ಬಂಟ್ವಾಳ, ಜುಲೈ 07, 2022 (ಕರಾವಳಿ ಟೈಮ್ಸ್) : ತಾಲೂಕಿನ ಕಳ್ಳಿಗೆ ಗ್ರಾಮದ ಬೆಂಜನಪದವು ಸಮೀಪದ ಕರಾವಳಿ ಸೈಟ್ ನಿವಾಸಿ ಲಿಂಗಪ್ಪ ಪೂಜಾರಿ ಅವರ ಪತ್ನಿ ಸುಮಾರು 70 ವರ್ಷ ಪ್ರಾಯದ ಶ್ರೀಮತಿ ಗಿರಿಜಾ ಎಂಬ ವೃದ್ದೆಗೆ ಮಗ ಹರಿರಾಂ ಹಾಗೂ ಆತನ ಪತ್ನಿ ಪೂಜಾ ಅವರು ಊಟೋಪಚಾರ ನೀಡದೆ ಶೌಚಾಲಯದಲ್ಲಿ ಬಂಧಿಸಿ ಹಾಕಿ ಚಿತ್ರ ಹಿಂಸೆ ನೀಡಿದ ಬಗ್ಗೆ ಮಾಹಿತಿ ತಿಳಿದ ಹಿರಿಯ ನಾಗರಿಕ ಸಮಿತಿ ಬುಧವಾರ ವೃದ್ದೆಯನ್ನು ಶೌಚಗೃಹದಿಂದ ಬಂಧಮುಕ್ತಗೊಳಿಸಿದ್ದಾರೆ.
ವೃದ್ದೆ ಗಿರಿಜಾ ಅವರು ತಮ್ಮ ಮಗನಾದ ಹರಿರಾಂ ಮತ್ತು ಸೊಸೆ ಪೂಜಾ ಎಂಬವರೊಂದಿಗೆ ವಾಸವಾಗಿದ್ದು, 2020 ರ ಜನವರಿ 10 ರಂದು ಮನೆಯ ಜಗುಲಿಯಲ್ಲಿ ಕಾಲು ಜಾರಿ ಬಿದ್ದು ಗಾಯವಾಗಿರುತ್ತದೆ. ಆದರೆ ವೃದ್ದೆಯ ಗಾಯಕ್ಕೆ ಮಗ ಮತ್ತು ಸೊಸೆ ಚಿಕಿತ್ಸೆ ಕೊಡಿಸಿರುವುದಿಲ್ಲ, ಬಿದ್ದು ಉಂಟಾದ ನೋವಿನಿಂದ ನಡೆಯಲು ಸಾಧ್ಯವಾಗದೆ ಹಾಸಿಗೆಯಲ್ಲಿ ಮಲಗುವಂತಾದ ಅವರನ್ನು ಯಾವುದೇ ಆರೈಕೆ ಮಾಡದೆ ಅವರ ಮನೆಯ ಶೌಚ ಗೃಹದಲ್ಲಿ ಹಾಕಿ ಒಂದೇ ಹೊತ್ತು ಊಟ ಮತ್ತು ಚಾ ನೀಡುತ್ತಿದ್ದುದಲ್ಲದೆ, ತುಳು ಭಾಷೆಯಲ್ಲಿ ‘ಪರಬು ಸೈಪುನಿಲ ಇಜ್ಜಿ’, ಎಂಬುದಾಗಿ ಬೈಯುತ್ತಿದ್ದು, ಹಸಿವೆಯಿಂದ ಊಟ ಕೇಳಿದರೆ ‘ಪರಬು ನಿಕ್ಕ್ ವನಸ್ ಕೊರ್ಪುಜ್ಜಿ, ಮಣ್ಣ್ ತಿಂದುದು ಸೈಲ’ ಎಂದು ತುಳು ಭಾಷೆಯಲ್ಲಿ ಸೊಸೆಯು ಬೈಯುತ್ತಿದ್ದರು ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಬುಧವಾರ (ಜುಲೈ 6) ಮದ್ಯಾಹ್ನ 12 ಗಂಟೆಗೆ ಮಾಹಿತಿ ಪಡೆದ ಹಿರಿಯ ನಾಗರಿಕರ ಸಮಿತಿ ಪದಾಧಿಕಾರಿಗಳು ವೃದ್ದೆ ಗಿರಿಜಾ ಅವರನ್ನು ಭೇಟಿಯಾಗಿ ಶೌಚಗೃಹದಿಂದ ಮುಕ್ತಗೊಳಿಸಿ ಕರೆತಂದು ಉಪಚರಿಸಿದ ಬಳಿಕ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 68/2022 ಕಲಂ: 336, 504 ಜೊತೆ 34 ಐಪಿಸಿ ಮತ್ತು ಕಲಂ 24 ಮೈಂಟೆನೆನ್ಸ್ ಆಂಡ್ ವೆಲ್ಫೇರ್ ಆಫ್ ಪೇರೆಂಟ್ಸ್ ಆಂಡ್ ಸೀನಿಯರ್ ಸಿಟಿಜನ್ಸ್ ಆಕ್ಟ್ 2007 ರಂತೆ ಪ್ರಕರಣ ದಾಖಲಾಗಿದೆ.
0 comments:
Post a Comment