ಬಂಟ್ವಾಳ, ಜುಲೈ 25, 2022 (ಕರಾವಳಿ ಟೈಮ್ಸ್) : ಮಸೀದಿ ಆಡಳಿತ ಸಮಿತಿಗಳಲ್ಲಿ ಅಧಿಕಾರಗಿಟ್ಟಿಸುವ ಏಕಮಾತ್ರ ಉದ್ದೇಶಕ್ಕಾಗಿ ಮಹಾಸಭೆಗಳಿಗೆ ತೆರಳುವ, ಅಧಿಕಾರಕ್ಕಾಗಿ ತಮ್ಮ ಪರವಾದ ತಂಡಗಳನ್ನು ಕಟ್ಟಿಕೊಂಡು ವಿವಿಧ ಕಸರತ್ತು ನಡೆಸುವ ಚಾಳಿ ನಿಲ್ಲಬೇಕು. ಮಸೀದಿ ಆಡಳಿತ ಸಮಿತಿಯ ಮೂಲಕ ಜಮಾಅತಿನ ಪೂರ್ಣ ಸರ್ವೆ ನಡೆಸಿ ಜಮಾತಿನ ಒಳಗಿನ ಸಮಸ್ಯೆಗಳನ್ನು ಅಲ್ಲೇ ಇತ್ಯರ್ಥಪಡಿಸುವ ಸಮರ್ಥ ಆಡಳಿತ ಸಮಿತಿ ಪ್ರತಿ ಮೊಹಲ್ಲಾಗಳಲ್ಲೂ ಅಸ್ತಿತ್ವಕ್ಕೆ ಬರಬೇಕು ಎಂದು ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಜಿ ಮುಹಮ್ಮದ್ ಹನೀಫ್ ಗೋಳ್ತಮಜಲು ಅಭಿಪ್ರಾಯಟ್ಟರು.
ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ವತಿಯಿಂದ ಪಾಣೆಮಂಗಳೂರು ಸಾಗರ್ ಆಡಿಟೋರಿಯಂನಲ್ಲಿ ನಡೆದ ಬಂಟ್ವಾಳ ತಾಲೂಕು ಮಸ್ಜಿದ್ ಡೈರಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಮಾಅತ್ ಸಮಿತಿಗಳು ತಮ್ಮ ಜಮಾಅತ್ ವ್ಯಾಪ್ತಿಯ ಪ್ರತಿ ಕುಟುಂಬದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಅದರ ನಿರ್ವಹಣೆಯನ್ನೂ ಜಮಾಅತ್ ಮಟ್ಟದಲ್ಲೇ ಮಾಡುವ ಸಾಮಥ್ರ್ಯ ಹೊಂದಿದಾಗ ಮಸೀದಿಯ ಲೆಟರ್ ಹೆಡ್ ನೀಡಿ ವಿವಿಧ ಕಷ್ಟಗಳಿಗೆ ಜನರನ್ನು ಹಣ ಸಂಗ್ರಹಣೆಗಾಗಿ ಕಳುಹಿಸುವ ಸ್ಥಿತಿ ನಿರ್ಮೂಲವಾಗಲಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಶಾಫಿ ಸಅದಿ ಮಾತನಾಡಿ, ಮುಸ್ಲಿಮರು ಪಕ್ಷ ಯಾವುದೇ ಇರಲಿ, ಸಂಘಟನೆ ಯಾವುದೇ ಇರಲಿ ನಾವೆಲ್ಲರೂ ಸಮುದಾಯದ ಸಬಲೀಕರಣಕ್ಕಾಗಿ ಒಟ್ಟಾಗಿ ಒಗ್ಗಟ್ಟಿನ ಮೂಲಕ ಕಾರ್ಯಾಚರಿಸಿದರೆ ರಾಜಕೀಯವಾಗಿ, ಸಾಮಾಜಿಕವಾಗಿ ನ್ಯಾಯವನ್ನು ಪಡೆಯಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಖಾಝಿಗಳಾದ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್, ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಅಶ್ರಫ್ ಸಖಾಫಿ ಸವಣೂರು, ಅಬ್ದುಲ್ ಸಲಾಂ ಫೈಝಿ ನೆಹರುನಗರ, ತುಂಬೆ ಗ್ರೂಪ್ ಯುಎಇ ಘಟಕದ ಸ್ಥಾಪಕ ಡಾ ತುಂಬೆ ಮೊಯ್ದಿನ್, ದ ಕ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ನಿಯೋಜಿತ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಪ್ರಮುಖರಾದ ಮುಹಮ್ಮದ್ ಹಾಜಿ ಸಾಗರ್, ಹಾಜಿ ಪಿ ಎಸ್ ಅಬ್ದುಲ್ ಹಮೀದ್, ಬಿ ಎಂ ಅಬ್ಬಾಸ್ ಅಲಿ ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ಮಸ್ಜಿದ್ ಡೈರಿ ರಚನೆಯಲ್ಲಿ ಶ್ರಮಿಸಿದ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಹಾಗೂ ಸಂಘಟಕ ಪಿ ಮುಹಮ್ಮದ್ ಪಾಣೆಮಂಗಳೂರು ಅವರನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು. ಕಿಡ್ನಿ ರೋಗಿಗಳಿಗೆ ಸಹಾಯಧನ ವಿತರಿಸಲಾಯಿತು. ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ 625 ಪೂರ್ಣ ಅಂಕ ಪಡೆದ ತಾಲೂಕಿನ ವಿದ್ಯಾರ್ಥಿ ಶಾಝಿನ್ ಅಬ್ದುಲ್ ರಝಾಕ್ ಬೀರಾನ್ ಮೊಯಿದಿನ್ ಅವರನ್ನು ಅಭಿನಂದಿಸಲಾಯಿತು.
0 comments:
Post a Comment