ಬೆಂಗಳೂರು, ಜುಲೈ 25, 2022 (ಕರಾವಳಿ ಟೈಮ್ಸ್) : 2022-23ನೇ ಸಾಲಿನ ರಾಜ್ಯ ಸಿಇಟಿ ಪರೀಕ್ಷಾ ಫಲಿತಾಂಶ ಜುಲೈ 30ರಂದು ಪ್ರಕಟವಾಗಲಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವಥ ನಾರಾಯಣ ತಿಳಿಸಿದ್ದಾರೆ.
ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಕಳೆದ ಜೂನ್ 16 ರಿಂದ 18ರವರೆಗೆ ನಡೆದಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆ-ಸಿಇಟಿ) ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಜುಲೈ 17ರಂದು ಪ್ರಕಟಿಸುವುದಾಗಿ ತಿಳಿಸಿತ್ತು. ಫಲಿತಾಂಶ ಪ್ರಕಟಿಸಲು ಕೆಇಎ ಸಿದ್ಧವಿದ್ದರೂ ಸಿಬಿಎಸ್‍ಇ ಮತ್ತು ಐಸಿಎಸ್‍ಇ 12ನೇ ತರಗತಿ ಫಲಿತಾಂಶಗಳು ಪ್ರಕಟವಾಗುವುದು ತಡವಾದ ಹಿನ್ನೆಲೆಯಲ್ಲಿ ಸಿಇಟಿ ಫಲಿತಾಂಶ ಪ್ರಕಟಿಸಲು ವಿಳಂಬವಾಗಿದೆ.
https://cetonline.karnataka.gov.in/kea/ ವೆಬ್‍ಸೈಟ್‍ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ಸಿಇಟಿ ಬರೆದಿದ್ದ ಸಿಬಿಎಸ್‍ಇ ಮತ್ತು ಐಸಿಎಸ್‍ಇ ವಿದ್ಯಾರ್ಥಿಗಳು ಕೆಇಎ ವೆಬ್‍ಸೈಟಿನಲ್ಲಿ ತಮ್ಮ ಅಂಕಗಳನ್ನು ಜುಲೈ 26ರೊಳಗೆ ಅಪೆÇ್ಲೀಡ್ ಮಾಡಲು ಸೂಚಿಸಲಾಗಿದೆ ಎಂದು ಸಚಿವ ಅಶ್ವತ್ಥ್ ನಾರಾಯಣ ಟ್ವೀಟ್ ಮಾಡಿದ್ದಾರೆ.
ಇಂಜಿನಿಯರಿಂಗ್, ಕೃಷಿ, ಪಶು ವೈದ್ಯಕೀಯ, ಫಾರ್ಮಸಿ ಮುಂತಾದ ವೃತ್ತಿಪರ ಕೋರ್ಸುಗಳಿಗೆ ಜುಲೈ 16 ಮತ್ತು 17 ರಂದು ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಮತ್ತು 18 ರಂದು ಹೊರನಾಡು ಮತ್ತು ಗಡಿನಾಡು ಕನ್ನಡಿಗ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ನಡೆದಿತ್ತು. ಈ ಬಾರಿ ಒಟ್ಟು 2,16,525 ವಿದ್ಯಾರ್ಥಿಗಳು ಸಿಇಟಿಗೆ ನೊಂದಣಿ ಮಾಡಿಕೊಂಡಿದ್ದರು.
ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ ನಡೆಸುವ ಕಾಮೆಡ್-ಕೆ ಪರೀಕ್ಷೆಯನ್ನು ರದ್ದುಪಡಿಸಿ ಸಿಇಟಿ ವ್ಯವಸ್ಥೆಯಡಿ ತರಲು ಸರಕಾರ ತೀರ್ಮಾನಿಸಿದೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಧ್ಯಕ್ಷತೆಯಲ್ಲಿ ಅನುದಾನರಹಿತ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಒಕ್ಕೂಟ (ಕ್ಯುಪೇಕಾ) ಜತೆ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸದ್ಯ ಪ್ರತ್ಯೇಕವಾಗಿ ನಡೆಸುತ್ತಿರುವ ಕಾಮೆಡ್-ಕೆ ಪ್ರವೇಶ ಪರೀಕ್ಷೆಯನ್ನು ರದ್ದುಪಡಿಸಿ, ಸರಕಾರದ ಸಿಇಟಿ ವ್ಯವಸ್ಥೆಯಡಿ ತರಲಾಗುವುದು. ಇದಕ್ಕೆ ಕ್ಯುಪೇಕಾ ಆಸಕ್ತಿ ತೋರಿವೆ. ಈ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗುವುದು. ಮುಂದಿನ ವರ್ಷದಿಂದ ಒಂದೇ ಸಿಇಟಿ ಮಾಡಲಾಗುವುದು ಎಂದು ಸಚಿವ ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.
ಖಾಸಗಿ ಕಾಲೇಜುಗಳು ದುಬಾರಿ ಶುಲ್ಕದ ಮ್ಯಾನೇಜೆ ಮೆಂಟ್ ಸೀಟುಗಳಿಗಾಗಿ ತಾವೇ ನಡೆಸುತ್ತಿರುವ ಕಾಮೆಡ್-ಕೆ ಪರೀಕ್ಷೆಯನ್ನು ನಿಲ್ಲಿಸಲು ಮುಂದಾಗಿವೆ. ಇದರ ಸಾಧ್ಯತೆಗಳನ್ನು ಪರಿಶೀಲಿಸಲು ಉನ್ನತ ಸಮಿತಿ ರಚಿಸಲಾಗುವುದು. ಇದನ್ನು ಆಧರಿಸಿ ಕ್ಯುಪೇಕಾ ಜತೆ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ತೀರ್ಮಾನಿಸಲಾಗುವುದು. ಕಾಮೆಡ್-ಕೆ ಸ್ಥಗಿತಗೊಂಡರೆ ಸರಕಾರವು ಸಿಇಟಿ ಪರೀಕ್ಷೆ ನಡೆಸಲಿದೆ. ಇದರಲ್ಲಿ ವಿದ್ಯಾರ್ಥಿಗಳು ಪಡೆಯುವ ರ್ಯಾಂಕಿಂಗ್ ಆಧರಿಸಿ ಈಗಿನಂತೆಯೇ ಸೀಟು ಹಂಚಿಕೆ ಮಾಡಲಾಗುವುದು. ಸಿಇಟಿ ಪರೀಕ್ಷೆ ಒಂದೇ ನಡೆಸುವುದರಿಂದ ಪ್ರಸ್ತುತ ಆಗುತ್ತಿರುವ ಗೊಂದಲ ಮತ್ತು ಅಪವ್ಯಯ ಎರಡೂ ನಿವಾರಣೆಯಾಗಲಿವೆ ಎಂದು ಸಚಿವರು ತಿಳಿಸಿದ್ದಾರೆ.
0 comments:
Post a Comment