ಬಂಟ್ವಾಳ, ಜುಲೈ 01, 2022 (ಕರಾವಳಿ ಟೈಮ್ಸ್) : ತಾಲೂಕಿನ ಗೋಳ್ತಮಜಲು ನಿವಾಸಿ ಮುಹಮ್ಮದ್ ಇಸ್ಮಾಯಿಲ್ ಅವರ ಮನೆಯಲ್ಲಿ ದನಗಳನ್ನು ಅಕ್ರಮವಾಗಿ ಕಡಿದು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶುಕ್ರವಾರ ಮುಂಜಾನೆ ದಾಳಿ ನಡೆಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಆರೋಪಿಗಳಾದ ಮುಹಮ್ಮದ್ ಇಸ್ಮಾಯಿಲ್ (47) ಹಾಗೂ ಅವರ ಪುತ್ರ ಸಾಬಿತ್ ಹುಸೈನ್ (18) ಎಂಬವರನ್ನು ಬಂಧಿಸಿದ್ದಾರೆ.
ಮುಹಮ್ಮದ್ ಅವರ ಗೋಳ್ತಮಜಲು ಮನೆಯಲ್ಲಿ ದನಗಳನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು.
ವಿಕೋಪ ಪರಿಹಾರ ಹಾಗೂ ಬಕ್ರೀದ್ ಹಬ್ಬದ ಪ್ರಯುಕ್ತ ಪೊಲೀಸರು ವಿಶೇಷ ಗಸ್ತು ನಡೆಸುತ್ತಿದ್ದ ವೇಳೆ ಶುಕ್ರವಾರ ಮುಂಜಾನೆ ದೊರೆತ ಖಚಿತ ಮಾಹಿತಿಯಂತೆ ಪೊಲೀಸರು ಈ ದಾಳಿ ಸಂಘಟಿಸಿದ್ದಾರೆ.
ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ಮದಕ ಎಂಬಲ್ಲಿರುವ ಕದ ನಂಬ್ರ 1-39 ಎಂದು ಬರೆದಿರುವ ತಾರಸಿ ಮನೆಯ ಹಿಂಬದಿಯಲ್ಲಿ ತಂದೆ-ಮಗ ಕುಳಿತುಕೊಂಡು ದನದ ಮಾಂಸದ ತಲಾ 1 ಕೆಜಿಯ ಕಟ್ಟುಗಳನ್ನು ಕಟ್ಟುತ್ತಿದ್ದು, ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ್ದ ವೇಳೆ ಅವರನ್ನು ಹಿಡಿದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸುಮಾರು 21 ಸಾವಿರ ಮೌಲ್ಯದ ತಲಾ ಒಂದೊಂದು ಕೆಜಿಯ 80 ಕೆಜಿ ದನದ ಮಾಂಸ, ದನದ ಮಾಂಸ ಹಾಗೂ ದನ ಕಡಿಯಲು ಉಪಯೋಗಿಸಿದ ಮರದ ತುಂಡು, ಕತ್ತಿ, ತೂಕದ ಮಾಪನ ಹಾಗೂ 4500/- ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 65/2022 ರಂತೆ ಕಲಂ 4, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಮತ್ತು ಸಂರಕ್ಷಣಾ ಅಧಿನಿಯಮ 2020 ರಂತೆ ಪ್ರಕರಣ ದಾಖಲಾಗಿದೆ.
0 comments:
Post a Comment