ಬಂಟ್ವಾಳ, ಜುಲೈ 04, 2022 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಭಾನುವಾರ ರಾತ್ರಿಯಿಂದ ಮತ್ತೆ ಮಳೆ ಬಿರುಸು ಪಡೆದುಕೊಂಡಿದ್ದು, ಭಾರೀ ಗಾಳಿ-ಮಳೆಯಾಗುತ್ತಿದೆ. ಗಾಳಿ-ಮಳೆಯಿಂದಾಗಿ ಮಳೆ ಹಾನಿ ಘಟನೆಗಳೂ ಮುಂದುವರಿದಿದೆ.
ಇಲ್ಲಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಸಮೀಪದ ಬಂಗ್ಲೆಗುಡ್ಡೆ ರೈತರ ಸೇವಾ ಸಹಕಾರಿ ಬ್ಯಾಂಕ್ ಮುಂಭಾದಲ್ಲಿ ಪಾಳು ಬಿದ್ದಿದ್ದ ದೊಡ್ಡಿಯೊಂದು ಸೋಮವಾರ ಸುರಿದ ಭಾರೀ ಮಳೆಗೆ ಧರೆಗೆ ಉರುಳಿದ್ದು, ಭಾರೀ ದುರಂತ ಅಲ್ಪದರಲ್ಲೇ ತಪ್ಪಿ ಹೋಗಿದೆ. ಜನ ವಾಸ್ತವ್ಯ ಪ್ರದೇಶವಾಗಿರುವ ಇಲ್ಲಿ ನಿತ್ಯವೂ ಜನ ಸಂಚಾರ ಇರುತ್ತದೆ. ಅಲ್ಲದೆ ಸಮೀಪದಲ್ಲೇ ಶ್ರೀ ಶಾರದಾ ಪ್ರೌಢಶಾಲೆ ಹಾಗೂ ಎಸ್ ಎಲ್ ಎನ್ ಪಿ ಆಂಗ್ಲ ಮಾಧ್ಯಮ ಶಾಲೆ ಇದ್ದು, ಈ ಶಾಲೆಗಳಿಗೆ ತೆರಳುವ ಸ್ಥಳೀಯ ವಿದ್ಯಾರ್ಥಿಗಳೂ ಇಲ್ಲಿ ಸದಾ ಸಂಚಾರ ಮಾಡುತ್ತಿರುತ್ತಾರೆ. ಅದೃಷ್ಟವಶಾತ್ ಜನ ಸಂಚಾರ ತೀರಾ ವಿರಳವಾಗಿರುವ ಮಧ್ಯಾಹ್ನ ಹಾಗೂ ಸಂಜೆ ಹೊತ್ತಿನ ಮಧ್ಯಭಾಗದ ಸಮಯದಲ್ಲಿ ಈ ದೊಡ್ಡಿಯ ಕಲ್ಲುಗಳು ಧರೆಗೆ ಉರುಳಿದ್ದರಿಂದಾಗಿ ಸಂಭಾವ್ಯ ಅಪಾಯ ಸ್ವಲ್ಪದರಲ್ಲೇ ತಪ್ಪಿ ಹೋಗಿದೆ. ದೊಡ್ಡಿ ಕುಸಿತದಿಂದ ಸ್ಥಳೀಯ ಮನೆಗಳಿಗೆ ತೆರಳುವ ದಾರಿ ಬಂದ್ ಆಗಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಅವರು ಭೇಟಿ ನೀಡಿದ ಪರಿಶೀಲನೆ ನಡೆಸಿದ್ದು, ತಕ್ಷಣ ತೆರವುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ನಾವೂರು ಗ್ರಾಮದ ನಿವಾಸಿ ವಿಲ್ಫ್ರೆಡ್ ಅವರ ವಾಸ್ತವ್ಯದ ಮನೆಗೆ ಮಳೆಯಿಂದಾಗಿ ಭಾಗಶಃ ಹಾನಿಯಾಗಿದೆ. ಕೆದಿಲ ಗ್ರಾಮದ ತಾಳಿ ಪಡುಪು ನಿವಾಸಿ ಕೆ ಅಬ್ದುಲ್ ಮಜೀದ್ ಅವರ ತಡೆಗೋಡೆ ಕುಸಿದು ಮನೆಗೆ ಹಾನಿಯಾಗಿರುತ್ತದೆ.
ನೇತ್ರಾವತಿ ನದಿ ನೀರಿನ ಮಟ್ಟ ಸೋಮವಾರ ಸಂಜೆ ವೇಳೆಗೆ 6.50 ಮೀಟರಿಗೇರಿದ್ದು, ಪ್ರವಾಹದ ಭೀತಿ ನದಿ ತೀರದ ನಿವಾಸಿಗಳನ್ನು ಕಾಡುತ್ತಿದೆ.
0 comments:
Post a Comment