ವಾರದ ಅಂತರದಲ್ಲಿ ಇಬ್ಬರು ಯುವಕರ ಕೊಲೆಯಿಂದ ಆತಂಕಕ್ಕೆ ಒಳಗಾದ ಬೆಳ್ಳಾರೆ - Karavali Times ವಾರದ ಅಂತರದಲ್ಲಿ ಇಬ್ಬರು ಯುವಕರ ಕೊಲೆಯಿಂದ ಆತಂಕಕ್ಕೆ ಒಳಗಾದ ಬೆಳ್ಳಾರೆ - Karavali Times

728x90

27 July 2022

ವಾರದ ಅಂತರದಲ್ಲಿ ಇಬ್ಬರು ಯುವಕರ ಕೊಲೆಯಿಂದ ಆತಂಕಕ್ಕೆ ಒಳಗಾದ ಬೆಳ್ಳಾರೆ

ಬೆಳ್ಳಾರೆ, ಜುಲೈ 27, 2022 (ಕರಾವಳಿ ಟೈಮ್ಸ್) : ಕಳೆದ ಮಂಗಳವಾರ (ಜುಲೈ 19) ಸಂಜೆ ಬೆಳ್ಳಾರೆಯಲ್ಲಿ ಯುವಕರ ಮಧ್ಯೆ ನಡೆದ ಕ್ಷುಲ್ಲಕ ಹೊಡೆದಾಟದ ಬಳಿ ರಾತ್ರಿ ಪಂಚಾಯಿತಿಗೆ ನೆಪದಲ್ಲಿ ನಗರಕ್ಕೆ ಕರೆದ ತಂಡ ಮಸೂದ್ ಎಂಬ 18 ವರ್ಷ ಪ್ರಾಯದ ಯುವಕನ ತಲೆಗೆ ಸೋಡಾ ಬಾಟ್ಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿತ್ತು. ಕೋಮಾ ಸ್ಥಿತಿಯಲ್ಲಿ ಆಸ್ಪತ್ರೆಗೆ ಸೇರಿದ್ದ ಮಸೂದ್ ಚಿಕಿತ್ಸೆ ಫಲಿಸದೆ ಗುರುವಾರ (ಜುಲೈ 21) ಬೆಳಿಗ್ಗೆ ಮೃತಪಟ್ಟಿದ್ದರು. 

ಅಮಾಯಕ ಯುವಕನ ಮೇಲೆ ನಡೆದ ಗುಂಪು ಹಲ್ಲೆ ಹಾಗೂ ಹತ್ಯೆ ಬೆಳ್ಳಾರೆ ಸಹಿತ ಸುಳ್ಯ ಹಾಗೂ ಪುತ್ತೂರು ಪೇಟೆಗಳಲ್ಲಿ ಒಂದು ರೀತಿಯ ಆತಂಕಕ್ಕೆ ಕಾರಣವಾಗಿತ್ತು. ಈ ಒಂದು ಘಟನೆ ಜನರ ಮನಸ್ಸಿನಿಂದ ಮಾಸುವ ಮುನ್ನವೇ ವಾರದ ಅಂತರದಲ್ಲಿ ಅಂದರೆ ಈ ಮಂಗಳವಾರ (ಜುಲೈ 26) ರಾತ್ರಿ ಸುಮಾರು 8.30 ಗಂಟೆಯ ಸಮಯಕ್ಕೆ ಸುಳ್ಯ ತಾಲೂಕು, ಬೆಳ್ಳಾರೆ ಗ್ರಾಮದ ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿರುವ ಅಕ್ಷಯ ಪ್ರೆಶ್ ಚಿಕನ್ ಫಾರ್ಮ್ ಮಾಲಕ ಪ್ರವೀಣ್ ನೆಟ್ಟಾರು ಎಂಬವರನ್ನು ತನ್ನ ಅಂಗಡಿ ಬಂದ್ ಮಾಡಿ ತೆರಳಲು ಸಿದ್ದತೆ ನಡೆಸುತ್ತಿದ್ದ ವೇಳೆ ದ್ವಿಚಕ್ರ ಬೈಕಿನಲ್ಲಿ ಬಂದ ಮೂರು ಮಂದಿ ಅಪರಿಚಿತ ದುಷ್ಕರ್ಮಿಗಳು ತಲವಾರು ದಾಳಿ ನಡೆಸಿ ಮಾರಣಾಂತಿಕ ದಾಳಿ ನಡೆಸಿದ್ದಾರೆ. ಕುತ್ತಿಗೆ ಮತ್ತು ತಲೆಯ ಭಾಗಕ್ಕೆ ಗಂಭೀರ ಗಾಯಗೊಂಡಿದ್ದ ಅವರನ್ನು ತಕ್ಷಣ  ಪುತ್ತೂರು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಲಾಯಿತಾದರೂ ದಾರಿ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ. 

ಈ ಬಗ್ಗೆ ಪ್ರವೀಣ್ ಅವರ ಕೋಳಿ ಅಂಗಡಿಯಲ್ಲಿ ಕ್ಲೀನಿಂಗ್ ಕೆಲಸ ಮಾಡುವ ಪುತ್ತೂರು ತಾಲೂಕು, ಮಾಡಾವು-ಸಂತೋಷನಗರ ನಿವಾಸಿ ಮಧು ಕುಮಾರ್ ರಾಯನ್ ಅವರ ನೀಡಿದ ದೂರಿನಂತೆ ಬೆಳ್ಳಾರೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 63/2022 ಕಲಂ 302 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಹಂತಕರ ಪತ್ತೆಗೆ ಪೊಲೀಸರು ಪ್ರತ್ಯೇಕ ತಂಡಗಳನ್ನು ರಚಿಸಿ ಕಾರ್ಯಾಚರಣೆಗಿಳಿದಿದ್ದಾರೆ. 

