ಬೆಳ್ಳಾರೆ, ಜುಲೈ 28, 2022 (ಕರಾವಳಿ ಟೈಮ್ಸ್) : ಬೆಳ್ಳಾರೆ ಬಿಜೆಪಿ ಯುವ ಮೋರ್ಚಾ ಪ್ರಮುಖ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಇಬ್ಬರ ಬಂಧನ ಕುರಿತಂತೆ ಜಿಲ್ಲಾ ಎಸ್ಪಿ ಹೃಷಿಕೇಶ್ ಸೊನಾವಣೆ ಗುರುವಾರ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಜಿಲ್ಲಾ ಎಸ್ಪಿ ಬೆಳ್ಳಾರೆ ನಿವಾಸಿ ಶಫೀಕ್ (27) ಹಾಗೂ ಸವಣೂರು ನಿವಾಸಿ ಝಾಕಿರ್ (29) ಎಂಬವರ ಬಂಧನ ಖಚಿತಪಡಿಸಿದ್ದಾರೆ.
ಮಂಗಳವಾರ (ಜುಲೈ 26) ರಾತ್ರಿ ಸುಮಾರು 8.30 ಗಂಟೆಯ ಸಮಯಕ್ಕೆ ಸುಳ್ಯ ತಾಲೂಕು, ಬೆಳ್ಳಾರೆ ಗ್ರಾಮದ ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿರುವ ಅಕ್ಷಯ ಪ್ರೆಶ್ ಚಿಕನ್ ಫಾರ್ಮ್ ಮಾಲಕ ಪ್ರವೀಣ್ ನೆಟ್ಟಾರು ಎಂಬವರನ್ನು ತನ್ನ ಅಂಗಡಿ ಬಂದ್ ಮಾಡಿ ತೆರಳಲು ಸಿದ್ದತೆ ನಡೆಸುತ್ತಿದ್ದ ವೇಳೆ ದ್ವಿಚಕ್ರ ಬೈಕಿನಲ್ಲಿ ಬಂದ ಮೂರು ಮಂದಿ ಅಪರಿಚಿತ ದುಷ್ಕರ್ಮಿಗಳು ತಲವಾರು ದಾಳಿ ನಡೆಸಿ ಮಾರಣಾಂತಿಕ ದಾಳಿ ನಡೆಸಿದ್ದರು. ಕುತ್ತಿಗೆ ಮತ್ತು ತಲೆಯ ಭಾಗಕ್ಕೆ ಗಂಭೀರ ಗಾಯಗೊಂಡಿದ್ದ ಅವರನ್ನು ತಕ್ಷಣ ಪುತ್ತೂರು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಲಾಯಿತಾದರೂ ದಾರಿ ಮಧ್ಯೆ ಅವರು ಕೊನೆಯುಸಿರೆಳೆದಿದ್ದರು.
ಈ ಬಗ್ಗೆ ಪ್ರವೀಣ್ ಅವರ ಕೋಳಿ ಅಂಗಡಿಯಲ್ಲಿ ಕ್ಲೀನಿಂಗ್ ಕೆಲಸ ಮಾಡುವ ಪುತ್ತೂರು ತಾಲೂಕು, ಮಾಡಾವು-ಸಂತೋಷನಗರ ನಿವಾಸಿ ಮಧು ಕುಮಾರ್ ರಾಯನ್ ಅವರ ನೀಡಿದ ದೂರಿನಂತೆ ಬೆಳ್ಳಾರೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 63/2022 ಕಲಂ 302 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಹಂತಕರ ಪತ್ತೆಗೆ ಪೊಲೀಸರು ಪ್ರತ್ಯೇಕ 8 ತಂಡಗಳನ್ನು ರಚಿಸಿ ಕಾರ್ಯಾಚರಣೆಗಿಳಿದಿದ್ದರು.
0 comments:
Post a Comment