ಬಂಟ್ವಾಳ, ಜುಲೈ 06, 2022 (ಕರಾವಳಿ ಟೈಮ್ಸ್) : ದಕ್ಷ ಹಾಗೂ ಅಕ್ರಮ ದಂಧೆಗಳಿಗೆ ಬ್ರೇಕ್ ಹಾಕಲು ಪ್ರಯತ್ನಿಸಿದ್ದ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಬಂಟ್ವಾಳ ಎಎಸ್ಪಿ ಶಿವಾಂಶು ರಜಪೂತ್ ಅವರ ವರ್ಗಾವಣೆ ರಾಜಕೀಯ ಪ್ರೇರಿತ ವರ್ಗಾವಣೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ಬಿ ಸಿ ರೋಡಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅಕ್ರಮ ಮರಳುಗಾರಿಕೆ, ಜುಗಾರಿ ದಂಧೆ ಹಾಗೂ ಗಣಿಗಾರಿಕೆ ಬಗ್ಗೆ ಕಠಿಣ ನಿಲುವು ಹೊಂದಿದ್ದ ಎಎಸ್ಪಿ ಶಿವಾಂಶು ರಜಪೂತ್ ಅವರನ್ನು ಆಡಳಿತ ಪಕ್ಷದ, ಸ್ಥಳೀಯ ಶಾಸಕರ ಬೆಂಬಲದಿಂದ ದಂಧೆಕೋರರ ಪರವಹಿಸಿ ಈ ವರ್ಗಾವಣೆಯನ್ನು ಮಾಡಲಾಗಿದೆ ಎಂದರು.
ಅಕ್ರಮ ದಂಧೆಗಳಿಗೆ ಕಡಿವಾಣ ಹಾಕುವ ಪ್ರಯತ್ನ ನಡೆಸಿದ ಏಕ ಮಾತ್ರ ಕಾರಣಕ್ಕೆ ರಾಜಕೀಯ ಪ್ರೇರಿತವಾಗಿ ಬಂಟ್ವಾಳ ಎಎಸ್ಪಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಬಿಜೆಪಿ ಅಧಿಕಾರಾವಧಿಯಲ್ಲಿ ಅಕ್ರಮ ಮರಳುಗಾರಿಕೆ, ಜುಗಾರಿ ದಂಧೆ ಹಾಗೂ ಅಕ್ರಮ ಗಣಿಗಾರಿಕೆ ನಿರಾತಂಕವಾಗಿ ಎಗ್ಗಿಲ್ಲದೆ ನಡೆಯುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗುವ ಅಧಿಕಾರಿಗಳ ಜಂಘಾಬಲವನ್ನೇ ಉಡುಗಿಸುವ ಕೆಲಸ ನಡೆಯುತ್ತಿದೆ ಎಂದ ಮಾಜಿ ಸಚಿವ ರೈ, ಧರ್ಮ, ಸಂಸ್ಕøತಿ ಬಗ್ಗೆ ವೇದಿಕೆ ಸಿಕ್ಕಾಗ ಗಂಟೆಗಟ್ಟಲೆ ಮಾತನಾಡುವ, ಸುಬಗರೆಂದು ಹೇಳಿಕೊಳ್ಳುವ ಬಿಜೆಪಿಗರ ಅಕ್ರಮ ದಂಧೆ ಬಗ್ಗೆ ಹೇಳುತ್ತಾ ಹೋದರೆ ಮುಗಿಸಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಕ್ರಮ ಜೂಜು ಕ್ಲಬ್ಬಿನಲ್ಲಿ ಚೂರಿ ಇರಿತ ಪ್ರಕರಣ ನಡೆದರೂ ಪೆÇಲೀಸ್ ಕಡತದಲ್ಲಿ ಅದಕ್ಕೆ ಬೇರೆ ಕಡೆ ಸ್ಥಳ ತೋರಿಸಲಾಗುತ್ತದೆ ಎಂದರೆ ಪೊಲೀಸರ ಕಾರ್ಯವೈಖರಿ ಬಗ್ಗೆ ಯಾವ ಮಟ್ಟಿನ ಹಸ್ತಕ್ಷೇಪ ಇದೆ ಎಂಬುದು ಸಾಕ್ಷಿ ಸಮೇತ ಸಾಬೀತಾಗುತ್ತಿದೆ ಎಂದ ರೈ ಹೆಂಗಸರ ಕರಿಮಣಿ ಪಣಕ್ಕಿಟ್ಟು ಜೂಜು ನಡೀತಿದ್ದರೂ, ಇದರ ವಿರುದ್ದ ಕ್ರಮ ಕೈಗೊಳ್ಳಲು ಶಾಸಕರು, ಪ್ರಭಾವೀ ರಾಜಕೀಯ ನಾಯಕರ ಸಂಬಂಧಿಕರು, ಅವರಿಗೆ ಬೇಕಾದವರು ಎಂಬ ಕಾರಣಕ್ಕೆ ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ ಎಂದರೆ ಇದರ ಪರಿಣಾಮ ಸಾರ್ವಜನಿಕರ ಮೇಲೆ ಬೀರುತ್ತದೆ ಎಂದರು.
ಪ್ರಭಾವಿ ರಾಜಕಾರಣಿಗಳ ಸಂಬಂಧಿಕರ ಅಕ್ರಮ ದಂಧೆಗೆ ಕಡಿವಾಣ ಹಾಕಲು ಪ್ರಯತ್ನ ನಡೆಸಿದ್ದೇ ದಕ್ಷ ಅಧಿಕಾರಿಗಳ ನಿರ್ದಾಕ್ಷಿಣ್ಯ ವರ್ಗಾವಣೆಗೆ ಆಗುತ್ತದೆ ಎಂದು ಗರಂ ಆದ ರೈ ಶಾಸಕರುಗಳ ಬೆಂಬಲದಿಂದ ನಡೆಯುವ ಅಕ್ರಮ ಮರಳುಗಾರಿಕೆಯಿಂದ ರಸ್ತೆಗಳು ವಾಹನ ಸಂಚಾರಕ್ಕೆ ಅಯೋಗ್ಯವಾಗುವಷ್ಟರ ಮಟ್ಟಿಗೆ ಹದಗೆಟ್ಟು ಹೋಗಿದೆ. ಆದರೂ ಇವರು ರಾಜಧರ್ಮ ಪಾಲಕರು ಎಂದು ಎದೆತಟ್ಟುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಬಿ ಎಂ ಅಬ್ಬಾಸ್ ಅಲಿ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪದ್ಮನಾಭ ರೈ, ಶುಭಾಶ್ಚಂದ್ರ ಶೆಟ್ಟಿ ಕುಳಾಲು, ಮುರಳಿಧರ ರೈ, ಉಮಾನಾಥ ಶೆಟ್ಟಿ, ಕೌಶಲ್ ಪ್ರಸಾದ್, ಪ್ರವೀಣ್ ರೋಡ್ರಿಗಸ್, ಮುಹಮ್ಮದ್ ಬಡಗನ್ನೂರು ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment