ಕಡಬ, ಜುಲೈ 22, 2022 (ಕರಾವಳಿ ಟೈಮ್ಸ್) : ಮುಸ್ಲಿಂ ಯುವತಿಯ ಹಿಂದೂ ಸ್ನೇಹಿತೆಯ ಗರ್ಭಿಣಿ ಸಹೋದರಿಗೆ ಬಿರಿಯಾನಿ ಕೊಂಡು ಹೋಗುವ ವೇಳೆ ಅಪಾರ್ಥ ಕಲ್ಪಿಸಿಕೊಂಡ ಯುವಕರ ತಂಡವೊಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಒಡ್ಡಿ ಮಾನಸಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಕಡಬ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.
ಕಡಬ ತಾಲೂಕು, ಕೊಯಿಲ ಗ್ರಾಮದ ಮಜಲ ನಿವಾಸಿ, ಟೈಲರ್ ವೃತ್ತಿಯ ಸಂಶೀನಾ (22) ಎಂಬವರು ಈ ಬಗ್ಗೆ ಠಾಣೆಗೆ ದೂರು ನೀಡಿದ್ದು, ತನ್ನ ಸ್ನೇಹಿತೆ ಕಾವ್ಯಳ ಅಕ್ಕ ಗರ್ಬಿಣಿಯಾಗಿದ್ದು ಬಿರಿಯಾನಿ ತಿನ್ನುವ ಆಸೆ ಇದ್ದ ಕಾರಣ ಕಾವ್ಯ ಮತ್ತು ನಾನು ಬಿರಿಯಾನಿ ತೆಗೆದುಕೊಂಡು ಹೋಗುವರೇ ಜುಲೈ 12 ರಂದು ಆಟೋ ರಿಕ್ಷಾದಲ್ಲಿ ಮನೆಗೆ ಬರುತ್ತಿರುವಾಗ ಆರೋಪಿಗಳಾದ ಸುದರ್ಶನ್ ಗೆಲ್ಗೋಡಿ, ಕೆ. ಪ್ರಶಾಂತ್ ಕೊಲ್ಯ, ತಮ್ಮು ಕಲ್ಕಡಿ, ಕೆ. ಪ್ರಸಾದ್ ಕೊಲ್ಯ ಹಾಗೂ ಇತರರು ಕಾರು ಮತ್ತು ಬೈಕಿನಲ್ಲಿ ಹಿಂಬಾಲಿಸಿ ಮನೆಯ ಮುಂದೆ ಬಂದು ಅಕ್ರಮ ಕೂಟ ಸೇರಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆವೊಡ್ಡಿ ಮಾನಸಿಕವಾಗಿ ಕಿರುಕುಳ ನೀಡಿರುತ್ತಾರೆ. ಅಕ್ರಮ ಕೂಟ ಸೇರಿಕೊಂಡು ಭಯವನ್ನುಂಟು ಮಾಡಿದ ಆರೋಪಿತರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಲಾಗಿದೆ.
ಈ ಬಗ್ಗೆ ಕಡಬ ಠಾಣಾ ಅಪರಾಧ ಕ್ರಮಾಂಕ 63/2022 ಕಲಂ 143, 147, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment