆ ಈಜಲು ತೆರಳಿದ್ದು, ಈ ಪೈಕಿ ತಲೆಮೊಗರು ನಿವಾಸಿ ರುಕ್ಮಯ ಅವರ ಪುತ್ರ ಅಶ್ವಿಥ್ (19) ಮುಳುಗಿ ಮೃತಪಟ್ಟಿದ್ದು, ಮೃತದೇಹಕ್ಕಾಗಿ ರಾತ್ರಿವರೆಗೂ ಹುಡುಕಾಟ ಮುಂದುವರಿದಿದೆ.
ಇನ್ನುಳಿದ ಲಿಖಿತ್, ವಿಕೇಶ್ ಹಾಗೂ, ವಿಶಾಲ್ ಅವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಅಸ್ವಸ್ಥಗೊಂಡ ಹರ್ಷಿತ್ ಎಂಬಾತನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಅಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.
ಐವರು ಸ್ನೇಹಿತರು ಸಂಜೆ 4 ಗಂಟೆ ವೇಳೆಗೆ ತಲೆಮೊಗರು ನೇತ್ರಾವತಿ ನದಿಯಲ್ಲಿ ಈಜಲು ತೆರಳಿದ್ದು, ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದ್ದರಿಂದ ಅವಘಡ ಸಂಭವಿಸಿದೆ.
ಸ್ಥಳೀಯ ಯುವಕರಾದ ಹರೀಶ್, ಫಾರಿಶ್, ಅನ್ವರ್, ಝುಭೈರ್ ಹಾಗೂ ಶರತ್ ಅವರ ನೇತೃತ್ವದ ತಂಡ ಉಳಿದ ಯುವಕರನ್ನು ರಕ್ಷಿಸುವಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಶಾಸಕ ಯು ಟಿ ಖಾದರ್ ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಿ ಕರೆ ಸೂಕ್ತ ಚಿಕಿತ್ಸೆಗೆ ಸೂಚಿಸಿದ್ದಾರೆ. ಘಟನೆಯ ಬಗ್ಗೆ ತೀವ್ರ ಖೇದ ವ್ಯಕ್ತಪಡಿಸಿದ ಶಾಸಕ ಖಾದರ್ ನೀರಿನಲ್ಲಿ ಮುಳುಗಿದ ಯುವಕ ಅಶ್ವಿತ್ ಪತ್ತೆಗಾಗಿ ತಹಶೀಲ್ದಾರ್ ಹಾಗೂ ಪಾವೂರು, ಹರೇಕಳ, ಅಂಬ್ಲಮೊಗರು, ಉಳಿಯ, ಉಳ್ಳಾಲ ಮೊದಲಾದ ನದಿ ತೀರದ ಈಜುಪಟು ಯುವಕರಿಗೆ ಕೋರಿಕೊಂಡಿದ್ದಾರೆ.
ಇತರ ಯುವಕರನ್ನು ರಕ್ಷಿಸಿದ ಸ್ಥಳೀಯರ ತಂಡಕ್ಕೆ ಯು ಟಿ ಖಾದರ್ ಅಭಿನಂದನೆ ಸಲ್ಲಿಸಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್ಐ ಹರೀಶ್ ನೇತೃತ್ವದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನೀರು ಪಾಲಾದ ಯುವಕನ ಪತ್ತೆಗಾಗಿ ಸ್ಥಳೀಯ ಮುಳುಗು ತಜ್ಞ ಯುವಕರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳ ಮೂಲಕ ಹುಡುಕಾಟ ನಡೆಸಿದ್ದು, ರಾತ್ರಿವರೆಗೂ ಅಶ್ವಿತ್ ಪತ್ತೆಯಾಗಿಲ್ಲ.
ನದಿಯ ದಡದಲ್ಲೇ ಈ ದುರಂತ ನಡೆದಿದ್ದು, ತಲೆಮೊಗರು ನದಿ ಬದಿಯಲ್ಲಿ ನಡೆಯುತ್ತಿರುವ ನಿರಂತರ ಅಕ್ರಮ ಮರಳುಗಾರಿಕೆಯಿಂದಾಗಿ ಆಳ ಅರಿವಾಗದೆ ಈ ದುರಂತ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
0 comments:
Post a Comment