ಬಿಜೆಪಿ ಯುವ ಮೋರ್ಚಾ ಹಾಗೂ ಸಂಘ ಪರಿವಾರದಲ್ಲಿ ಸಕ್ರಿಯವಾಗಿದ್ದ ಪ್ರವೀಣ್ ಅವರ ಹತ್ಯೆ ಬಳಿಕ ವಿವಿಧೆಡೆ ನೂರಾರು ಸಂಖ್ಯೆಯಲ್ಲಿ ಹಿಂದೂಪರ ಸಂಘಟನೆಗೆ ಸೇರಿದ ಕಾರ್ಯಕರ್ತರು ಧಿಕ್ಕಾರ, ಪ್ರತಿಭಟನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕಾರ್ಯಕರ್ತರು ಮೆರವಣಿಗೆ ಮೂಲಕ ಸಾಗಿಸಿ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದ್ದಾರೆ. ಈ ಮಧ್ಯೆ ಸಂಸದ, ಶಾಸಕರು ಹಾಗೂ ಬಿಜೆಪಿ ನಾಯಕರ ವಿರುದ್ದವೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಬುಧವಾರ ನಡೆದಿದೆ. ಮೃತದೇಹದ ಅಂತ್ಯ ಸಂಸ್ಕಾರದ ವೇಳೆ ಬೆಳ್ಳಾರೆ, ಸುಳ್ಯ, ಪುತ್ತೂರು, ಕಲ್ಲಡ್ಕ, ಬಿ ಸಿ ರೋಡು, ವಿಟ್ಲ ಮೊದಲಾದೆಡೆ ಹಿಂದೂ ಪರ ಕಾರ್ಯಕರ್ತರು ಸ್ವಯಂಪ್ರೇರಿತ ಬಂದ್‍ಗೆ ಕರೆ ನೀಡಿದ ಹಿನ್ನಲೆಯಲ್ಲಿ ನಗರಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲ ಬಸ್ ಸಂಚಾರವೂ ಅಸ್ತವ್ಯಸ್ತಗೊಂಡ ಹಿನ್ನಲೆಯಲ್ಲಿ ಕೆಲ ಶೈಕ್ಷಣಿಕ ಸಂಸ್ಥೆಗಳಿಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರಜೆ ನೀಡಲಾಗಿತ್ತು ಎಂದು ತಿಳಿದು ಬಂದಿದೆ. 

ಮಾನವ ಜೀವವೊಂದು ಅನ್ಯಾಯವಾಗಿ ಕೊಲೆಯಾದಾಗ ಆ ಬಗ್ಗೆ ಜಾತಿ-ಧರ್ಮ, ರಾಜಕೀಯ, ಮತದ ಹಿನ್ನಲೆಯಲ್ಲಿ ಗುರುತಿಸದೆ ಜನಪ್ರತಿನಿಧಿಗಳು ಯಾವುದೇ ಪ್ರಭಾವ ಬೀರದೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಪೊಲೀಸರಿಗೆ ಸೂಚಿಸಿದರೆ ಕೊಲೆ ಸರಣಿ ಮುಂದುವರಿಯುವುದನ್ನು ತಪ್ಪಿಸಲು ಕಷ್ಟವೇನಿಲ್ಲ. ಹಂತಕರಿಗೆ ಕಠಿಣ ಶಿಕ್ಷೆ ಆಗುವಂತೆ ವ್ಯವಸ್ಥೆ ಬೇಕಾದ ಎಲ್ಲಾ ಸನ್ನಿವೇಶಗಳನ್ನು ನಿರ್ಮಿಸಿಕೊಟ್ಟಾಗ ಸಮಾಜದಲ್ಲಿ ಉಂಟಾಗುವ ಆತಂಕಕ್ಕೆ ಕಡಿವಾಣ ಹಾಕಲು ಸಾಧ್ಯವಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಡುತ್ತಿದ್ದಾರೆ. 

ಯಾವುದೇ ಮತೀಯ ಅಥವಾ ರಾಜಕೀಯ ದ್ವೇಷದ ಕಾರಣಕ್ಕಾಗಿ ಕೊಲೆಯಾದರೂ ಕೆಲ ರಾಜಕಾರಣಿಗಳು, ಸಂಘಟನೆಗಳು ಸ್ವಾರ್ತ ಹಿತಸಾಧನೆ ಮಾಡುತ್ತಾರೆಯೇ ಹೊರತು ಕೊಲೆಯಾದವರ ಮನೆ ಮಂದಿಯ ಮನೋ ವೇದನೆಯನ್ನು ಅರ್ಥೈಸಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಆಕ್ರೋಶದ ಮಾತುಗಾರಿಕೆ ಜನರಿಂದ ಕೇಳಿ ಬರುತ್ತಿದೆ. 

  • Blogger Comments
  • Facebook Comments

0 comments:

Post a Comment

Item Reviewed: ವಾರದ ಅಂತರದಲ್ಲಿ ಇಬ್ಬರು ಯುವಕರ ಕೊಲೆಯಿಂದ ಆತಂಕಕ್ಕೆ ಒಳಗಾದ ಬೆಳ್ಳಾರೆ Rating: 5 Reviewed By: karavali Times
Scroll to Top