ಬಂಟ್ವಾಳ, ಜುಲೈ 05, 2022 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಮಂಗಳವಾರವೂ ಎಡೆಬಿಡದೆ ಗಾಳಿ ಸಹಿತ ಬಿರುಸಿನ ಮಳೆಯಾಗುತ್ತಿದ್ದು, ಮುಂದಿನ ಕೆಲ ದಿನಗಳವರೆಗೂ ಮಳೆ ಬಿರುಸುಗೊಳ್ಳುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವ ಹಿನ್ನಲೆಯಲ್ಲಿ ಮುನ್ನಚ್ಚರಿಕಾ ಕ್ರಮವಾಗಿ ಶಾಲಾ-ಕಾಲೇಜಿಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ. ತಾಲೂಕಿನ ಜೀವ ನದಿ ನೇತ್ರಾವತಿ ಸಹಿತ ನೀರಿನ ಮೂಲಗಳು ಉಕ್ಕಿ ಹರಿಯುತ್ತಿದ್ದು, ನದೀ ಪಾತ್ರದ ಜನತೆಗೆ ಸ್ಥಳೀಯಾಡಳಿತಗಳು ಸೂಕ್ತ ಮುನ್ನಚ್ಚರಿಕಾ ಕ್ರಮ ವಹಿಸುವಂತೆ ಸೂಚಿಸಲಾಗಿದೆ.
ಶಾಲಾ-ಕಾಲೇಜುಗಳಿಗೆ ರಜೆ ಸಾರಲಾಗಿರುವ ಹಿನ್ನಲೆಯಲ್ಲಿ ಪೋಷಕರು ತಮ್ಮ ಮಕ್ಕಳು ಅನಗತ್ಯ ಕಾರ್ಯಗಳಿಗೆ ಹೊರತುಪಡಿಸಿದಂತೆ ಹೆಚ್ಚಿನ ಸಮಯ ಮನೆಯಲ್ಲೇ ಇರುವಂತೆ ನೋಡಿಕೊಳ್ಳುವಂತೆ ಸೂಚಿಸಲಾಗಿದ್ದು, ನದಿ, ತೋಡು ಮೊದಲಾದ ನೀರಿನ ಮೂಲಗಳ ಬಳಿ ಮಕ್ಕಳು ತೆರಳದಂತೆ ಸೂಚಿಸಲಾಗಿದೆ. ಮರಗಳು, ಪಾಳು ಕಟ್ಟಡಗಳು, ವಿದ್ಯುತ್ ಕಂಬಗಳು, ಪರಿವರ್ತಕಗಳು ಮೊದಲಾದ ಅಪಾಯಕಾರಿ ಸ್ಥಳಗಳತ್ತ ತೆರಳುವಾಗ ಸೂಕ್ತ ಮುನ್ನಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಈ ಎಲ್ಲಾ ಮುನ್ನಚ್ಚರಿಕಾ ಕ್ರಮಗಳ ಹೊರತಾಗಿಯೂ ಬಂಟ್ವಾಳ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಸಮೀಪದ ಆಲಡ್ಕ ಪಡ್ಪು ಎಂಬಲ್ಲಿ ಕಳೆದ ಹಲವು ವರ್ಷಗಳ ಹಿಂದೆ ಪುರಸಭೆ ವತಿಯಿಂದ ನಿರ್ಮಿಸಲಾಗಿರುವ ಬಾವಿಯೊಂದು ಪಾಳು ಬಿದ್ದಿದ್ದು, ಯಾವುದೇ ಮುನ್ನಚರಿಕಾ ಕ್ರಮಗಳಿಲ್ಲದೆ ಬಾಯಿ ತೆರೆದ ಸ್ಥಿತಿಯಲ್ಲಿದ್ದು, ಸ್ಥಳೀಯ ಮಕ್ಕಳು ಇದೇ ಬಾವಿಯ ಪಕ್ಕದಲ್ಲಿರುವ ಮೈದಾನದಲ್ಲಿ ನೀರಾಟವಾಡುತ್ತಿರುವ ಅಪಾಯಕಾರಿ ದೃಶ್ಯ ಮಂಗಳವಾರ ಕಂಡು ಬಂದಿದೆ. ಸಮೀಪದಲ್ಲೇ ತುಂಬಿ ಹರಿಯುವ ತೋಡು ಕೂಡಾ ಇದ್ದು ಅಪಾಯದ ಮುನ್ಸೂಚನೆ ಅರಿತ ಸ್ಥಳೀಯರು ಸ್ಥಳೀಯ ಗ್ರಾಮಕರಣಿಕರಿಗೆ ತಿಳಿಸಿದ ಹಿನ್ನಲೆಯಲ್ಲಿ ಅವರು ಪೊಲೀಸರಿಗೂ ಮಾಹಿತಿ ನೀಡಿದ್ದು, ಪೊಲೀಸ್ ತುರ್ತು ವಾಹನ ಮಂಗಳವಾರ ಮಧ್ಯಾಹ್ನದ ವೇಳೆಗೆ ರೌಡ್ಸ್ ನಡೆಸಿ ಮಕ್ಕಳದ ಪೋಷಕರಿಗೆ ಸೂಕ್ತ ಎಚ್ಚರಿಕೆ ನೀಡಿ ತೆರಳಿದ್ದಾರೆ. ಆದರೂ ಇಲ್ಲಿನ ತೆರೆದ ಬಾವಿಗೆ ತುರ್ತು ಸುರಕ್ಷಾ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಇಲಾಖೆ, ಅಧಿಕಾರಿಗಳು, ಜನಪ್ರತಿನಿಧಿಗಳ ಮುನ್ನಚರಿಕೆಗಿಂತಲೂ ತಮ್ಮ ಮಕ್ಕಳ ಜೀವ ರಕ್ಷಣೆ ಬಗ್ಗೆ ಪೋಷಕರು ಸ್ವತಃ ಮುಂಜಾಗ್ರತೆ ವಹಿಸಿಕೊಳ್ಳಬೇಲಾಗಿದೆ.
