ಬಂಟ್ವಾಳ, ಜುಲೈ 11, 2022 (ಕರಾವಳಿ ಟೈಮ್ಸ್) : ಪ್ರಸ್ತುತ ಅಧಿಕಾರ ಇಲ್ಲದಿದ್ದರೂ ಬಂಟ್ವಾಳವನ್ನು ಪ್ರತಿನಿಧಿಸುವ ಅವಕಾಶ ಎಂಟು ಬಾರಿ ಪಡೆದುಕೊಂಡು ಆರು ಬಾರಿ ಇಲ್ಲಿನ ಜನರ ಪರವಾಗಿ ವಿಧಾನಸಭೆಯಲ್ಲಿ ಪ್ರತಿನಿಧಿಸಿ ಕೆಲವೊಂದು ಇಲಾಖೆಯ ಸಚಿವರಾಗಿ ಜವಾಬ್ದಾರಿ ನಿಭಾಯಿಸಿದ್ದ ಮಾಜಿ ಸಚಿವ ಬಿ ರಮಾನಾಥ ರೈ ಅವರು ಈ ಕ್ಷೇತ್ರದ ಜನರ ಮೇಲಿನ ಋಣ ತೀರಿಸಲು ಜನ್ಮ ಜನ್ಮಾಂತರಗಳಿಂದಲೂ ಸಾಧ್ಯವಿಲ್ಲ ಹಾಗೂ ಜೀವನ ಪರ್ಯಂತ ಜನರ ಸೇವೆ ಮಾಡಿದರೂ ಕ್ಷೇತ್ರದ ಜನ ನನ್ನ ಮೇಲೆ ಇಟ್ಟಿರುವ ಪ್ರೀತಿ-ವಿಶ್ವಾಸದ ಋಣ ತೀರಿಸಲು ಸಾಧ್ಯವಿಲ್ಲ ಎಂಬ ಅವರ ಮಾತುಗಾರಿಕೆಯ ಬದ್ದತೆಯನ್ನು ಉಳಿಸಿಕೊಂಡು ಈ ಬಾರಿಯ ಭಾರೀ ಮಳೆಯಿಂದ ಉಂಟಾಗಿರುವ ಪ್ರಕೃತಿ ವಿಕೋಪದ ಸಂದರ್ಭ ಸಂಕಷ್ಟ ಎದುರಿಸುವ ಜನರ ಬಳಿ ಖುದ್ದಾಗಿ ಸಂಪರ್ಕಿಸಿ ಪರಿಸ್ಥಿತಿ ಪರಿಶೀಲನೆ ನಡೆಸುತ್ತಿದ್ದಾರಲ್ಲದೆ ಅಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ರಕ್ಷಣೆ ಹಾಗೂ ಪರಿಹಾರ ಕ್ರಮಕ್ಕಾಗಿ ಸೂಚಿಸಿದ್ದಾರೆ.
ಬಂಟ್ವಾಳ ತಾಲೂಕಿನ ಪ್ರಾಕೃತಿಕ ವಿಕೋಪಕ್ಕೆ ಒಳಗಾದ ವಿವಿಧ ಗ್ರಾಮಗಳಾದ ಪಂಜಿಕಲ್ಲು, ಅರಳ, ಕಾವಳಪಡೂರು, ಕಾಡಬೆಟ್ಟು, ಮೂಡನಡುಗೋಡು, ಕಾವಳಮೂಡೂರು ಹಾಗೂ ಬಂಟ್ವಾಳ ಪುರಸಭಾ ವ್ಯಾಪ್ತಿಯ ರಸ್ತೆ ಹಾಗೂ ಗುಡ್ಡ ಕುಸಿತಕ್ಕೊಳಗಾದ ಗೂಡಿನಬಳಿ ಟಿಪ್ಪು ರಸ್ತೆಗೆ ಮಾಜಿ ಸಚಿವ ಬಿ ರಮಾನಾಥ ರೈ ಅವರು ತಮ್ಮ ನಿಯೋಗದೊಂದಿಗೆ ಭೇಟಿ ನೀಡಿದ್ದಾರಲ್ಲದೆ ಎಡೆಬಿಡದೆ ಸುರಿಯುತ್ತಿರುವ ಮಳೆಯ ಮಧ್ಯೆಯೂ ನಿರಂತರವಾಗಿ ಸಂಚಾರ ನಡೆಸಿ ಜನರ ಮಧ್ಯೆ ಬೆರೆತು ಸಂಕಷ್ಟಕ್ಕೀಡಾದವರಿಗೆ ಸಮಾಧಾನ ನೀಡುತ್ತಾ ತಮ್ಮ ಕೈಯಲ್ಲಾಗುವ ರೀತಿಯ ಸಹಾಯ-ಸಹಕಾರ ನೀಡುತ್ತಾ ಬರುತ್ತಿದ್ದಾರೆ.
ಈ ಮಧ್ಯೆ ಮಾತನಾಡಿದ ಅವರು ಅಧಿಕಾರ ಯಾವತ್ತೂ ಶಾಶ್ವತ ಅಲ್ಲ. ಜನರ ಪ್ರೀತಿ-ಸ್ನೇಹದ ಜೊತೆಗೆ ಅವರ ಜೊತೆಗಿರುವ ಒಡನಾಟಗಳು ಶಾಶ್ವತವಾಗಿದ್ದು, ಅದನ್ನು ಜೀವನದುದ್ದಕ್ಕೂ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ಅಧಿಕಾರ ಇಲ್ಲದಿದ್ದರೂ ಜನಸೇವೆಗೆ ಮನಸ್ಸಿದ್ದರೆ ನಿರಂತರವಾಗಿ ಮಾಡಲು ಸಾಧ್ಯ. ನಾವೇ ಸ್ವತಃ ಆಡಂಬರದ ಜೀವನ ನಡೆಸುವುದಕ್ಕಿಂತಲೂ ಸಮಾಜದಲ್ಲಿ ನೊಂದವರ, ಬಡವರ, ಅಶಕ್ತರ ನೋವಿಗೆ ಸದಾ ಸ್ಪಂದಿಸುವ ಮೂಲಕ ಅವರ ಹೃದಯ ಸಂತೋಷದಿಂದ ಜೀವನದಲ್ಲಿ ಇನ್ನಷ್ಟು ನೆಮ್ಮದಿ, ಜೀವನ ಧನ್ಯತೆ ಪಡೆದುಕೊಳ್ಳಲು ಸಾಧ್ಯ ಇದೆ ಎಂಬುದನ್ನು ಸ್ವತಃ ನನ್ನ ಅನುಭವದಿಂದ ತಿಳಿದುಕೊಂಡಿದ್ದು, ಅದನ್ನು ಜೀವನದ ಕೊನೆ ನಿಮಿಷದವರೆಗೂ ಮಾಡುತ್ತೇನೆ. ಅದಕ್ಕೆ ಪ್ರಚಾರವಾಗಲೀ, ಪ್ರತಿಫಲಾಪೇಕ್ಷೆಯಾಗಲೀ ಮಾಡುತ್ತಿಲ್ಲ ಎಂದು ಪ್ರತಿಕ್ರಯಿಸಿದ್ದಾರೆ.
0 comments:
Post a Comment