ಬಂಟ್ವಾಳ, ಜುಲೈ 07, 2022 (ಕರಾವಳಿ ಟೈಮ್ಸ್) : ನಿರಂತರವಾಗಿ ಸುರಿಯುತ್ತಿರುವ ಬಿರುಸಿನ ಮಳೆ ಕಾರಣದಿಂದಾಗಿ ಮನೆಯೊಂದರ ಮೇಲೆ ಗುಡ್ಡ ಕುಸಿದ ಭೀಕರ ದುರಂತ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದ ಮುಕ್ಕುಡ ಎಂಬಲ್ಲಿ ಬುಧವಾರ ಸಂಜೆ ವೇಳೆಗೆ ನಡೆದಿದ್ದು, ಮಣ್ಣಿನಡಿಯಲ್ಲಿ ಸಿಲುಕಿ ಓರ್ವ ಮೃತಪಟ್ಟರೆ ಉಳಿದ ಮೂವರನ್ನು ರಕ್ಷಿಸಲಾಗಿದೆ. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳೀಯ ನಿವಾಸಿ ಹೆನ್ರಿ ಕಾರ್ಲೊ ಅವರ ಮನೆಯ ತೋಟದ ಕೆಲಸದ ಕೇರಳ ರಾಜ್ಯದ ನಿವಾಸಿಗಳು ವಾಸವಾಗಿದ್ದ ಪ್ರತ್ಯೇಕ ಶೆಡ್ ಮೇಲೆ ಗುಡ್ಡ ಕುಸಿತ ಉಂಟಾಗಿ ಈ ದಾರುಣ ಘಟನೆ ಸಂಭವಿಸಿದೆ.
ಕೇರಳ ರಾಜ್ಯದ ಪಾಲಕ್ಕಾಡ್ ನಿವಾಸಿ ಬಿಜು (45) ಸಾವನ್ನಪ್ಪಿದ್ದು, ಕಣ್ಣೂರು ನಿವಾಸಿ ಜಾನಿ (44) ಮತ್ತು ಕೊಟ್ಟಾಯಂ ನಿವಾಸಿ ಬಾಬು (46) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲಪ್ಪುಝ ನಿವಾಸಿ ಸಂತೋಷ್ (46) ಎಂಬಾತನ ರಕ್ಷಣಾ ಕಾರ್ಯ ರಾತ್ರಿವರೆಗೂ ಮುಂದುವರಿದಿದೆ ಎಂದು ಜಿಲ್ಲಾ ಎಸ್ಪಿ ಋಷಿಕೇಶ್ ಭಗವಾನ್ ಸೋನಾವಣೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ, ಜಿಲ್ಲಾ ಎಸ್ಪಿ ಋಷಿಕೇಶ್ ಭಗವಾನ್ ಸೋನಾವಣೆ, ಬಂಟ್ವಾಳ ತಹಶೀಲ್ದಾರ್ ಡಾ ಸ್ಮಿತಾ ರಾಮು ಸಹಿತ ಕಂದಾಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಅಗ್ನಿಶಾಮಕ ಸಿಬ್ಬಂದಿಗಳು ಧಾವಿಸಿದ್ದು ಸ್ಥಳೀಯರ ಸಹಕಾರದೊಂದಿಗೆ ಜೆಸಿಬಿ ಬಳಸಿ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ.
0 comments:
Post a Comment