ತಾಲೂಕಿನ ಪುಣಚ ಗ್ರಾಮದ ಸುಣ್ಣಂಗಳ ನಿವಾಸಿ ವಾರಿಜ ಕೋಂ ನಾರಾಯಣ ನಾಯ್ಕ ಅವರ ವಾಸ್ತವ್ಯದ ಮನೆಗೆ ಮಳೆಯಿಂದಾಗಿ ತೀವ್ರ ಹಾನಿಯಾಗಿರುತ್ತದೆ. ಮಾಣಿ ಗ್ರಾಮದ ಪಲ್ಲತೀಲ ನಿವಾಸಿ ವಿಶ್ವನಾಥ ಮೂಲ್ಯ ಬಿನ್ ಜಿನ್ನಪ್ಪ ಮೂಲ್ಯ ಅವರ ವಾಸ್ತವ್ಯದ ಮನೆಯ ಮೇಲೆ ಗುಡ್ಡೆ ಜರಿದು ಬಿದ್ದು ಹಾನಿಯಾಗಿರುತ್ತದೆ.
ಸಂಗಬೆಟ್ಟು ಗ್ರಾಮದ ಕೆರೆಬಳಿ ನಿವಾಸಿ ಪಿ ಎಚ್ ಉಸ್ಮಾನ್ ಬಿನ್ ಅಹಮ್ಮದ್ ಅವರ ಮನೆಯ ಮುಂಭಾಗಕ್ಕೆ ತೆಂಗಿನ ಮರ ಬಿದ್ದು ಹಾನಿಯಾಗಿರುತ್ತದೆ. ಸಜಿಪಮುನ್ನೂರು ಗ್ರಾಮದ ನಂದಾವರ ದೇವಸ್ಥಾನ ರಸ್ತೆ ನಿವಾಸಿ ಮುಹಮ್ಮದ್ ಬಿನ್ ಯೂಸುಫ್ ಅವರ ಕಚ್ಚಾ ಮನೆ ಗೋಡೆ ಕುಸಿದು ಭಾಗಶಃ ಹಾನಿ ಸಂಭವಿಸಿದೆ.
ಸೋಮವಾರ ಸುರಿದ ಮಳೆಗೆ ಇಲ್ಲಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಸಮೀಪದ ಬಂಗ್ಲೆಗುಡ್ಡೆ ರೈತರ ಸೇವಾ ಸಹಕಾರಿ ಬ್ಯಾಂಕ್ ಮುಂಭಾದಲ್ಲಿ ಪಾಳು ದೊಡ್ಡಿ ಧರೆಗುರುಳಿದ ಪರಿಣಾಮ ಸ್ಥಳೀಯ ನಿವಾಸಿಗಳ ಕಾಲು ದಾರಿ ಬಂದ್ ಆಗಿದ್ದು, ಇದನ್ನು ಮಂಗಳವಾರ ಸ್ಥಳೀಯ ಪುರಸಭಾ ಕೌನ್ಸಿಲರ್ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಅವರ ನೇತೃತ್ವದಲ್ಲಿ ಜೆಸಿಬಿ ಬಳಸಿ ತೆರವುಗೊಳಿಸುವ ಕಾರ್ಯ ನಡೆಸಲಾಗಿದೆ.
ಮಂಗಳವಾರ ಮಧ್ಯಾಹ್ನದ ವೇಳೆಗೆ ಬಂಟ್ವಾಳ ನೇತ್ರಾವತಿ ನದಿ ನೀರಿನ ಮಟ್ಟ 7.2 ಮೀಟರ್ ಇದ್ದು, ಅಪಾಯದ ಮಟ್ಟದತ್ತ ಹರಿಯುತ್ತಿದೆ. ತಗ್ಗು ಪ್ರದೇಶಗಳ ಜನರನ್ನು ತೆರವುಗೊಳಿಸುವ ಹಾಗೂ ಮುಂಜಾಗ್ರತೆ ಕೈಗೊಳ್ಳವಂತೆ ಎಚ್ಚರಿಸುವ ಕಾರ್ಯ ಸ್ಥಳೀಯ ಕಂದಾಯ ಅಧಿಕಾರಿಗಳು ಮಾಡುತ್ತಿದ್ದಾರೆ. ಪ್ರವಾಹ ಪರಿಸ್ಥಿತಿ ತಲೆದೋರುವ ಲಕ್ಷಣ ಇರುವುದರಿಂದ ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿ-ಸಿಬ್ಬಂದಿಗಳು ಕೇಂದ್ರ ಸ್ಥಾನದಲ್ಲಿದ್ದು, ಜನರ ಪ್ರಾಣ-ಆಸ್ತಿ ರಕ್ಷಣೆಯ ಹೊಣೆ ಹೊತ್ತುಕೊಳ್ಳುವಂತೆ ಈಗಾಗಲೇ ತಾಲೂಕು ತಹಶೀಲ್ದಾರ್ ಡಾ ಸ್ಮಿತಾ ರಾಮು ಅವರು ಅಧೀನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದಾರೆ.
0 comments:
Post a Comment